
ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಇದು ಉದ್ದೇಶಪೂರ್ವಕ ಕೃತ್ಯವೆಂದು ತಿಳಿದುಬಂದಿದೆ. ಸಾಲ ವಸೂಲಾತಿ ಏಜೆಂಟರ ಬೈಕ್‌ಗೆ ಡಿಕ್ಕಿ ಹೊಡೆದ ಕಾರು, ಅದೇ ಫೈನಾನ್ಸ್‌ನಿಂದ ಸಾಲ ಪಡೆದು 7.2 ಲಕ್ಷ ರೂ. ಇಎಂಐ ಬಾಕಿ ಉಳಿಸಿಕೊಂಡಿದ್ದ ವ್ಯಕ್ತಿಯದ್ದೇ ಎಂದು ತನಿಖೆಯಿಂದ ಬಯಲಾಗಿದೆ.
ಬೆಂಗಳೂರು: ಸದಾಶಿವನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಲೋನ್ ರಿಕವರಿ ಏಜೆಂಟರ ಬೈಕ್‌ಗೆ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾದ ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಈ ಕಾರು ಬೇರೆ ಯಾರದ್ದೂ ಅಲ್ಲ, ಈ ಫೈನಾನ್ಸ್ ಕಂಪನಿಯಿಂದ ಸಾಲ ಪಡೆದು ಹಲವು ತಿಂಗಳ ಇಎಂಐ ಬಾಕಿ ಉಳಿಸಿದ್ದ ವ್ಯಕ್ತಿಯದ್ದೇ ಎಂಬುದು ಪತ್ತೆಯಾಗಿದೆ.
45 ತಿಂಗಳ ಸಾಲದ ಕಂತು ಅಂದಾಜು 7.2 ಲಕ್ಷ ರು. ಬಾಕು ಉಳಿಸಿಕೊಂಡಿದ್ದ ವ್ಯಕ್ತಿ ಉದ್ದೇಶಪೂರ್ವಕವಾಗಿಯೇ ಕಾರಿನಿಂದ ಗುದ್ದಿರುವುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.
ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದ!
ಫೆ.18 ರಂದು ರಿಕವರಿ ಏಜೆಂಟರಾದ ರಮೇಶ್ ಮತ್ತು ಮುರುಳಿ ಎಂಬುವರ ಜತೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ವೇಗವಾಗಿ ಬಂದ ಫಾರ್ಚೂನರ್ ಕಾರು (ಕೆಎ-28-ಎಂಎಂ-9991) ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ನಂತರ ಕಾರಿನ ಸಮೇತ ಚಾಲಕ ಸ್ಥಳದಿಂದ ಪರಾರಿಯಾಗಿದ್ದ. ಈ ಸಂಬಂಧ ರಮೇಶ್ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಸ್ಥಳೀಯ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಆರೋಪಿ ಉದ್ದೇಶಪೂರ್ವಕವಾಗಿ ಕೃತ್ಯ ಎಸಗಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಾಗ್ವಾದ ಬಳಿಕ ಕೃತ್ಯ
ರಿಯಲ್ ಎಸ್ಟೇಟ್ ಉದ್ಯಮಿಯೂ ಆಗಿರುವ ಆರೋಪಿ ಫೈನಾನ್ಸ್ ಕಂಪನಿಯೊಂದರಿಂದ ಸಾಲದ ಮೇಲೆ ಕಾರು ಖರೀದಿಸಿದ್ದ. ಈ ಸಾಲದ ಹಲವು ಕಂತು ಪಾವತಿಸದೆ ಬಾಕಿ ಉಳಿಸಿಕೊಂಡಿದ್ದ ಎನ್ನಲಾಗಿದೆ. ಹೀಗಾಗಿ ಅವರನ್ನು ಸಂಪರ್ಕಿದ್ದ ಲೋನ್ ರಿಕವರಿ ಏಜೆಂಟ್‌ಗಳು ಬಾಕಿ ಇರುವ ಇಎಂಐ ಪಾವತಿಸುವಂತೆ ಸೂಚಿಸಿದ್ದು, ಈ ವೇಳೆ ವಾಗ್ವಾದವಾಗಿದೆ ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಆರೋಪಿ ಲೋನ್ ರಿಕವರಿ ಏಜೆಂಟ್‌ಗಳು ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಗುದ್ದಿಸಿ ನಂತರ ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣದ ವಿವರ
ಫೆ.18 ರಂದು ರಮೇಶ್ ಸ್ನೇಹಿತ ಮುರುಳಿ ಜತೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಸದಾಶಿವನಗರ 8ನೇ ಮುಖ್ಯರಸ್ತೆ ಟೆನೆಂಟ್ ಡಯಾಗ್ನೋಸ್ಟಿಕ್ ಮುಂಭಾಗದಲ್ಲಿ ಹೋಗುತ್ತಿದ್ದಾಗ ಸ್ಯಾಂಕಿ ಪಾರ್ಕ್ ಕಡೆಯಿಂದ ಬಂದಿದ್ದ ಫಾರ್ಚುನರ್ ಕಾರು (ಕೆಎ-28-ಎಂಎಂ-9991) ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಹೋಗಿತ್ತು. ಈ ಬಗ್ಗೆ ಅವರು ದೂರು ನೀಡಿದ್ದರು.
ಇದನ್ನೂ ಓದಿ: ಕೊಪ್ಪಳ ಜಾತ್ರೆಯಲ್ಲಿ ಬಾವುಟ ಸೃಷ್ಟಿಸಿದ ಬಿಕ್ಕಟ್ಟು, ದಲಿತರು-ಸವರ್ಣೀಯರ ನಡುವೆ ಗಲಾಟೆ, ಕ್ಷಣ ಮಾತ್ರದಲ್ಲಿ ಊರೇ ಸ್ಥಬ್ಧ!
ದೂರಿನನ್ವಯ ನಡೆಸಿದ ತನಿಖೆ ವೇಳೆ ಸಂಚಾರ ಪೊಲೀಸರು, ವಾಹನದ ನೋಂದಣಿ ಸಂಖ್ಯೆ ಪರಿಶೀಲಿಸಿ ಘಟನಾ ಸ್ಥಳದ ಸುತ್ತಲ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಚಾಲಕ ಉದ್ದೇಶಪೂರ್ವಕವಾಗಿಯೇ ಕೃತ್ಯ ಎಸಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ಸದಾಶಿವನಗರ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗೆ ವರ್ಗಾಸಿದ್ದಾರೆ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Akka Cafe Details: ಕರ್ನಾಟಕ ಮಹಿಳೆಯರಿಗೆ ಸುವರ್ಣಾವಕಾಶ, ಅಕ್ಕ ಕೆಫೆ ಆರಂಭಿಸಿ, ಸಂಪಾದನೆ ಶುರು ಮಾಡಿ