ಕೊಪ್ಪಳದ ಪ್ರಸಿದ್ಧ ಹುಲಿಗೆಮ್ಮ ದೇವಸ್ಥಾನ: ಕೋಟಿ ಕೋಟಿ ಆದಾಯವಿದ್ದರೂ ಬಯಲಲ್ಲೇ ಸ್ನಾನ, ಬಹಿರ್ದೆಸೆ! | Devotees Face Severe Lack Of Basic Facilities At Huligemma Temple Despite Crores In Donations Koppal

ಕೊಪ್ಪಳದ ಪ್ರಸಿದ್ಧ ಹುಲಿಗೆಮ್ಮ ದೇವಸ್ಥಾನ: ಕೋಟಿ ಕೋಟಿ ಆದಾಯವಿದ್ದರೂ ಬಯಲಲ್ಲೇ ಸ್ನಾನ, ಬಹಿರ್ದೆಸೆ! | Devotees Face Severe Lack Of Basic Facilities At Huligemma Temple Despite Crores In Donations Koppal



ಕೊಪ್ಪಳದ ಪ್ರಸಿದ್ಧ ಹುಲಿಗೆಮ್ಮ ದೇವಸ್ಥಾನ: ಕೋಟಿ ಕೋಟಿ ಆದಾಯವಿದ್ದರೂ ಬಯಲಲ್ಲೇ ಸ್ನಾನ, ಬಹಿರ್ದೆಸೆ! | Devotees Face Severe Lack Of Basic Facilities At Huligemma Temple Despite Crores In Donations Koppal

ಕೊಪ್ಪಳದ ಪ್ರಸಿದ್ಧ ಹುಲಿಗೆಮ್ಮ ದೇವಸ್ಥಾನವು ಕೋಟ್ಯಂತರ ರೂಪಾಯಿ ಆದಾಯ ಹೊಂದಿದ್ದರೂ, ಇಲ್ಲಿಗೆ ಬರುವ ಲಕ್ಷಾಂತರ ಭಕ್ತರಿಗೆ ಶೌಚಾಲಯ ಮತ್ತು ಸ್ನಾನಘಟ್ಟಗಳಂತಹ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲ. ದಶಕಗಳಿಂದ ಅಭಿವೃದ್ಧಿ ಯೋಜನೆಗಳು ನನೆಗುದಿಗೆ ಬಿದ್ದಿದೆ.

ವರದಿ: ಸೋಮರಡ್ಡಿ ಅಳವಂಡಿ

ಕೊಪ್ಪಳ: ನಿತ್ಯವೂ ಹತ್ತಾರು ಸಾವಿರ ಭಕ್ತರು, ವಾರದ ದಿನ 25-30 ಸಾವಿರ ಭಕ್ತರು, ಪ್ರತಿ ಹುಣ್ಣಿಮೆಗೆ ಲಕ್ಷಗಟ್ಟಲೇ ಭಕ್ತರು ಆಗಮಿಸುತ್ತಾರೆ. ಅಷ್ಟೇ ಯಾಕೆ ಕೇವಲ 41 ದಿನಗಳಲ್ಲಿ ಕಾಣಿಕೆಯ ಹುಂಡಿ ಭರ್ತಿಯಾಗಿ ಕೋಟಿಗೂ ಅಧಿಕ ಹಣ, ಕೆಜಿಗಟ್ಟಲೇ ಬಂಗಾರ ಬಂದಿದೆ. ಇಷ್ಟಾದರೂ ಹುಲಿಗೆಮ್ಮ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸ್ನಾನ, ಬಹಿರ್ದೆಸೆಗೆ ಬಯಲೇ ಗತಿಯಾಗಿದೆ!

ಕಳೆದ ಹತ್ತಾರು ವರ್ಷಗಳಿಂದ ಭಕ್ತರು ಕೊಟ್ಟಿದ್ದೇ ಬರೋಬ್ಬರಿ ₹80 ಕೋಟಿಗೂ ಅಧಿಕ ಹಣ ಬ್ಯಾಂಕಿನಲ್ಲಿ ಕೊಳೆಯುತ್ತಿದೆ. ಆದರೂ ಕನಿಷ್ಠ ಮಾನ ಮುಚ್ಚುವ ಶೌಚಾಲಯ, ಸ್ನಾನಘಟ್ಟ ನಿರ್ಮಾಣ ಮಾಡದೆ ಇರುವುದು ತೀವ್ರ ಟೀಕೆಗೆ ಗುರಿಯಾಗಿದೆ.

ವಾರ್ಷಿಕವಾಗಿ ಬರೋಬ್ಬರಿ ಕೋಟಿಗೂ ಅಧಿಕ ಭಕ್ತರು ಬಂದು ಹೋಗುತ್ತಾರೆ. ವಿಶೇಷ ಹುಣ್ಣಿಮೆಯಲ್ಲಿ ನಾಲ್ಕಾರು ಲಕ್ಷ ಭಕ್ತರು ಆಗಮಿಸುತ್ತಾರೆ. ಜಾತ್ರೆಯ ವೇಳೆಯಲ್ಲಿ 8-10 ಲಕ್ಷ ಭಕ್ತರು ಆಗಮಿಸುವ ಹುಲಿಗೆಮ್ಮ ದೇವಸ್ಥಾನದಲ್ಲಿ ಮಾತ್ರ ಕನಿಷ್ಠ ಮೂಲಭೂತ ಸೌಕರ್ಯ ಇಲ್ಲ.

ತುಂಗಭದ್ರಾ ನದಿ ದಡದಲ್ಲಿಯೇ ಹುಲಿಗೆಮ್ಮ ದೇವಸ್ಥಾನ

ಭಕ್ತರು ಬಸ್ಸು, ರೈಲು ಸೇರಿದಂತೆ ವಿವಿಧ ಸಾರಿಗೆಯ ಮೂಲಕ ಶ್ರೀಹುಲಿಗೆಮ್ಮ ದೇವಸ್ಥಾನಕ್ಕೆ ಆಗಮಿಸುತ್ತಾರೆ. ರಾಷ್ಟ್ರೀಯ ಹೆದ್ದಾರಿಯ ಬಳಿ ಬಿಸಿಲಲ್ಲಿ, ಕತ್ತಲಲ್ಲಿ ಭಕ್ತರು ಕೂರುವುದಕ್ಕೂ ವ್ಯವಸ್ಥೆ ಇಲ್ಲದೆ ಹೆದ್ದಾರಿಯ ಬಳಿಯೇ ವಾಹನಕ್ಕಾಗಿ ನಿಂತಿರುತ್ತಾರೆ. ಬಸ್ ನಿಲ್ದಾಣವನ್ನೂ ನಿರ್ಮಾಣ ಮಾಡರುವುದು ಅಚ್ಚರಿ ಮೂಡಿಸಿದೆ.

ತುಂಗಭದ್ರಾ ನದಿ ದಡದಲ್ಲಿಯೇ ಹುಲಿಗೆಮ್ಮ ದೇವಸ್ಥಾನ ಇದ್ದರೂ ಭಕ್ತರು ಸ್ನಾನ ಮಾಡುವುದಕ್ಕೆ ಸೂಕ್ತ ವ್ಯವಸ್ಥೆ ಇಲ್ಲ. ನದಿಯ ದಡದಲ್ಲಿ ಪ್ರಾಣಾಪಾಯದಿಂದ ಸ್ನಾನ ಮಾಡುತ್ತಾರೆ. ಅಷ್ಟೇ ಅಲ್ಲ, ಬೇಸಿಗೆಯಲ್ಲಿ ದುರ್ವಾಸನೆ ಬೀರುವ ನೀರಿನಲ್ಲಿಯೇ ಸ್ನಾನ ಮಾಡಿ ಧನ್ಯತೆ ವ್ಯಕ್ತಪಡಿಸುತ್ತಾರೆ.

ಹುಲಿಗೆಮ್ಮ ದೇವಸ್ಥಾನ ಅಭಿವೃದ್ಧಿ ಮಂಡಳಿ ಇದ್ದರೂ ಪ್ರಯೋಜನ ಇಲ್ಲದಂತೆ ಆಗಿದೆ. ಬರುವ ಭಕ್ತರಿಗೆ ಸ್ನಾನ, ಬರ್ಹಿದೆಸೆಗೆ ಗೌರವಯುತ ವ್ಯವಸ್ಥೆ ಇಲ್ಲ. ಸುಲಭ ಶೌಚಕ್ಕೂ ಅಚ್ಚುಕಟ್ಟಾದ ವ್ಯವಸ್ಥೆ ಇಲ್ಲದೆ ಇರುವುದರಿಂದ ಭಕ್ತರಿಗೆ ಎಲ್ಲದಕ್ಕೂ ಬಯಲೇ ಗತಿ ಎನ್ನುವಂತಾಗಿದೆ.

ದೇವಸ್ಥಾನ ಸುತ್ತಲಿನ ಪೊದೆಯ ಮರೆಯಲ್ಲಿ ಭಕ್ತರು ಬಹಿರ್ದೆಸೆಗೆ ಹೋಗುವ ಕರ್ಮ ಹೇಳತೀರದು. ಸುತ್ತಲು ನಾಲ್ಕಾರು ಜನರು ನಿಂತುಕೊಂಡು, ಮರೆಮಾಡಿಕೊಂಡು ಮಹಿಳೆಯರು ಶೌಚ ಮಾಡಬೇಕಾದ ಪರಿಸ್ಥಿತಿ ಇದೆ.

ದಶಕದಿಂದ ನನೆಗುದಿಗೆ: 

ಹುಲಿಗೆಮ್ಮ ದೇವಸ್ಥಾನವನ್ನು ಮಾಸ್ಟರ್ ಪ್ಲಾನ್ ಅಡಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆ ಹತ್ತಾರು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಇದು ಹಾಳಾಗಿ ಹೋಗಲಿ, ಯಾವಾಗಾದರೂ ಆಗಲಿ, ಬಂದವರು ಗೌರವಯುತವಾಗಿ ಸ್ನಾನ, ಶೌಚಕ್ಕಾದರೂ ವ್ಯವಸ್ಥೆ ಮಾಡಿ ಎನ್ನುತ್ತಾರೆ ಮಹಾರಾಷ್ಟ್ರದಿಂದ ಬಂದಿದ್ದ ಭಕ್ತೆ ನಯನಾ.

ಕೇವಲ 41 ದಿನಗಳಲ್ಲಿಯೇ ಕಾಣಿಕೆ ಹುಂಡಿ ಭರ್ತಿಯಾಗಿದೆ, ಕೋಟಿಗೂ ಅಧಿಕ ಹಣ ಇದೆ. ಅಷ್ಟೇ ಅಲ್ಲ ಕೆಜಿಗಟ್ಟಲೇ ಬಂಗಾರ, ಬೆಳ್ಳಿ ಭಕ್ತರು ಕಾಣಿಕೆ ಹುಂಡಿಯಲ್ಲಿ ಹಾಕಿದ್ದಾರೆ. ಕಳೆದ ಹತ್ತು ವರ್ಷಗಳಿಂದ ₹70-80 ಕೋಟಿಗೂ ಅಧಿಕ ಹಣ ಹಾಗೂ ಕೆಜಿಗಟ್ಟಲೇ ಬಂಗಾರ ಮತ್ತು ಬೆಳ್ಳಿ ದೇವಸ್ಥಾನ ದ ಖಾತೆಯಲ್ಲಿ ಇದೆ. ಆದರೂ ದೇವಾಲಯದ ವ್ಯಾಪ್ತಿಯಲ್ಲಿ ಕನಿಷ್ಠ ಅಭಿವೃದ್ಧಿ ಆಗುತ್ತಿಲ್ಲ, ಮೂಲಭೂತ ಸೌಲಭ್ಯವೂ ಇಲ್ಲ. ಸಾರಿಗೆ ವ್ಯವಸ್ಥೆ, ಬಸ್‌ ತಂಗುದಾಣದ ಸಮರ್ಪಕ ವ್ಯವಸ್ಥೆ ಕಲ್ಪಿಸಿದಲ್ಲಿ ಬರುವ ಭಕ್ತರ ಸಂಖ್ಯೆ ಹೆಚ್ಚಾಗಲಿದೆ ಎಂದು ಭಕ್ತರೇ ಹೇಳುತ್ತಾರೆ.

ಶ್ರೀ ಕ್ಷೇತ್ರ ಹುಲಿಗೆಮ್ಮ ದೇವಸ್ಥಾನದಲ್ಲಿ ಆಡಳಿತ ಮಂಡಳಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಶೌಚಾಲಯ ಮತ್ತು ಸ್ನಾನ ಗೃಹ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲಿಯೇ ನಿರ್ಮಾಣವಾಗಲಿವೆ ಎಂದು ಕೊಪ್ಪಳ ಡಿಸಿ ಡಾ.ಸುರೇಶ ಬಿ.ಇಟ್ನಾಳ ತಿಳಿಸಿದ್ದಾರೆ.

ಹುಲಿಗೆಮ್ಮ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ವಿಪರೀತ ಹೆಚ್ಚಳವಾಗಿದ್ದು, ಅದಕ್ಕೆ ತಕ್ಕಂತೆ ಮೂಲಭೂತ ಸೌಕರ್ಯ ಹೆಚ್ಚಿಸುವ ಅಗತ್ಯವಿದೆ. ಮಾಸ್ಟರ್ ಪ್ಲಾನ್ ಅಡಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *