
ಈ ಹಿಂದೆ ಜೈಲಿನೊಳಗೆ ಕೈದಿಗಳು ಐಷಾರಾಮಿ ಜೀವನ ನಡೆಸುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ನಿರಂತರ ವರದಿಗಳು ಪ್ರಕಟವಾಗಿದ್ದವು. ಕೈದಿಗಳ ಕಳ್ಳಾಟ, ಹಣದ ಲೇವಾದೇವಿ, ಜೈಲಿನೊಳಗೆ ನಿಷೇಧಿತ ವಸ್ತುಗಳ ಬಳಕೆ ಬಹಿರಂಗವಾಗಿ ಚರ್ಚೆಗೆ ಗ್ರಾಸವಾಗಿತ್ತು. ಕೆಲ ಕೈದಿಗಳು ತಮ್ಮ ಸೆಲ್‌ಗಳನ್ನು ಐಷಾರಾಮಿ ಕೊಠಡಿಗಳಂತೆ ರೂಪಿಸಿಕೊಂಡು, ಅಡುಗೆ ಪಾತ್ರೆಗಳು, ಅಡುಗೆ ಸಾಮಗ್ರಿಗಳು, ಹೆಚ್ಚುವರಿ ಬಟ್ಟೆಗಳು, ಶೂಗಳು, ಬೆಡ್ಶೀಟ್‌ಗಳು, ದಿಂಬುಗಳು ಸೇರಿದಂತೆ ದಿನನಿತ್ಯದ ಅಗತ್ಯಕ್ಕಿಂತ ಹೆಚ್ಚಿನ ವಸ್ತುಗಳನ್ನು ಸಂಗ್ರಹಿಸಿಕೊಂಡಿದ್ದರು. ಇದಲ್ಲದೆ ಮೊಬೈಲ್ ಫೋನ್, ಸಿಮ್ ಕಾರ್ಡ್, ಚಾರ್ಜರ್, ಇಯರ್‌ಫೋನ್‌ಗಳ ಬಳಕೆ, ಕುಳಿತುಕೊಳ್ಳಲು ಚೇರ್, ಮನರಂಜನೆಗಾಗಿ ಟಿವಿ ವ್ಯವಸ್ಥೆಯೂ ಇದ್ದದ್ದು ಬೆಳಕಿಗೆ ಬಂದಿತ್ತು. ಕೈದಿಗಳಿಂದ ಹಣ ಪಡೆದು ಜೈಲಾಧಿಕಾರಿಗಳು ಹಾಗೂ ಸಿಬ್ಬಂದಿಗಳು ‘ರಾಜಾತಿಥ್ಯ’ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳೂ ಕೇಳಿಬಂದಿದ್ದವು.