
ಮದುವೆಗೆ ಈಗಲೂ ‘ವರ್ಜಿನ್’ ಹುಡುಗಿಯನ್ನೇ ಬಯಸುತ್ತಾರಂತೆ ಭಾರತೀಯ ಪುರುಷರು. ಹಾಗೇ ಗಂಡನ ಮನೆಗಳಲ್ಲಿ ತವರಿನ ಸಂಪ್ರದಾಯ ಅನುಸರಿಸೋಕೆ ಆಗಲ್ವಂತೆ. ಇದೆಲ್ಲ ಹೇಳಿದವಳು ಬೋಲ್ಡ್ ನಟಿ ನೀನಾ ಗುಪ್ತಾ.
ಬಾಲಿವುಡ್ನ ಹಿರಿಯ ನಟಿ ನೀನಾ ಗುಪ್ತಾ (Neena Gupta) ತುಂಬ ಬೋಲ್ಡ್ ಆಗಿ ಮಾತಾಡುವ ವ್ಯಕ್ತಿ. ಇತ್ತೀಚೆಗೆ ಶುಭಂಕರ್ ಮಿಶ್ರಾ ಅವರ ಪಾಡ್ಕಾಸ್ಟ್ನಲ್ಲಿ ಕೆಲವು ಶಾಕಿಂಗ್ ಅನಿಸುವ ವಿಚಾರಗಳನ್ನು ಮಾತಾಡಿದ್ದಾರೆ. ಅವುಗಳಲ್ಲಿ ಒಂದು, ಭಾರತೀಯ ಪುರುಷರ ಮನಸ್ಥಿತಿಯ ಬಗ್ಗೆ. ಅವರು ಹೇಳೋ ಪ್ರಕಾರ, ಈಗಲೂ ಭಾರತೀಯ ಪುರುಷರು ತಾವು ಮದುವೆ ಆಗೋ ಹುಡುಗಿ ವರ್ಜಿನ್ ಆಗಿರಬೇಕು ಎಂದೇ ಬಯಸ್ತಾರಂತೆ. ಇದೇನು ವಿಚಿತ್ರ ಮನಸ್ಥಿತಿಯೋ ಅರ್ಥವಾಗಲ್ಲ ಅಂತಾರೆ.
“ಇಂದಿಗೂ ಭಾರತದಲ್ಲಿ ಹೆಚ್ಚಿನ ಪುರುಷರು ‘ವರ್ಜಿನ್’ ಹೆಂಡತಿಯನ್ನು ಬಯಸುತ್ತಾರೆ. ಸಮಾಜದಲ್ಲಿ ಏನು ಬದಲಾವಣೆ ಆಗಿದೆ? ಜನರು ಮುಕ್ತ ಚಿಂತನೆಯವರಾಗಿದ್ದಾರೆ ಎಂದು ಹೇಳೋದು ಹೇಗೆ? ಇನ್ನೂ ಮಹಿಳೆಯರು ತಲೆ ಮೇಲೆ ಸೆರಗು ಹಾಕಿಕೊಂಡು ಮಾವನ ಕಾಲು ಮುಟ್ಟಿ ನಮಸ್ಕಾರ ಮಾಡುತ್ತಾರೆ. ನೀವೂ ನಾನೂ ನಮ್ಮಂಥವರು ಅಲ್ಪಸಂಖ್ಯಾತರು. ಫ್ರೀ ಆಗಿ ಮಾತಾಡುವವರು, ಬದುಕುವವರು ಕಡಿಮೆ. ನಿಜವಾದ ಭಾರತ ಬೇರೆ ಇದೆ” ಎಂದಿದ್ದಾರೆ ನೀನಾ.
ಭಾರತೀಯ ಮಹಿಳೆಯರು ಇಂದಿಗೂ ಗಂಡನ ಮನೆಗಳಲ್ಲಿ ಪಿತೃಪ್ರಧಾನ ಮನೋಭಾವ ಮತ್ತು ಪೂರ್ವಾಗ್ರಹವನ್ನು ಎದುರಿಸುತ್ತಿದ್ದಾರೆ. ಇದರಲ್ಲೆಲ್ಲಾ ಬದಲಾವಣೆ ಬಂದಿದೆ ಎಂದು ಹೇಳುತ್ತಿದ್ದರೂ, ನಿಜ ಸ್ಥಿತಿ ಇನ್ನೂ ಬದಲಾಗಿಲ್ಲ. ಮದುವೆಯಾದ ನಂತರ ಸಹ ಮಹಿಳೆಯರು ತಮ್ಮ ಸಣ್ಣ ಇಚ್ಛೆಗಳನ್ನೂ ಅನುಸರಿಸಲು ಅವಕಾಶ ಸಿಗದ ಘಟನೆಗಳನ್ನು ತಮ್ಮ ಕುಟುಂಬದಲ್ಲೇ ಕಂಡಿದ್ದೇನೆ ಎಂದು ಹೇಳಿದ್ದಾರೆ.
ನೀನಾ ಗುಪ್ತಾ ತಮ್ಮ ಕುಟುಂಬದ ಉದಾಹರಣೆಗಳನ್ನು ಹಂಚಿಕೊಂಡರು. “ನನ್ನ ತಂದೆಯ ಸಂಬಂಧಿಯೊಬ್ಬಳು ಮುಂಬೈನಲ್ಲಿ ದೊಡ್ಡ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಮದುವೆಯಾದಳು. ಆಕೆ ಸಾಯಿ ಬಾಬಾ ಅವರನ್ನು ಪೂಜಿಸುತ್ತಿದ್ದಳು. ತನ್ನ ಕೋಣೆಯಲ್ಲಿ ಸಾಯಿ ಬಾಬಾ ಚಿತ್ರ ಇಟ್ಟುಕೊಂಡಿದ್ದಳು. ಆದರೆ ಆಕೆಯ ಅತ್ತೆ ಅದನ್ನು ತೆಗೆದು, ತಮ್ಮ ಗುರೂಜಿಯ ಚಿತ್ರ ಇಡಲು ಒತ್ತಾಯಿಸಿದರು,” ಎಂದು ಅವರು ವಿವರಿಸಿದರು.
“ನನ್ನ ಸೋದರನ ಮಗಳಿಗೆ ತನ್ನ ಬೆಡ್ಸೈಡ್ ಟೇಬಲ್ ಮೇಲೆ ತನ್ನ ಕುಟುಂಬದ ಫೋಟೋ ಇಡಲು ಆಕೆಯ ಅತ್ತೆ ಅವಕಾಶ ಕೊಡಲಿಲ್ಲ. ಮಹಿಳೆಯರ ಮನಸ್ಥಿತಿಯಲ್ಲಿ ನಿಜವಾದ ಬದಲಾವಣೆ ಬರಲು ಇನ್ನೂ ತುಂಬಾ ದೂರ ಸಾಗಬೇಕಿದೆ,” ಎಂಬುದು ಅವರು ನೀಡಿದ ಇನ್ನೊಂದು ಉದಾಹರಣೆ.
ನೀನಾ ಗುಪ್ತಾ 30ನೇ ವಯಸ್ಸಿನಲ್ಲಿ ಮಗಳು Masaba Guptaಗೆ ಜನ್ಮ ನೀಡಿದರು. ಸಿಂಗಲ್ ಪೇರೆಂಟ್ ಆಗಿ ಆಕೆಯನ್ನು ಬೆಳೆಸಿದವರು. ಸಿಂಗಲ್ ಆಗಿ ಮಗಳನ್ನು ಹೊಂದುವ ನಿರ್ಧಾರ ತನ್ನ ಜೀವನದಲ್ಲಿ ವರ್ಕ್ ಆಯ್ತು, ಆದರೆ ಅದನ್ನು ಎಲ್ಲರಿಗೂ ಶಿಫಾರಸು ಮಾಡುವುದಿಲ್ಲ ಎಂದಿದ್ದಾರೆ.
ವಯಸ್ಸಾದ ಪುರುಷರಿಗೆ ಅದು ಜಾಸ್ತಿ!
ಇದೇ ಪಾಡ್ಕಾಸ್ಟ್ ವೇಳೆ ವಯಸ್ಸಾದವರ ಇಂಟಿಮಸಿ, ಲೈಂಗಿಕತೆ ಬಗ್ಗೆಯೂ ಚರ್ಚಿಸಿದ್ದಾರೆ. ಶುಭಂಕರ್ ಅವರು ಒಬ್ಬ ಲೈಂಗಿಕ ತಜ್ಞ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ, “ವಯಸ್ಸಾದವರು ಬಹಳ ಹೆಚ್ಚು ಲೈಂಗಿಕ ಕ್ರಿಯೆ ಮಾಡುತ್ತಾರೆ” ಎಂದರು. ಇದನ್ನು ಕೇಳಿ ಅಚ್ಚರಿಗೊಂಡ ನೀನಾ, ತಮಾಷೆಯ ಧಾಟಿಯಲ್ಲಿ “ವಯಸ್ಸಾದವರು ಹೆಚ್ಚು ಸೆ*ಕ್ಸ್ ಮಾಡುತ್ತಾರೆಯೇ?” ಎಂದು ಕೇಳಿದರು. ಆದರೆ ನಂತರ ಅವರು ಆ ಮಾತನ್ನು ಮುಂದುವರಿಸಿ, “ಹೌದು, ಆದರೆ ಅವರು ಅದನ್ನು ತಮ್ಮ ಹೆಂಡತಿಯ ಜೊತೆ ಮಾಡುವುದಿಲ್ಲ. ಅಂತಹ ಅನೇಕ ಪ್ರಕರಣಗಳನ್ನು ನಾನು ನೋಡಿದ್ದೇನೆ” ಎಂದರು. ತಾವು ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗ ಬಸ್ನಲ್ಲಿ ಮಹಿಳೆಯರನ್ನು ಅಸಭ್ಯವಾಗಿ ಮುಟ್ಟುವವರು ಹೆಚ್ಚಾಗಿ ವಯಸ್ಸಾದವರೇ ಆಗಿರುತ್ತಿದ್ದರು ಎಂಬ ಕಹಿ ಸತ್ಯವನ್ನೂ ಅವರು ಹಂಚಿಕೊಂಡರು.
ನೀನಾ ಗುಪ್ತಾ ಅವರ ವೈಯಕ್ತಿಕ ಜೀವನ ಬಹಳ ಸಾಹಸಿ ಪ್ರವೃತ್ತಿಯದ್ದು. ಅವರು ಮೊದಲು 1977ರಲ್ಲಿ ಅಮಲನ್ ಕುಸುಮ್ ಘೋಷ್ ಅವರನ್ನು ವಿವಾಹವಾದರು. ಅದು ಅಲ್ಪಕಾಲಿಕವಾಗಿತ್ತು. ನಂತರ 1980ರ ದಶಕದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟಿಗ ಸರ್ ವಿವಿಯನ್ ರಿಚರ್ಡ್ಸ್ ಅವರೊಂದಿಗೆ ಸಂಬಂಧ ಇಟ್ಟುಕೊಂಡರು. ವಿವಿಯನ್ ರಿಚರ್ಡ್ಸ್ ಆಗಲೇ ವಿವಾಹಿತ. ಇಬ್ಬರೂ ಮದುವೆಯಾಗಲಿಲ್ಲ. ಇವರಿಗೆ ಮಸಾಬಾ ಗುಪ್ತಾ ಎಂಬ ಮಗಳು ಹುಟ್ಟಿದಳು. ನೀನಾ ಗುಪ್ತಾ ಧೈರ್ಯದಿಂದ ಮಸಾಬಾಳನ್ನು ಒಂಟಿ ತಾಯಿಯಾಗಿ ಬೆಳೆಸಿದಳು. ಹಲವು ವರ್ಷಗಳ ಒಂಟಿ ಜೀವನದ ನಂತರ, ನೀನಾ ಗುಪ್ತಾ 2008 ರಲ್ಲಿ ದೆಹಲಿ ಮೂಲದ ಚಾರ್ಟರ್ಡ್ ಅಕೌಂಟೆಂಟ್ ವಿವೇಕ್ ಮೆಹ್ರಾ ಅವರನ್ನು ವಿವಾಹವಾದರು.