ದಕ್ಷಿಣ ಆಫ್ರಿಕಾ ಚಾಲೆಂಜ್‌ಗೆ ಟೀಂ ಇಂಡಿಯಾ ರೆಡಿ! ಅಜೇಯ ತಂಡಗಳ ನಡುವೆ ಹೈವೋಲ್ಟೇಜ್ ಮ್ಯಾಚ್ | Unbeaten India Face South Africa In High Voltage Super 8 Opener Of Icc T20 World Cup Kvn

ದಕ್ಷಿಣ ಆಫ್ರಿಕಾ ಚಾಲೆಂಜ್‌ಗೆ ಟೀಂ ಇಂಡಿಯಾ ರೆಡಿ! ಅಜೇಯ ತಂಡಗಳ ನಡುವೆ ಹೈವೋಲ್ಟೇಜ್ ಮ್ಯಾಚ್ | Unbeaten India Face South Africa In High Voltage Super 8 Opener Of Icc T20 World Cup Kvn



ದಕ್ಷಿಣ ಆಫ್ರಿಕಾ ಚಾಲೆಂಜ್‌ಗೆ ಟೀಂ ಇಂಡಿಯಾ ರೆಡಿ! ಅಜೇಯ ತಂಡಗಳ ನಡುವೆ ಹೈವೋಲ್ಟೇಜ್ ಮ್ಯಾಚ್ | Unbeaten India Face South Africa In High Voltage Super 8 Opener Of Icc T20 World Cup Kvn

ಟಿ20 ವಿಶ್ವಕಪ್‌ನ ಸೂಪರ್‌-8 ಹಂತದಲ್ಲಿ, ಗುಂಪು ಹಂತದಲ್ಲಿ ಅಜೇಯವಾಗಿರುವ ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಕಳೆದ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳಲು ದಕ್ಷಿಣ ಆಫ್ರಿಕಾ ಕಾಯುತ್ತಿದೆ.

ಅಹಮದಾಬಾದ್‌: ಈ ಬಾರಿ ಐಸಿಸಿ ಟಿ20 ವಿಶ್ವಕಪ್‌ನ ಗುಂಪು ಹಂತದಲ್ಲಿ ಎಲ್ಲಾ ಪಂದ್ಯಗಳಲ್ಲೂ ಗೆದ್ದು ಅಜೇಯವಾಗಿರುವ ಹಾಲಿ ಚಾಂಪಿಯನ್‌ ಭಾರತ ತಂಡಕ್ಕೆ ನಿಜವಾದ ಸವಾಲು ಎದುರಾಗುವ ಸಮಯ ಬಂದಿದೆ. ಭಾನುವಾರ ಸೂಪರ್‌-8 ಹಂತದ ಮೊದಲ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿದ್ದು, ಗೆದ್ದು ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ.

ಈ ಬಾರಿ ತವರಿನಲ್ಲಿ ಟೂರ್ನಿ ನಡೆಯುತ್ತಿದ್ದರೂ ಭಾರತ ತಾನಾಡಿದ 4 ಪಂದ್ಯಗಳ ಪೈಕಿ ಸಂಪೂರ್ಣ ಅಧಿಪತ್ಯ ಸಾಧಿಸಿ ಗೆದ್ದಿದ್ದು ಪಾಕಿಸ್ತಾನ ವಿರುದ್ಧ ಮಾತ್ರ. ಆ ಪಂದ್ಯ ಶ್ರೀಲಂಕಾದ ಕೊಲಂಬೊದಲ್ಲಿ ನಡೆದಿತ್ತು. ಉಳಿದ 3 ಪಂದ್ಯಗಳು ತನ್ನ ತವರಿನಲ್ಲೇ ನಡೆದಿದ್ದರೂ ಭಾರತಕ್ಕೆ ಸುಲಭದಲ್ಲಿ ಗೆಲುವು ಸಿಕ್ಕಿರಲಿಲ್ಲ. ನಮೀಬಿಯಾ ವಿರುದ್ಧ 93 ರನ್‌ ಗಳಿಂದ ಗೆದ್ದಿದ್ದರೂ, ಭಾರತ ಬ್ಯಾಟಿಂಗ್‌ನಲ್ಲಿ 9 ವಿಕೆಟ್‌ ಕಳೆದುಕೊಂಡಿತ್ತು ಎಂಬುದನ್ನು ಮರೆಯುವಂತಿಲ್ಲ. ಹೀಗಾಗಿಯೇ ಸೂಪರ್‌-8 ಹಂತದಲ್ಲಿ ಭಾರತಕ್ಕೆ ಎಲ್ಲಾ 3 ತಂಡಗಳಿಂದಲೂ ಭಾರೀ ಪೈಪೋಟಿ ಎದುರಾಗುವ ಸಾಧ್ಯತೆ ಹೆಚ್ಚು. ಭಾರತದ ಎದುರಾಳಿ 3 ತಂಡಗಳು(ದ.ಆಫ್ರಿಕಾ, ವೆಸ್ಟ್‌ಇಂಡೀಸ್‌, ಜಿಂಬಾಬ್ವೆ) ಕೂಡಾ ಗುಂಪು ಹಂತದಲ್ಲಿ ಅಜೇಯವಾಗಿದ್ದವು ಎಂಬುದು ಗಮನಾರ್ಹ.

ಲಯಕ್ಕೆ ಮರಳ್ತಾರಾ ಅಭಿಷೇಕ್:

ಭಾರತ 4 ಪಂದ್ಯಗಳಲ್ಲಿ ಗೆದ್ದಿದ್ದರೂ ತಂಡದಲ್ಲಿ ಕೆಲ ಸಮಸ್ಯೆಗಳಿವೆ. ಪ್ರಮುಖವಾಗಿ, ಸ್ಫೋಟಕ ಬ್ಯಾಟರ್‌ ಅಭಿಷೇಕ್‌ ಶರ್ಮಾ ತಾವಾಡಿದ 3 ಪಂದ್ಯದಲ್ಲೂ ಸೊನ್ನೆ ಸುತ್ತಿದ್ದಾರೆ. ಅವರು ಈ ಪಂದ್ಯದಲ್ಲಾದರೂ ಅಬ್ಬರಿಸಬೇಕಿದೆ. ತಿಲಕ್‌ ವರ್ಮಾ ದೊಡ್ಡ ಇನ್ನಿಂಗ್ಸ್‌ ಕಟ್ಟಬೇಕಿದ್ದು, ಹಾರ್ದಿಕ್‌ ಪಾಂಡ್ಯ ಅವರಿಂದಲೂ ಮ್ಯಾಚ್‌ ವಿನ್ನಿಂಗ್ ಪ್ರದರ್ಶನ ಅಗತ್ಯವಿದೆ. ನಾಯಕ ಸೂರ್ಯಕುಮಾರ್, ಇಶಾನ್‌ ಕಿಶನ್‌, ಶಿವಂ ದುಬೆ ತಮ್ಮ ಲಯ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

ತಂಡದ ಬೌಲಿಂಗ್‌ ವಿಭಾಗದಲ್ಲಿ ಬದಲಾವಣೆ ಆಗಬಹುದು. ಅರ್ಶ್‌ದೀಪ್‌ ಸಿಂಗ್‌ ಬದಲು ಕುಲ್ದೀಪ್‌ ಯಾದವ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ಬದಲು ಅಕ್ಷರ್‌ ಪಟೇಲ್‌ ಆಡುವ 11ರ ಬಳಗದಲ್ಲಿ ಕಾಣಸಿಕೊಳ್ಳಬಹುದು.

ಸೇಡಿನ ತವಕ:

ಕಳೆದ ಬಾರಿ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ವಿರುದ್ಧ ದ.ಆಫ್ರಿಕಾ ವೀರೋಚಿತ ಸೋಲು ಕಂಡಿತ್ತು. ಈ ಬಾರಿ ಉಭಯ ತಂಡಗಳು ಸೂಪರ್‌-8ನಲ್ಲೇ ಮುಖಾಮುಖಿಯಾಗುತ್ತಿದ್ದು, ಭಾರತ ವಿರುದ್ಧ ಗೆದ್ದು ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಈ ವಿಶ್ವಕಪ್‌ಗೂ ಮುನ್ನ ನಡೆದಿದ್ದ ಟಿ20 ಸರಣಿಯಲ್ಲಿ ಭಾರತ 3-1ರಿಂದ ಗೆದ್ದಿತ್ತು.

ಪಂದ್ಯ ಆರಂಭ: ಸಂಜೆ 7 ಗಂಟೆಗೆ

ಒಟ್ಟು ಮುಖಾಮುಖಿ: 35

ಭಾರತ: 21

ದ.ಆಫ್ರಿಕಾ: 13

ರದ್ದು: 01

ಲಂಕಾ vs ಇಂಗ್ಲೆಂಡ್ ಸೂಪರ್‌-8 ಸೆಣಸಾಟ

ಭಾನುವಾರ ಮೊದಲ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾಗೆ ಇಂಗ್ಲೆಂಡ್‌ ಸವಾಲು ಎದುರಾಗಲಿದೆ. ಗುಂಪು ಹಂತದಲ್ಲಿ ಉಭಯ ತಂಡಗಳು ತಲಾ 4 ಪಂದ್ಯಗಳನ್ನಾಡಿದ್ದು, 3ರಲ್ಲಿ ಗೆದ್ದಿದ್ದವು. ಇಂಗ್ಲೆಂಡ್‌ ತಂಡ ನೇಪಾಳ ವಿರುದ್ಧ ಸೋಲಿನ ಆಘಾತದಿಂದ ಪಾರಾಗಿ ಗೆದ್ದಿದ್ದರೆ, ಲಂಕಾ ತಂಡ ಜಿಂಬಾಬ್ವೆ ವಿರುದ್ಧ ಸೋತಿತ್ತು.

ಪಂದ್ಯ: ಮಧ್ಯಾಹ್ನ 3 ಗಂಟೆಗೆ



Source link

Leave a Reply

Your email address will not be published. Required fields are marked *