
ಐಸಿಸಿ ಟಿ20 ವಿಶ್ವಕಪ್ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ, ಆದರೆ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಕಳಪೆ ಫಾರ್ಮ್ ತಂಡಕ್ಕೆ ಚಿಂತೆಯಾಗಿದೆ.
ಅಹಮದಾಬಾದ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಪಂದ್ಯದಲ್ಲಿಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಏಯ್ಡನ್ ಮಾರ್ಕ್‌ರಮ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ದಕ್ಷಿಣ ಆಫ್ರಿಕಾ ತಂಡದಲ್ಲಿ ನಾಲ್ಕು ಬದಲಾವಣೆ ಮಾಡಲಾಗಿದೆ. ಲುಂಗಿ ಎಂಗಿಡಿ, ಕೇಶವ್ ಮಹಾರಾಜ್, ಮಾರ್ಕೊ ಯಾನ್ಸನ್ ಹಾಗೂ ಡೇವಿಡ್ ಮಿಲ್ಲರ್ ತಂಡ ಕೂಡಿಕೊಂಡಿದ್ದಾರೆ.
ಇನ್ನು ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಇಂದಿನ ಪಂದ್ಯಕ್ಕೂ ಕಣಕ್ಕಿಳಿದಿದೆ. ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಗಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ.
ಲಯಕ್ಕೆ ಮರಳ್ತಾರಾ ಅಭಿಷೇಕ್:
ಭಾರತ 4 ಪಂದ್ಯಗಳಲ್ಲಿ ಗೆದ್ದಿದ್ದರೂ ತಂಡದಲ್ಲಿ ಕೆಲ ಸಮಸ್ಯೆಗಳಿವೆ. ಪ್ರಮುಖವಾಗಿ, ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ತಾವಾಡಿದ 3 ಪಂದ್ಯದಲ್ಲೂ ಸೊನ್ನೆ ಸುತ್ತಿದ್ದಾರೆ. ಅವರು ಈ ಪಂದ್ಯದಲ್ಲಾದರೂ ಅಬ್ಬರಿಸಬೇಕಿದೆ. ತಿಲಕ್ ವರ್ಮಾ ದೊಡ್ಡ ಇನ್ನಿಂಗ್ಸ್ ಕಟ್ಟಬೇಕಿದ್ದು, ಹಾರ್ದಿಕ್ ಪಾಂಡ್ಯ ಅವರಿಂದಲೂ ಮ್ಯಾಚ್ ವಿನ್ನಿಂಗ್ ಪ್ರದರ್ಶನ ಅಗತ್ಯವಿದೆ.