![]()
Punch the monkey viral video: ಜಪಾನ್‌ನ ಇಚಿಕಾವಾ ಮೃಗಾಲಯದ ‘ಪಂಚ್’ ಎಂಬ ಆರು ತಿಂಗಳ ಮರಿ ಮಂಗ ಈಗ ಇಡೀ ಜಗತ್ತಿನ ಗಮನ ಸೆಳೆದಿದೆ. ಹುಟ್ಟಿದ ಕೂಡಲೇ ತಾಯಿಯಿಂದ ದೂರವಾದ, ತನ್ನದೇ ಗುಂಪಿನಿಂದ ನಿರ್ಲಕ್ಷ್ಯಕ್ಕೊಳಗಾದ ಈ ಪುಟ್ಟ ಮರಿ, ಒಂದು ಮೃದುವಾದ ಬೊಂಬೆಯಲ್ಲಿ ತನ್ನ ಕುಟುಂಬವನ್ನು ಕಂಡುಕೊಂಡಿದೆ.
ಸ್ವಲ್ಪ ಸೋಶಿಯಲ್ ಮೀಡಿಯಾದತ್ತ ಕಣ್ಣಾಡಿಸಿದರೂ, ಸ್ಕ್ರಾಲ್ ಮಾಡಿದರೂ ‘ಪಂಚ್’ ಎಂಬ ಮರಿ ಮಂಗನ ವಿಡಿಯೋಗಳೇ ಕಾಣಿಸುತ್ತವೆ. ಈ ಪುಟ್ಟ ಮಂಗ ಜಪಾನ್‌ನ ಇಚಿಕಾವಾ ಸಿಟಿ ಮೃಗಾಲಯದಲ್ಲಿ ವಾಸಿಸುತ್ತಿದೆ. ಹುಟ್ಟಿದ ಕೂಡಲೇ ತಾಯಿಯಿಂದ ದೂರಾದ ಪಂಚ್‌ಗೆ ಯಾವುದೇ ಕುಟುಂಬವಿರಲಿಲ್ಲ. ಆದರೆ ಶೀಘ್ರದಲ್ಲೇ ಈ ಮರಿ ಮಂಗ ಒಂದು ಬೊಂಬೆಯನ್ನೇ ಅಮ್ಮ ಅಂದುಕೊಂಡು ಪ್ರೀತಿಯನ್ನು ಕಂಡುಕೊಂಡಿತು.
ಅದು ಒಂದು ಕಿತ್ತಳೆ ಬಣ್ಣದ ಒರಾಂಗುಟನ್ (Orangutan) ಬೊಂಬೆ. ಮೃಗಾಲಯದ ಇತರ ಮಂಗಗಳು ಪಂಚ್‌ನನ್ನು ಸ್ವೀಕರಿಸದಿದ್ದಾಗ, ಈ ಬೊಂಬೆಯನ್ನೇ ತನ್ನ ಸರ್ವಸ್ವ ಎಂದು ಭಾವಿಸಿ ಹೋದಲ್ಲೆಲ್ಲಾ ಅದನ್ನು ಹೊತ್ತೊಯ್ಯತೊಡಗಿತು. ಈ ಬೊಂಬೆಯಲ್ಲೇ ಪಂಚ್ ನೆಮ್ಮದಿ, ಪ್ರೀತಿ ಮತ್ತು ಭದ್ರತೆಯನ್ನು ಕಂಡುಕೊಂಡಿತು.
ಯಾರು ಈ ಪಂಚ್ ಮರಿ ಮಂಗ?
ಒಂದೇ ರಾತ್ರಿಯಲ್ಲಿ ವಿಶ್ವದಾದ್ಯಂತ ಖ್ಯಾತಿ ಗಳಿಸಿದ ಈ ಮರಿ ಮಂಗನ ಹೆಸರು ಪಂಚ್ (ಜಪಾನೀಸ್‌ನಲ್ಲಿ ‘ಪಂಚಿ-ಕುನ್’). ಜುಲೈ 2025 ರಲ್ಲಿ ಜನಿಸಿದ ಇದು ಮಕಾಕ್ (Macaque) ತಳಿಗೆ ಸೇರಿದ ಮಂಗ. ವಿಶ್ವದಾದ್ಯಂತ ಸುದ್ದಿಯಾಗುತ್ತಿರುವ ಈ ಮರಿ ಮಂಗ ಬೊಂಬೆ ಸಿಗುವವರೆಗೂ ತುಂಬಾ ಏಕಾಂಗಿಯಾಗಿತ್ತು.
ಮೃಗಾಲಯದಲ್ಲಿ ಪಂಚ್‌ನ ಪ್ರಯಾಣ
ಪಂಚ್‌ನ ಕಥೆ ಶುರುವಾಗಿದ್ದೇ ತಾಯಿಯ ನಿರ್ಲಕ್ಷ್ಯದಿಂದ. ತಾಯಿ ಮರಿ ಮಂಗವನ್ನು ಬಿಟ್ಟು ಹೋದಾಗಿನಿಂದ ಮೃಗಾಲಯದ ಸಿಬ್ಬಂದಿಯೇ ಇದನ್ನು ನೋಡಿಕೊಳ್ಳುತ್ತಿದ್ದಾರೆ. ಪರಿಸ್ಥಿತಿ ಅಷ್ಟಕ್ಕೇ ಮುಗಿಯಲಿಲ್ಲ, ಮಂಗಗಳ ಗುಂಪಿನಿಂದಲೂ ಪಂಚ್‌ನನ್ನು ಹೊರಹಾಕಲಾಯಿತು. ಆಗ ಮೃಗಾಲಯದ ಪಾಲಕರು ಈ ಮರಿಗೆ ಆಸರೆಯಾಗಲೆಂದು ಒಂದು ಒರಾಂಗುಟನ್ ಗೊಂಬೆಯನ್ನು ನೀಡಿದರು.
ಪಂಚ್ ತಕ್ಷಣವೇ ಆ ಮೃದುವಾದ ಬೊಂಬೆಯನ್ನು ಅಪ್ಪಿಕೊಂಡಿತು. ಸ್ವಲ್ಪ ಸಮಯದ ನಂತರ ಪಂಚ್ ಇತರ ಮಂಗಗಳ ಜೊತೆ ಬೆರೆಯಲು ಪ್ರಯತ್ನಿಸಿತಾದರೂ, ಅಲ್ಲಿಯ ಮಂಗಗಳು ಪಂಚ್‌ನನ್ನು ಪೀಡಿಸಲು (Bullying) ಶುರು ಮಾಡಿದವು. ಇದು ನೋಡುವವರಿಗೆ ಸ್ವಲ್ಪ ಬೇಸರ ತರಿಸಿದರೂ, ಪಂಚ್ ಮಾತ್ರ ತನ್ನ ಬೊಂಬೆಯೊಂದಿಗೆ ಧೈರ್ಯವಾಗಿ ಬೆಳೆಯುತ್ತಿದೆ.
ಪಂಚ್ ಕುರಿತಾದ ಕಾಮೆಂಟ್ಸ್
ಸಾಮಾಜಿಕ ಜಾಲತಾಣಗಳಲ್ಲಿ ಪಂಚ್ ಮತ್ತು ಆತನ ಗೊಂಬೆಯ ಬಗ್ಗೆ ಅಸಂಖ್ಯಾತ ಮೀಮ್ಸ್, ಕಾಮೆಂಟ್ಸ್ ಹರಿದಾಡುತ್ತಿವೆ. ಪಂಚ್‌ನ ಜೀವನದ ಕಷ್ಟಗಳು ಮತ್ತು ಆತನ ಧೈರ್ಯವನ್ನು ನೋಡಿ ಜನರು ತಮಗೆ ತಾವೇ ಹೋಲಿಸಿಕೊಳ್ಳುತ್ತಿದ್ದಾರೆ. ಕೆಲವರಂತೂ “ನಾನು ಮತ್ತು ನನ್ನ ಜೀವನದ ಏಕೈಕ ಆಸರೆ” ಎಂದು ಈ ವಿಡಿಯೋವನ್ನ ಶೇರ್ ಮಾಡುತ್ತಿದ್ದಾರೆ. ಇನ್ನು ಕೆಲವರು ಮೃಗಾಲಯದ ಇತರ ಮಂಗಗಳ ವರ್ತನೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Scroll to load tweet…
ವೈರಲ್ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿರುವ ಮೃಗಾಲಯದ ಸಿಬ್ಬಂದಿ
ತಾಯಿಯ ಪ್ರೀತಿಯಿಂದ ವಂಚಿತನಾದ ಕಾರಣ, ಮೃಗಾಲಯದ ಸಿಬ್ಬಂದಿಯೇ ಪಂಚ್‌ಗೆ ಹಗಲಿರುಳು ಆರೈಕೆ ಮಾಡಬೇಕಾಯಿತು. ಸದ್ಯ ಇಚಿಕಾವಾ ಮೃಗಾಲಯದ ಝೂಕೀಪರ್ಸ್ ಹೇಳಿಕೆ ನೀಡಿದ್ದಾರೆ. “ಪಂಚ್‌ನನ್ನು ಇತರ ಜಪಾನಿ ಮಂಗಗಳ ಗುಂಪಿಗೆ ಸೇರಿಸುವಾಗ ಇಂತಹ ಸವಾಲುಗಳು ಎದುರಾಗುತ್ತವೆ ಎಂದು ನಾವು ಮೊದಲೇ ಊಹಿಸಿದ್ದೆವು. ಇತರ ಮಂಗಗಳು ಪಂಚ್‌ನನ್ನು ಹಲವು ಬಾರಿ ಗದರಿಸಿದ್ದರೂ ಸಹ, ಯಾವುದೇ ಮಂಗವು ಅವನ ಮೇಲೆ ಗಂಭೀರವಾದ ಹಲ್ಲೆ ಮಾಡಿಲ್ಲ. ಗದರಿಸಲ್ಪಟ್ಟಾಗಲೂ ಪಂಚ್ ಅದ್ಭುತವಾದ ಮಾನಸಿಕ ಸ್ಥೈರ್ಯ ಮತ್ತು ಚೇತರಿಸಿಕೊಳ್ಳುವ ಶಕ್ತಿಯನ್ನು ಪ್ರದರ್ಶಿಸುತ್ತಿದ್ದಾನೆ. ಇತರ ಮಂಗಗಳು ಪಂಚ್‌ನೊಂದಿಗೆ ನಡೆಸುವ ಈ ಶಿಸ್ತಿನ ವರ್ತನೆ ನೋಡಿ ಅವನ ಬಗ್ಗೆ ಮರುಕ ಪಡುವುದಕ್ಕಿಂತ ಹೆಚ್ಚಾಗಿ, ಗುಂಪಿನೊಂದಿಗೆ ಬೆರೆಯಲು ಅವನು ನಡೆಸುತ್ತಿರುವ ಪ್ರಯತ್ನಕ್ಕೆ ನಿಮ್ಮ ಬೆಂಬಲ ನೀಡಿ,” ಎಂದು ಮೃಗಾಲಯದ ಅಧಿಕಾರಿಗಳು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.