ಬೆಂಗಳೂರು, (ಫೆಬ್ರವರಿ 19): ನಾಳೆಯಿಂದ ಬಸ್ ಇರುತ್ತೋ, ಇಲ್ವೋ ಎಂಬ ಆತಂಕದಲ್ಲಿದ್ದ ರಾಜ್ಯದ ಪ್ರಯಾಣಿಕರಿಗೆ ಸಾರಿಗೆ ನೌಕರರು ಸಿಹಿ ಸುದ್ದಿ. ನಾಳೆ (ಶುಕ್ರವಾರ) ಯಾವುದೇ ಸಾರಿಗೆ ಮುಷ್ಕರ (Transport Strike) ನಡೆಸದಿರಲು ನೌಕರರ ಕೂಟ ತೀರ್ಮಾನಿಸಿದೆ. ಇಂದು (ಫೆಬ್ರವರಿ 19) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ (ಜಂಟಿ ಕ್ರಿಯಾ ಸಮಿತಿ) ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಸರ್ಕಾರದ ಭರವಸೆಗಳು ಮತ್ತು ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು. ಅಂತಿಮವಾಗಿ, ಸಾರ್ವಜನಿಕರಿಗೆ ತೊಂದರೆ ಕೊಡುವುದು ಬೇಡ ಎಂಬ ಉದ್ದೇಶದಿಂದ ಸದ್ಯಕ್ಕೆ ಬಸ್ ಸಂಚಾರ ಬಂದ್ ಮಾಡದಿರಲು ನಿರ್ಧರಿಸಲಾಗಿದೆ.