ಬೆಂಗಳೂರು, ಫೆ.21: ರಾಜಧಾನಿಯಲ್ಲಿ (ಬೆಂಗಳೂರು ಚೈನ್ ಸ್ನ್ಯಾಚಿಂಗ್) ಬಂಗಾರದ ಬೆಲೆ ಗಗನಕ್ಕೇರಿತು, ಇತ್ತ ಸರಗಳ್ಳರ ಹಾವಳಿಯೂ ಮಿತಿಮೀರಿದೆ. ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಬರುವ ಖದೀಮರು, ರಸ್ತೆಯಲ್ಲಿ ಒಂಟಿಯಾಗಿ ಹೋಗುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮಾಂಗಲ್ಯ ಸರ ಕಿತ್ತು ಪರಾರಿಯಾಗುತ್ತಿರುವ ಘಟನೆಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಆಗಾಗ ಎಚ್ಚರಿಕೆ ನೀಡುತ್ತಿದ್ದಾರೆ. ಇದೀಗ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿಡಿಯೋ ಸ್ಟಾಪ್ ನಿವಾಸಿ ಇಂದ್ರಾವತಿ ಎಂಬುವವರೇ ಈ ಕೃತ್ಯಕ್ಕೆ ಬಲಿಯಾದ ಮಹಿಳೆ. ರಾತ್ರಿ ಸುಮಾರು 8:30ರ ವೇಳೆಗೆ ಇಂದ್ರಾವತಿ ಅವರು ದಿನಸಿ ಅಂಗಡಿಯಿಂದ ಸಾಮಾನು ತರಲು ಒಂಟಿಯಾಗಿ ರಸ್ತೆಯಲ್ಲಿ ಹೋಗುತ್ತಿದ್ದರು. ಈ ವೇಳೆ ಹೊಂಚು ಹಾಕಿದ್ದ ಇಬ್ಬರು ಕಿರಾತಕರು ಬೈಕ್‌ನಲ್ಲಿ ಬಂದು, ಮೊದಲು ಇವರನ್ನು ದಾಟಿ ಮುಂದೆ ಹೋಗಿದ್ದಾರೆ. ಬಳಿಕ ಯಾರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ವಾಪಸ್ ತಿರುಗಿ ಬಂದು, ಇಂದ್ರಾವತಿ ಅವರ ಕುತ್ತಿಗೆಯಲ್ಲಿದ್ದ 50 ಗ್ರಾಂ ತೂಕದ ಮಾಂಗಲ್ಯ ಸರವನ್ನು ಬಲವಂತವಾಗಿ ಕಿತ್ತು ವೇಗವಾಗಿ ಅಲ್ಲಿಂದ ಪರಾರಿಯಾಗಿದ್ದಾರೆ.
ಈ ಇಡೀ ಘಟನೆಯ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಹೆಲ್ಮೆಟ್ ಧರಿಸಿದ ಆರೋಪಿಗಳ ಗುರುತು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿದೆ. ಇಂದ್ರಾವತಿ ಅವರು ಗಾಬರಿಯಿಂದ ಕಿರುಚಾಡಿದರೂ, ಆರೋಪಿಗಳು ಕ್ಷಣಾರ್ಧದಲ್ಲಿ ಕಣ್ಮರೆಯಾಗಿದ್ದಾರೆ. ಬೈಕ್‌ನಲ್ಲಿ ಬಂದವರು ಏಕಾಏಕಿ ಸರಕ್ಕೆ ಕೈ ಹಾಕಿದರು. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲೇ ಸರ ಕಿತ್ತುಕೊಂಡು ವೇಗವಾಗಿ ಹೊರಟು ಹೋದರು ಎಂದು ಇಂದ್ರಾವತಿ ಹೇಳಿದ್ದಾರೆ.
ಇದನ್ನೂ ಓದಿ: ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ! ಎಲ್ಲವೂ ಸುತ್ತು ಭಸ್ಮ
ಹೆಚ್ಚಿನ ಸರಗಳ್ಳರು ಮತ್ತೆ ಸಕ್ರಿಯರಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ. ಬಂಗಾರದ ಬೆಲೆ ಏರಿಕೆಯಾಗಿರುವ ಈ ಸಂದರ್ಭದಲ್ಲಿ ಹಳೇ ಖದೀಮರೇ ಮತ್ತೆ ಆಕ್ಟಿವ್ ಆಗುತ್ತಿದೆ ಎಂಬ ಅನುಮಾನ ಮೂಡಿದೆ.
ವರದಿ: ಮಂಜುನಾಥ್
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ