Hampi Kannada University: ಹಂಪಿ ಕನ್ನಡ ವಿವಿಯಲ್ಲಿ ಆರ್ಥಿಕ ಸಂಕಷ್ಟ: ನೌಕರರ ಸಂಬಳಕ್ಕೂ ಪರದಾಟ! | Hampi Kannada University Crisis No Funds For Employee Salaries

Hampi Kannada University: ಹಂಪಿ ಕನ್ನಡ ವಿವಿಯಲ್ಲಿ ಆರ್ಥಿಕ ಸಂಕಷ್ಟ: ನೌಕರರ ಸಂಬಳಕ್ಕೂ ಪರದಾಟ! | Hampi Kannada University Crisis No Funds For Employee Salaries


ಹಂಪಿ ಕನ್ನಡ ವಿಶ್ವವಿದ್ಯಾಲಯವು ತೀವ್ರ ಆರ್ಥಿಕ ಮುಗ್ಗಟ್ಟಿನಿಂದಾಗಿ ತನ್ನ 130 ಹೊರಗುತ್ತಿಗೆ ನೌಕರರು ಸೇರಿದಂತೆ ಸಿಬ್ಬಂದಿಗೆ ಹಲವು ತಿಂಗಳುಗಳಿಂದ ವೇತನ ನೀಡಲು ವಿಫಲವಾಗಿದೆ. ಸರ್ಕಾರದ ಅನುದಾನ ಕೊರತೆಯು ವಿವಿಯ ದೈನಂದಿನ ನಿರ್ವಹಣೆ ಮತ್ತು ಸಂಶೋಧನಾ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ.

ಸಿ.ಕೆ. ನಾಗರಾಜ

ಹೊಸಪೇಟೆ: ನಾಡಿನ ಹೆಮ್ಮೆಯ ಹಂಪಿ ಕನ್ನಡ ವಿಶ್ವವಿದ್ಯಾಲಯ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ವಿವಿಯ 130 ಹೊರ ಗುತ್ತಿಗೆ ನೌಕರರು ವೇತನಕ್ಕಾಗಿ ಪರದಾಡುತ್ತಿದ್ದಾರೆ!

ನಾಡಿನ ಏಕೈಕ ಭಾಷಾ ಸಂಶೋಧನಾ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಯೊಂದಿಗೆ ಸ್ಥಾಪನೆಯಾಗಿರುವ ಕನ್ನಡ ವಿಶ್ವವಿದ್ಯಾಲಯ ನಿತ್ಯ ನಿರ್ವಹಣೆಗೆ ಅನುದಾನವಿಲ್ಲದೇ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ.

ಕಳೆದ ಒಂದು ವರ್ಷದಿಂದ ಸರ್ಕಾರದ ಅನುದಾನವಿಲ್ಲದೇ ವಿವಿ ತನ್ನ 130 ಹೊರಗುತ್ತಿಗೆ ನೌಕರರಿಗೆ ಸಕಾಲಕ್ಕೆ ಸಂಬಳ ನೀಡಲು ಸಾಧ್ಯವಾಗದೇ ಅಸಹಾಯಕವಾಗಿ ರಾಜ್ಯ ಸರ್ಕಾರದತ್ತ ಆಸೆಗಣ್ಣಿನಿಂದ ನೋಡುತ್ತಿದೆ.

ತಕ್ಷಣಕ್ಕೆ ₹3.15 ಕೋಟಿ:

ಹೊರಗುತ್ತಿಗೆ ನೌಕರರಿಗೆ 11 ತಿಂಗಳು ಮತ್ತು ತಾತ್ಕಾಲಿಕ ನೌಕರರಿಗೆ 6 ತಿಂಗಳು, ಅತಿಥಿ ಉಪನ್ಯಾಸಕರಿಗೆ 5 ತಿಂಗಳು ವೇತನ ನೀಡಿಲ್ಲ. ಈ ವೇತನಕ್ಕಾಗಿಯೇ ಒಟ್ಟು ₹3.15 ಕೋಟಿ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ನೀಡುತ್ತಾ ಬರಲಾಗಿದೆ. ಆದರೆ ಆರ್ಥಿಕ ಇಲಾಖೆ ಹಣ ಇಲ್ಲ ಎಂದು ಹೇಳಿ ಕೈಚೆಲ್ಲಿ ಕುಳಿತಿದೆ. ಮಾರ್ಚ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ನ ಮೇಲೆ ವಿವಿ ಕಣ್ಣು ನೆಟ್ಟಿದೆ.

ಇದೇ ತಿಂಗಳು 21ರಂದು ಬೆಂಗಳೂರಿನಲ್ಲಿ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಕುಂದುಕೊರತೆ ಸಭೆಯನ್ನು ರಾಜ್ಯಪಾಲರು ಕರೆದಿದ್ದಾರೆ. ಈ ಸಭೆಯಲ್ಲಿಯಾದರೂ ಕನ್ನಡ ವಿವಿ ಸಮಸ್ಯೆಗಳ ಬಗ್ಗೆ ಸ್ಪಲ್ಪಮಟ್ಟಿಗೆ ಪರಿಹಾರ ಸಿಗಬಹುದೇನೋ ಎಂದು ಎದುರು ನೋಡುತ್ತಿದ್ದಾರೆ.

ವಿವಿ ನೌಕರರ ಸಂಬಳಕ್ಕಾಗಿ ಸರ್ಕಾರ ಈ ಮೊದಲು ₹8-9 ಕೋಟಿ ನೀಡುತ್ತಿತ್ತು. ಆದರೆ ಈಗ ಕೇವಲ ₹3-4 ಕೋಟಿ ನೀಡುತ್ತಿದೆ. ಇದು ಯಾವುದಕ್ಕೂ ಸಾಲುತ್ತಿಲ್ಲ. ತಿಂಗಳಿಗೆ ₹45 ಲಕ್ಷ ತಾತ್ಕಾಲಿಕ ನೌಕರರಿಗೆ ಸಂಬಳಕ್ಕೆ ಬೇಕು. ವಿವಿಯ ನಿತ್ಯ ಬಳಕೆಗಾಗಿ ಮತ್ತು ಯೋಜನೆಗಳ ಖರ್ಚಿಗಾಗಿ ₹2-3 ಕೋಟಿ ಬೇಕು. ಈ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡುತ್ತಾ ಬಂದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.

ಸರ್ಕಾರ ಬಡವಾಗಿದೆಯೇ?

ಬೋಧಕರ ಕೊರತೆ ಎದುರಿಸುತ್ತಿರುವ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ. ಕನ್ನಡ ಭಾಷೆ, ಸಾಹಿತ್ಯ ಸೇರಿದಂತೆ ಕನ್ನಡ ನಾಡಿನ ಅಸ್ಮಿತೆ ಎತ್ತಿ ತೋರಿಸುವ ಶಿಖರದಂತಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರ ಆರ್ಥಿಕ ನೆರವನ್ನು ನೀಡದಷ್ಟು ಬಡವಾಗಿದೆಯೇ ಎನ್ನುವ ಪ್ರಶ್ನೆ ನಾಡಿನ ಚಿಂತಕರನ್ನು ಕಾಡುತ್ತಿದೆ.

ಫೆ.25ರಂದು ಕನ್ನಡ ವಿಶ್ವವಿದ್ಯಾಲಯ 34ನೇ ನುಡಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ನುಡಿ ಹಬ್ಬದಲ್ಲಿ ಭಾಗವಹಿಸುವ ಉನ್ನತ ಶಿಕ್ಷಣ ಸಚಿವರು ಮತ್ತು ರಾಜ್ಯಪಾಲರು ಈ ಕುರಿತು ಏನಾದರೂ ಭರವಸೆ ನೀಡುವರೋ ಕಾದು ನೋಡಬೇಕಾಗಿದೆ.

ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಧದಷ್ಟು ಅಧ್ಯಾಪಕರು ನಿವೃತ್ತಿಯಾಗಿದ್ದಾರೆ. ಇನ್ನು ಮೂರು ವರ್ಷದಲ್ಲಿ ಶೇ.80 ಅಧ್ಯಾಪಕರು ನಿವೃತ್ತಿಯಾಗಲಿದ್ದಾರೆ. ಇದು ಸಂಶೋಧನಾ ವಿಶ್ವವಿದ್ಯಾಲಯ ಆಗಿರುವುದರಿಂದ ಖಾಯಂ ಅಧ್ಯಾಪಕರ ನೇಮಕಾತಿ ಮಾಡಿಕೊಳ್ಳಬೇಕು ಎನ್ನುತ್ತಾರೆ ಹಂಪಿ ಕನ್ನಡ ವಿವಿ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ. 

YouTube video player



Source link

Leave a Reply

Your email address will not be published. Required fields are marked *