Headlines

ಧಾರವಾಡ-ರಾಮನಗರ ಸಂಪರ್ಕಿಸೋ ಆ ಕಾಲದ ಸೇತುವೆ, ಹೊಸ ತಾಲೂಕು ಅಳ್ನಾವರಕ್ಕೆ ಅಪಾಯದಂಚಲ್ಲಿರುವ ಹಳೇ ಸೇತುವೆಗಳೇ ಸಮಸ್ಯೆ! | Alnavar Bridges At Risk British Era Structure On Sh 93 Crumbling Locals Demand Immediate Repairs

ಧಾರವಾಡ-ರಾಮನಗರ ಸಂಪರ್ಕಿಸೋ ಆ ಕಾಲದ ಸೇತುವೆ, ಹೊಸ ತಾಲೂಕು ಅಳ್ನಾವರಕ್ಕೆ ಅಪಾಯದಂಚಲ್ಲಿರುವ ಹಳೇ ಸೇತುವೆಗಳೇ ಸಮಸ್ಯೆ! | Alnavar Bridges At Risk British Era Structure On Sh 93 Crumbling Locals Demand Immediate Repairs



ಧಾರವಾಡ-ರಾಮನಗರ ಸಂಪರ್ಕಿಸೋ ಆ ಕಾಲದ ಸೇತುವೆ, ಹೊಸ ತಾಲೂಕು ಅಳ್ನಾವರಕ್ಕೆ ಅಪಾಯದಂಚಲ್ಲಿರುವ ಹಳೇ ಸೇತುವೆಗಳೇ ಸಮಸ್ಯೆ! | Alnavar Bridges At Risk British Era Structure On Sh 93 Crumbling Locals Demand Immediate Repairs

ಅಳ್ನಾವರ ತಾಲೂಕಿನಲ್ಲಿರುವ ಬ್ರಿಟಿಷರ ಕಾಲದ ಸೇತುವೆಗಳು ಸೇರಿದಂತೆ ಪ್ರಮುಖ ಸಂಪರ್ಕ ಕೊಂಡಿಗಳಾದ ಹಳೆಯ ಸೇತುವೆಗಳು ಶಿಥಿಲಾವಸ್ಥೆಗೆ ತಲುಪಿವೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ಸೇತುವೆಗಳ ದುರಸ್ತಿಗೆ ಸ್ಥಳೀಯ ಆಡಳಿತ ಗಮನ ಹರಿಸದ ಕಾರಣ, ಮಳೆಗಾಲಕ್ಕೂ ಮುನ್ನ ಅನಾಹುತ ಸಂಭವಿಸುವ ಆತಂಕ ಎದುರಾಗಿದೆ.

ವರದಿ: ಶಶಿಕುಮಾರ ಪತಂಗೆ

ಅಳ್ನಾವರ: ಅಪಾಯದ ಅಂಚನ್ನು ತಲುಪುತ್ತಿರುವ ಸೇತುವೆಗಳನ್ನು ಗುರುತಿಸಿ ಅವುಗಳ ದುರಸ್ತಿ ಮಾಡಬೇಕಿದ್ದ ಸ್ಥಳೀಯ ಆಡಳಿತ ಕಣ್ಮುಚ್ಚಿ ಕುಳಿತಿದ್ದು, ಹೊಸ ತಾಲೂಕಾದರೂ ಅಳ್ನಾವರದಲ್ಲಿ ಹಳೇ ಸೇತುವೆಗಳ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಇದು ತಾಲೂಕಿನ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಪಟ್ಟಣದಿಂದ ಹಳಿಯಾಳಕ್ಕೆ ಸಂಪರ್ಕ ಕಲ್ಪಿಸುವ ಖಾನಾಪುರ-ತಾಳಗುಪ್ಪ ರಾಜ್ಯ ಹೆದ್ದಾರಿ 93ರಲ್ಲಿರುವ ಈ ಸೇತುವೆ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದೆ. ಮಹಾರಾಷ್ಟ್ರ, ಬೆಳಗಾವಿ, ರಾಮನಗರಗಳಿಂದ ಹಳಿಯಾಳ-ದಾಂಡೇಲಿ-ಕಾರವಾರಕ್ಕೆ ಹೋಗುವ ಎಲ್ಲ ಬಸ್‌, ಇತರೆ ವಾಹನಗಳು ಈ ಸೇತುವೆಯನ್ನೇ ನೆಚ್ಚಿವೆ. ಸೇತುವೆ ನಿರ್ಮಾಣ ಆದಾಗಿನಿಂದಲೂ ಹಲವು ಬಾರಿ ಸೇತುವೆ ಕೆಳಗಿನ ಹಳ್ಳಕ್ಕೆ ಪ್ರವಾಹ ಬಂದರೂ ಜಗ್ಗದೆ ಭದ್ರವಾಗಿ ತನ್ನ ಅಸ್ತಿತ್ವ ಉಳಿಸಿಕೊಂಡಿದೆ.

ಆದರೆ, ಕಾಲ ಕಾಲಕ್ಕೆ ಸೇತುವೆ ನಿರ್ವಹಣೆ, ಸ್ವಚ್ಛತೆ ಇಲ್ಲದೇ ದಿನದಿಂದ ದಿನಕ್ಕೆ ಸೇತುವೆಗೂ ವಯಸ್ಸಾಗುತ್ತಿದೆ. ನಿಧಾನವಾಗಿ ಸೇತುವೆಯ ಮೊದಲಿನ ಕಸುವು ಕಳೆದುಕೊಳ್ಳುತ್ತಿದ್ದು, ಶಿಥಿಲಾವಸ್ಥೆಗೆ ತಲುಪಿದ್ದು ಎರಡು ಬದಿಗೆ ಆಲದ ಮರದ ಕೊಂಬೆಗಳು ಬೆಳೆದು ನಿಂತಿವೆ. ಭದ್ರತೆ ದೃಷ್ಟಿಯಿಂದ ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕಿದೆ.

ಅಪಾಯದಲ್ಲಿವೆ ಅಳ್ನಾವರ-ಹಳಿಯಾಳ, ಅಳ್ನಾವರ-ರಾಮನಗರ ಸೇತುವೆ

ಅಳ್ನಾವರ-ಹಳಿಯಾಳ ತಾಲೂಕುಗಳ ಮಧ್ಯೆ ಡೌಗಿ ಹಳ್ಳಕ್ಕೆ ಇರುವುದು ಇದೊಂದೇ ಸೇತುವೆ. ಇದನ್ನು ಹೊರತುಪಡಿಸಿದರೆ ಹಳಿಯಾಳಕ್ಕೆ ಮತ್ತಾವ್ಯ ಸಂಚಾರ ಮಾರ್ಗಗಳಾಗಲಿ ಅಥವಾ ಮತ್ತೊಂದು ಸೇತುವೆಗಳಾಗಲಿ ಇಲ್ಲ. ಆದ್ದರಿಂದ ಮಳೆಗಾಲಕ್ಕೂ ಮುಂಚೆ ಈ ಸೇತುವೆ ಪಕ್ಕದಲ್ಲಿ ಮತ್ತೊಂದು ಸೇತುವೆ ನಿರ್ಮಾಣ ಮತ್ತು ಇದೇ ಸೇತುವೆಗೆ ದುರಸ್ತಿ ಕಾಮಗಾರಿ ಅವಶ್ಯವಾಗಿದೆ ಎಂದು ಜನರು ಆಗ್ರಹಿಸಿದ್ದಾರೆ.

ಇನ್ನು, ಧಾರವಾಡ-ರಾಮನಗರ ರಸ್ತೆಯ ಅಳ್ನಾವರ ಕ್ರಾಸ್ ಬಳಿಯಿರುವ ಸೇತುವೆ ಸ್ಥಿತಿ ಬೇರಿಲ್ಲ. ಇಲ್ಲಿಯೂ ಸೇತುವೆ ಸುತ್ತಲೂ ಸಾಕಷ್ಟು ಗಿಡ-ಗಂಟಿಗಳು ಬೆಳೆದಿವೆ. ಬೆಳಗಾವಿ ಮತ್ತು ಗೋವಾಕ್ಕೆ ಹೋಗುವ ರಸ್ತೆಗೆ ಈ ಸೇತುವೆ ಇದ್ದು, ನಿತ್ಯ ಸಾವಿರಾರು ವಾಹನಗಳು ಅದರಲ್ಲೂ ಅದಿರು ಲಾರಿಗಳು ಪ್ರಮುಖವಾಗಿ ಸಂಚರಿಸುತ್ತವೆ. ಧಾರವಾಡ-ರಾಮನಗರ ರಸ್ತೆ ನಿರ್ಮಾಣ ಮಾಡುವಾಗ ಈ ಸೇತುವೆ ಪಕ್ಕದಲ್ಲಿ ಇನ್ನೊಂದು ಸೇತುವೆ ನಿರ್ಮಿಸಲಾಗಿತ್ತು. ಆದರೆ, ಹೊಸ ಸೇತುವೆ ಪ್ರಾರಂಭಕ್ಕೂ ಮುನ್ನವೇ ಸೇತುವೆ ಒಂದಿಷ್ಟು ಭಾಗ ಕಳಚಿ ಬಿದ್ದಿದ್ದು, ಆ ಸೇತುವೆಯಲ್ಲಿ ಯಾರೂ ಸಂಚರಿಸುತ್ತಿಲ್ಲ.

ದುರಸ್ತಿ ಕಾರ್ಯ ನಡೆಯುತ್ತಿಲ್ಲ

ಧಾರವಾಡ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುವ ತಾಲೂಕುಗಳಲ್ಲಿ ಅಳ್ನಾವರ ಪ್ರಥಮ ಸ್ಥಾನದಲ್ಲಿದೆ. ಇಲ್ಲಿ ಹೆಚ್ಚಿನ ಕೆರೆ, ಸೇತುವೆಗಳಿದ್ದು, ಅವುಗಳ ದುರಸ್ತಿ ಕಾರ್ಯ ಆಗಾಗ ನಡೆಯುತ್ತಿಲ್ಲ. ಈ ಸೇತುವೆಗಳು ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದು, ಹೊಸ ಸೇತುವೆ, ದುರಸ್ತಿಗಾಗಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕ್ರಮಕೈಗೊಳ್ಳಬೇಕಿದೆ. ಮಳೆಗಾಲದಲ್ಲಿ ಅನಾಹುತ ಆಗುವ ಮುಂಚೆಯೇ ಇಂತಹ ಕಾರ್ಯ ಕೈಗೊಳ್ಳಬೇಕಿದೆ ಎಂಬುದು ಸ್ಥಳೀಯರ ಹಕ್ಕೊತ್ತಾಯ.

ಅಳ್ನಾವರಕ್ಕೆ ಪ್ರಮುಖವಾಗಿ ಈ ಎರಡು ಸೇತುವೆಗಳು ಬಹಳ ಹಳೆಯವು. ಶೀಘ್ರವಾಗಿ ಈ ಸೇತುವೆಗಳ ದುರಸ್ತಿ ಮತ್ತು ಹಳಿಯಾಳ ರಸ್ತೆಗೆ ಇನ್ನೊಂದು ಹೊಸ ಸೇತುವೆ ನಿರ್ಮಾಣವಾಗಬೇಕು. ಮಳೆಗಾಲದೊಳಗೆ ಜಿಲ್ಲಾಡಳಿತ, ತಾಲೂಕಾಡಳಿತ ಕೂಡಲೇ ಕ್ರಮ ವಹಿಸಬೇಕು ಎಂದು ಅಳ್ನಾವರ ನಿವಾಸಿ ಪ್ರವೀಣ ಪವಾರ ಹೇಳುತ್ತಾರೆ.



Source link

Leave a Reply

Your email address will not be published. Required fields are marked *