
ಅಣ್ಣಾವ್ರು ಅಭಿಮಾನಿಗಳನ್ನೇ ದೇವರೆಂದರು. ಈಗ ದೇವರನ್ನೇ ದೂರುವ ಮೂಲಕ ಕ್ರೇಜಿ ಸ್ಟಾರ್ ಚಿತ್ರರಸಿಕರಿಗೆ ಬೇಸರ ಮಾಡಿದ್ದಾರೆ.
ರವಿಚಂದ್ರನ್ ಕನ್ನಡ ಚಿತ್ರರಂಗದ ಪಾಲಿಗೆ ಸಿನಿಮಾಂತ್ರಿಕ. ಬೆಳ್ಳಿತೆರೆಗೆ ಹೊಸ ವಿನ್ಯಾಸ ತಂದವರು, ಸಿನಿಮಾ ಮೇಕಿಂಗ್ ಪ್ರಕ್ರಿಯೆಗೆ ಹೊಸ ರೂಪ ಕೊಟ್ಟವರು. ಕಂಡ ಕನಸನ್ನು ನನಸಾಗಿಸಿಕೊಂಡವರು. ಸೋತರು, ಗೆದ್ದರೂ, ಮೈಕೊಡವಿಕೊಂಡು ಮತ್ತೆ ಮತ್ತೆ ಸಿನಿಮಾದಲ್ಲೇ ಮುಳುಗೆದ್ದವರು.
ಕ್ರೇಜಿ ಸ್ಟಾರ್ ರವಿಚಂದ್ರನ್ ಪ್ರಯೋಗಶೀಲರು ಎಂಬುದು ನಿಸ್ಸಂಶಯವಾಗಿ ನಿಜ. ಹೀಗೂ ಸಿನಿಮಾ ಮಾಡಲು ಸಾಧ್ಯವಾ ಎಂಬ ಪ್ರಶ್ನೆಗೆ ‘ಪ್ರೇಮಲೋಕ’ದ ಮೂಲಕ ಉತ್ತರ ಕೊಟ್ಟರು.
ಪ್ರಯೋಗ ಅನ್ನೋದು ವೆರಿ ರಿಸ್ಕಿ ಪ್ರಯತ್ನ. ಅದರಲ್ಲಿ ಯಶಸ್ಸು, ಸೋಲು ಎರಡು ದೊಡ್ಡ ಪ್ರಮಾಣದಲ್ಲಿಯೇ ಎದುರಾಗಬಹುದು. ಅದಕ್ಕೆ ದೊಡ್ಡ ಉದಾಹರಣೆ ಆ ಕಾಲದಲ್ಲಿಯೇ ನಾನಾ ಭಾಷೆಯಲ್ಲಿ ಆಯಾ ಚಿತ್ರರಂಗದ ಸ್ಟಾರ್ ಕಾಸ್ಟ್ ಇಟ್ಕೊಂಡು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ‘ಶಾಂತಿ ಕ್ರಾಂತಿ’. ರವಿಚಂದ್ರನ್, ರಜನೀಕಾಂತ್, ನಾಗಾರ್ಜುನ ಮುಖ್ಯ ಭೂಮಿಕೆಯಲ್ಲಿ ತಯಾರಾದ ಕನ್ನಡ, ತೆಲುಗು, ಹಿಂದಿ ಮತ್ತು ತಮಿಳು ಚಿತ್ರಗಳು ದೊಡ್ಡ ಯಶಸ್ಸು ಕಾಣಲಿಲ್ಲ. ಆ ಸೋಲು ಕೊಟ್ಟ ಹೊಡೆತ ಬಹುವರ್ಷದವರೆಗೆ ಕಾಡಿತು.