
ಸೂಪರ್-8 ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ 76 ರನ್‌ಗಳ ಹೀನಾಯ ಸೋಲು ಕಂಡಿದೆ. 188 ರನ್‌ಗಳ ಗುರಿ ಬೆನ್ನಟ್ಟಿದ ಭಾರತ, ಅಗ್ರ ಕ್ರಮಾಂಕದ ವೈಫಲ್ಯದಿಂದಾಗಿ 111 ರನ್‌ಗಳಿಗೆ ಸರ್ವಪತನಗೊಂಡು ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತಿದೊಡ್ಡ ಸೋಲನ್ನು ದಾಖಲಿಸಿತು.
ಅಹಮದಾಬಾದ್: ಅಗ್ರಕ್ರಮಾಂಕದ ಬ್ಯಾಟರ್‌ಗಳ ದಯನೀಯ ವೈಫಲ್ಯದಿಂದಾಗಿ ಸೂಪರ್-8 ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಗೆಲ್ಲಲು 188 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಕೇವಲ 111 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ 76 ರನ್ ಅಂತರದ ಸೋಲು ಅನುಭವಿಸಿದೆ. ಇದು ಭಾರತ ತಂಡವು ಟಿ20 ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ಅನುಭವಿಸಿದ ಅತಿದೊಡ್ಡ ಅಂತರದ ಸೋಲು ಎನ್ನುವ ಕುಖ್ಯಾತಿಗೆ ಪಾತ್ರವಾಯಿತು.
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಠಿಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಮೊದಲ ಓವರ್‌ನಲ್ಲೇ ಇಶಾನ್ ಕಿಶನ್ ಖಾತೆ ತೆರೆಯುವ ಮುನ್ನವೇ ನಾಯಕ ಏಯ್ಡನ್ ಮಾರ್ಕ್‌ರಮ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ತಿಲಕ್ ವರ್ಮಾ ಒಂದು ರನ್‌ಗೆ ಮಾರ್ಕೊ ಯಾನ್ಸನ್‌ಗೆ ವಿಕೆಟ್ ಒಪ್ಪಿಸಿದರೆ, ಮೊದಲ ಮೂರು ಪಂದ್ಯಗಳಲ್ಲಿ ಶೂನ್ಯ ಸುತ್ತಿದ್ದ ಅಭಿಷೇಕ್ ಶರ್ಮಾ 15 ರನ್‌ಗೆ ವಿಕೆಟ್ ಒಪ್ಪಿಸಿದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ಸೂರ್ಯಕುಮಾರ್ ಯಾದವ್(18), ವಾಷಿಂಗ್ಟನ್ ಸುಂದರ್(11), ಹಾರ್ದಿಕ್ ಪಾಂಡ್ಯ(18) ಹಾಗೂ ರಿಂಕು ಸಿಂಗ್(0) ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಲು ವಿಫಲವಾದರು. ಇನ್ನು ಶಿವಂ ದುಬೆ 37 ಎಸೆತಗಳಲ್ಲಿ 42 ರನ್ ಸಿಡಿಸಿದರಾದರೂ ಮತ್ತೊಂದು ತುದಿಯಲ್ಲಿ ಸೂಕ್ತ ಸಾಥ್ ಸಿಗಲಿಲ್ಲ.
Scroll to load tweet…
ಸೇಡು ತೀರಿಸಿಕೊಂಡ ಹರಿಣಗಳು:
ದಕ್ಷಿಣ ಆಫ್ರಿಕಾ ತಂಡವು 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತ ಎದುರು ರೋಚಕ ಸೋಲು ಅನುಭವಿಸಿತ್ತು. ಇದೀಗ ಭಾರತ ತಂಡವನ್ನು ಅದರದ್ದೇ ಮೈದಾನದಲ್ಲಿ ಸೋಲಿನ ರುಚಿ ತೋರಿಸುವ ಮೂಲಕ ಸೇಡು ತೀರಿಸಿಕೊಳ್ಳುವಲ್ಲಿ ಹರಿಣಗಳ ಪಡೆ ಯಶಸ್ವಿಯಾಗಿದೆ