
ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ, ಎಂಟು ವರ್ಷದ ಬಾಲಕಿ ತನ್ನ ಸಹೋದರರೊಂದಿಗೆ ಲೂಡೊ ಆಡುವಾಗ ಆಟಿಕೆಯ ಕಾಯಿಯನ್ನು ನುಂಗಿದ್ದಾಳೆ. ಇದರಿಂದ ಉಸಿರುಗಟ್ಟಿ, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಮಂಗಳೂರು: ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ ತೊಡಗಿದ್ದ ಎಂಟು ವರ್ಷದ ಹೆಣ್ಣು ಮಗುವೊಂದು ಆಟದಲ್ಲಿ ಬಳಸಲಾಗುವ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ಅನ್ನು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ಶನಿವಾರ ನಡೆದಿದೆ.
ಮೂಲತಃ ಕಾಸರಗೋಡು ಜಿಲ್ಲೆಯ ಮಧೂರು ಉಳಿಯತಡ್ಕ ನಿವಾಸಿ ರಾಜೇಶ್ ಗಟ್ಟಿ,ಮತ್ತು ರಾಜೇಶ್ವರಿ ದಂಪತಿಯ ಎರಡನೇ ಪುತ್ರಿ ತನುಷ್ಕ (8) ಮೃತ ದುರ್ದೈವಿ.
ಅಣ್ಣ-ತಂಗಿ ಜೊತೆ ಲೂಡೊ ಆಟ
ಮೃತ ತನುಷ್ಕ ಅವರ ತಾಯಿ ಉಳ್ಳಾಲದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದು ಉದ್ಯೋಗಕ್ಕೆ ತೆರಳಲು ಸಮೀಪಿದ್ದ ಕಾರಣ ಕುಟುಂಬ ಸಮೇತ ಕೊಲ್ಯದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಶನಿವಾರ ಮಧ್ಯಾಹ್ನ ಶಾಲೆಗೆ ರಜೆ ಇದ್ದ ಕಾರಣ ರಾಜೇಶ್ವರಿ ಅವರ ಎರಡನೇ ಪುತ್ರಿ ತನುಷ್ಕ ತನ್ನ ಅಣ್ಣ ಮತ್ತು ತಂಗಿಯ ಜತೆ ಲೂಡೊ ಆಟದಲ್ಲಿ ತೊಡಗಿದ್ದಳು.
ಈ ವೇಳೆ ತನುಷ್ಕ ಲೂಡೊ ಆಟದ ಪ್ಲಾಸ್ಟಿಕ್ ಕಾಯ್ನ್ ಅನ್ನು ನುಂಗಿ ಏಕಾ ಏಕಿ ಉಸಿರು ಗಟ್ಟಿದ ಸ್ಥಿತಿಯಲ್ಲಿ ಗಂಭೀರಗೊಂಡಿದ್ದು ಗಾಬರಿಗೊಂಡ ಆಕೆಯ ತಾಯಿ ನೆರೆಹೊರೆಯವರ ಸಹಾಯದಿಂದ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಆಕೆಯನ್ನ ಚಿಕಿತ್ಸೆಗೆ ಒಯ್ದಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ತನುಷ್ಕ ಮೃತ ಪಟ್ಟಿರುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಒಣಹವೆ ನಡುವೆಯೂ ಮಳೆ; ಈ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ವರುಣನ ಅಬ್ಬರ
ಶ್ವಾಸಕೋಶದಲ್ಲಿ ಪ್ಲಾಸ್ಟಿಕ್ ಕೋನ್ ಆಟಿಕೆ ಪತ್ತೆ
ಬಾಲಕಿಯ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿದಾಗ ಆಕೆಯ ಶ್ವಾಸಕೋಶದಲ್ಲಿ ಪ್ಲಾಸ್ಟಿಕ್ ಕೋನ್ ಆಟಿಕೆ ಲಭಿಸಿದೆ.
ಮೃತ ತನುಷ್ಕ ತೊಕ್ಕೊಟ್ಟುವಿನ ಸಂತ ಸೆಬೆಸ್ಟಿಯನ್ ಹೈಸ್ಕೂಲ್ನ ಎರಡನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿನಿ. ಆಕೆಯ ಧಿಡೀರ್ ಸಾವಿನಿಂದ ಪೋಷಕರು ಸೇರಿದಂತೆ ಇಡೀ ಕುಟುಂಬವೇ ಆಘಾತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಸೇರಿದ್ದರು.
ಇದನ್ನೂ ಓದಿ: ಪುತ್ತೂರಿನ ಎಂಜಿನಿಯರಿಂಗ್ ಕಾಲೇಜು ಕಟ್ಟಡದ 4ನೇ ಮಹಡಿಯ ಕಿಟಕಿಯಿಂದ ಧುಮುಕಿದ ಮುಳ್ಳು ಹಂದಿ ಸಾವು