
ಕಾರವಾರದ ಕಠಿಣಕೋಣ ಗ್ರಾಮದ ಮನೆಯೊಂದರ ಅಂಗಳದಲ್ಲಿ 8 ರಿಂದ 12 ಅಡಿ ಉದ್ದದ ಆರು ಬೃಹತ್ ಹೆಬ್ಬಾವುಗಳು ಪತ್ತೆಯಾಗಿವೆ. ಉರಗ ರಕ್ಷಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಈ ಹಾವುಗಳನ್ನು ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಕಾರವಾರ: ಬೃಹತ್ ಗಾತ್ರದ 6 ಹೆಬ್ಬಾವುಗಳು ಒಂದೇ ಕಡೆ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಹಾಗೂ ಅಚ್ಚರಿ ಮೂಡಿಸಿವೆ.
ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಕಠಿಣಕೋಣ ಗ್ರಾಮದ ನಿವಾಸಿ ವಿಜಯ ತಳೇಕರ ಅವರ ಮನೆಯ ಆವರಣದಲ್ಲಿ ಕೆಲವು ದಿನಬಳಕೆಯ ವಸ್ತುಗಳನ್ನು ದಾಸ್ತಾನು ಮಾಡಲಾಗಿತ್ತು. ಈ ವಸ್ತುಗಳ ಅಡಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವುಗಳು ಅಡಗಿ ಕುಳಿತಿದ್ದನ್ನು ಗಮನಿಸಿದ ಮನೆಯವರು ಉರಗ ರಕ್ಷಕ ಹಾಗೂ ಅರಣ್ಯ ಇಲಾಖೆಯ ಗಸ್ತು ವನಪಾಲಕ ಗೋಪಾಲ ನಾಯ್ಕ ಅವರಿಗೆ ಮಾಹಿತಿ ನೀಡಿದ್ದಾರೆ.
6 ಹೆಬ್ಬಾವುಗಳ ರಕ್ಷಣೆ
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಗೋಪಾಲ ನಾಯ್ಕ, ರಾಜೇಶ್ ನಾಯ್ಕ ಅವರ ನೆರವಿನೊಂದಿಗೆ ಕಾರ್ಯಾಚರಣೆಗಿಳಿದರು. ಪತ್ತೆಯಾದ ಆರೂ ಹೆಬ್ಬಾವುಗಳು ತಲಾ 8 ರಿಂದ 12 ಅಡಿ ಉದ್ದವಿದ್ದವು. ಯಾವುದೇ ಪ್ರಾಣಹಾನಿ ಅಥವಾ ಹಾವುಗಳಿಗೆ ತೊಂದರೆ ಆಗದಂತೆ ಅತ್ಯಂತ ಎಚ್ಚರಿಕೆಯಿಂದ ಎಲ್ಲ 6 ಹೆಬ್ಬಾವುಗಳನ್ನು ಸುರಕ್ಷಿತವಾಗಿ ಸೆರೆಹಿಡಿದು, ಬಳಿಕ ಅವುಗಳನ್ನು ಅರಣ್ಯಕ್ಕೆ ಬಿಡಲಾಯಿತು.
ಇದನ್ನೂ ಓದಿ: ಮೈಸೂರು ವೀಳ್ಯದೆಲೆ, ನಂಜನಗೂಡು ರಸಬಾಳೆ ಇಂಡಿಯ ಲಿಂಬೆಕಾಯಿ ಬಗ್ಗೆ ಪ್ರಧಾನಿ ಮೋದಿ ಫಿದಾ
ಹಾವುಗಳ ಮಿಲನಕ್ರಿಯೆಯ ಸಮಯ
ಈ ಕುರಿತು ಮಾಹಿತಿ ನೀಡಿರುವ ಉರಗ ರಕ್ಷಕ ಗೋಪಾಲ ನಾಯ್ಕ, ಬೇಸಿಗೆ ಕಾಲದ ಆರಂಭವು ಹಾವುಗಳ ಮಿಲನಕ್ರಿಯೆಯ ಸಮಯವಾಗಿದೆ. ಈ ಅವಧಿಯಲ್ಲಿ ಹೆಣ್ಣು ಹಾವನ್ನು ಹುಡುಕಿಕೊಂಡು ಗಂಡು ಹಾವುಗಳು ಬರುವುದು ಪ್ರಕೃತಿ ಸಹಜ. ಇದೇ ಕಾರಣಕ್ಕಾಗಿ ಒಂದೇ ಕಡೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಹೆಬ್ಬಾವುಗಳು ಸೇರಿದ್ದವು ಎಂದು ಸ್ಪಷ್ಟಪಡಿಸಿದ್ದಾರೆ. ಸಕಾಲದಲ್ಲಿ ಅರಣ್ಯ ಇಲಾಖೆ ಸ್ಪಂದಿಸಿದ್ದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: ಯಾವ ಶಾಸಕರಾದರೂ 5 ಲಕ್ಷ ತೆಗೆದುಕೊಳ್ತಾರಾ? ಚಂದ್ರು ಲಮಾಣಿ ಪರ ಶ್ರೀರಾಮುಲು ಬ್ಯಾಟಿಂಗ್