ಮಂಡ್ಯ, ಫೆ.21: ಪ್ರೀತಿಸಿ ಮದುವೆಯಾದ ಅಳಿಯನ ಮೇಲೆ ಕೋಪಗೊಂಡ ಮಾವನೊಬ್ಬ ಅಳಿಯನ ಮನೆಗೆ ಬೆಂಕಿ ಹಚ್ಚಿರುವ ಘಟನೆ ಮದ್ದೂರು ತಾಲೂಕಿನ ಚುಂಚಗಹಳ್ಳಿ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿದ್ದ ವಸ್ತುಗಳು ಬೆಂಕಿಗಾಹುತಿ, ಅದೃಷ್ಟವಶಾತ್ ಪ್ರಾಣಪಾಯ ತಪ್ಪಿದೆ. ಚುಂಚಗಹಳ್ಳಿ ಗ್ರಾಮದ ವಿನೋದ್ ಮತ್ತು ಕಾವ್ಯ ಎಂಬವರು ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಕಾವ್ಯಾ ಮನೆಯಲ್ಲಿ ತೀವ್ರ ವಿರೋಧವಿತ್ತು. ಮನೆಯವರ ವಿರೋಧದ ನಡುವೆಯೂ ಈ ಜೋಡಿ ಕಳೆದ ಗುರುವಾರ ಮದುವೆಯಾಗಿತ್ತು. ತನ್ನ ಮಗಳು ವಿರೋಧದ ನಡುವೆ ಮದುವೆಯಾಗಿದ್ದ ಕಾವ್ಯಾ ತಂದೆ ಚನ್ನೇಗೌಡ ತೀವ್ರ ಆಕ್ರೋಶಗೊಂಡಿದ್ದರು. ಇದೇ ಕೋಪದಲ್ಲಿ ಇಂದು (ಶನಿವಾರ) ಬೆಳಿಗ್ಗೆ ಅಳಿಯ ವಿನೋದ್ ಮನೆಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಕೆನ್ನಾಲಿಗೆ ಮನೆಯಲ್ಲಿದ್ದ ವಸ್ತುಗಳು, ಬಟ್ಟೆಬರೆ ಹಾಗೂ ಅಡುಗೆ ಸಾಮಗ್ರಿಗಳು ಸಂಪೂರ್ಣವಾಗಿ ಸುತ್ತು ಕರಕಲಾಗಿವೆ. ಘಟನೆ ನಡೆದ ವೇಳೆ ಮನೆಯಲ್ಲಿ ಯಾರು ಇಲ್ಲದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ. ಮನೆಗೆ ಬೆಂಕಿ ಹಚ್ಚುವ ಭರದಲ್ಲಿ ಆರೋಪಿ ಚನ್ನೇಗೌಡನಿಗೆ ಸಣ್ಣಪುಟ್ಟ ಗಾಯ. ಕೂಡಲೇ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ