
ಹರ್ಯಾಣದ ಫರಿದಾಬಾದ್ನ ಅಪಾರ್ಟ್ಮೆಂಟ್ ಒಂದರಲ್ಲಿ, ಕೆಳಮಹಡಿಗೆ ಬಿದ್ದ ಸೀರೆಯನ್ನು ತರಲು ತಾಯಿಯೊಬ್ಬಳು ತನ್ನ ಮಗನನ್ನೇ ಮತ್ತೊಂದು ಸೀರೆಯ ಸಹಾಯದಿಂದ ಕೆಳಗೆ ಇಳಿಸಿದ್ದಾಳೆ. ಮಗನ ಜೀವವನ್ನು ಅಪಾಯಕ್ಕೆ ತಳ್ಳಿದ ಈ ಘಟನೆಯ ವೀಡಿಯೋ ವೈರಲ್ ಆಗಿದ್ದು, ತಾಯಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸೀರೆಗಾಗಿ ಮಗನ ಜೀವವನ್ನೇ ಅಪಾಯಕ್ಕೊಡಿದ ತಾಯಿ:
ಹೆಂಗೆಳೆಯರಿಗೆ ಸೀರೆಯೇ ಮೇಲಿರುವ ಪ್ರೀತಿಯ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ, ಎಷ್ಟೇ ಮಾಡರ್ನ್ ಫ್ಯಾಷನ್ ಮಾಡಿದ್ರೂ ಸೀರೆಯುಟ್ಟಾಗ ತಮ್ಮನ್ನು ತಾವು ಇಷ್ಟಪಡೇ ಇರೋರು ತೀರಾ ವಿರಳ. ಇತ್ತೀಚೆಗೆ ಸೀರೆಗಾಗಿಯೇ ಜನ ರಸ್ತೆಯಲ್ಲೇ ಕಿಲೋ ಮೀಟರ್ ದೂರದವರೆಗೆ ಕ್ಯೂ ನಿಂತಿದ್ದ ಸುದ್ದಿಯನ್ನು ನೀವು ಗಮನಿಸಿಯೇ ಇರುತ್ತೀರಿ. ಆದರೆ ಇಲ್ಲೊಂದು ಕಡೆ ಮಹಿಳೆಯೊಬ್ಬರು ಸೀರೆಗಾಗಿ ತನ್ನ ಮಗನ ಜೀವನವನ್ನೇ ಅಪಾಯಕ್ಕೆ ತಳ್ಳಿದ್ದಾಳೆ. ಹೌದು ಇಂತಹದೊಂದು ಘಟನೆ ಹರ್ಯಾಣದ ಫರಿದಾಬಾದ್ನ ಅಪಾರ್ಟ್ಮೆಂಟ್ನಲ್ಲಿ ನಡೆದಿದ್ದು, ಈ ಘಟನೆಯ ವೀಡಿಯೋ ಈಗ ವೈರಲ್ ಆಗಿದೆ. ಒಂದು ಸೀರೆಗಾಗಿ ಮಗನ ಜೀವವನ್ನೇ ಅಪಾಯಕ್ಕೆ ಒಡ್ಡಿದ ಮಹಿಳೆಯ ಬಗ್ಗೆ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹರ್ಯಾದನ ಫರಿದಾಬಾದ್ನ ಗ್ರಾಂಡುರಾ ಸೊಸೈಟಿ, ಸೆಕ್ಟರ್ 82 ರಲ್ಲಿನ ಅಪಾರ್ಟ್ಮೆಂಟೊಂದರಲ್ಲಿ ಘಟನೆ ನಡೆದಿದೆ. ಸಾಮಾನ್ಯವಾಗಿ ದೊಡ್ಡ ದೊಡ್ಡ ಅಪಾರ್ಟ್ಮೆಂಟ್ಗಳಲ್ಲಿ ಬಟ್ಟೆ ಒಣಗಿಸುವುದಕ್ಕೆ ಅನೇಕ ಮಹಿಳೆಯರು ಅಪಾರ್ಟ್ಮೆಂಟ್ನ ಬಾಲ್ಕನಿಯ ರಕ್ಷಣಾ ಗ್ರಿಲ್ಗಳನ್ನೇ ಬಳಸುತ್ತಾರೆ. ಅದೇ ರೀತಿ ಇಲ್ಲೊಬ್ಬರು ಮಹಿಳೆ ತಮ್ಮ ಸೀರೆ ಸೇರಿದಂತೆ ಬಟ್ಟೆಯನ್ನು ಈ ಕಬ್ಬಿಣದ ಗ್ರಿಲ್ ಮೇಲೆ ಹಾಕಿದ್ದು, ಗಾಳಿಯರ ಭಸಕ್ಕೋ ಏನೋ ಆ ಸೀರೆ ಬಾಲ್ಕನಿಯಿಂದ ಜಾರಿ ಕೆಳಗಿನ ಪ್ಲೋರ್ಗೆ ಬಿದ್ದಿದೆ.
ಇದನ್ನೂ ಓದಿ: ಮನೆ ಕೆಲಸದಾಕೆ ಮಾಡಿದ ತಪ್ಪಾದರು ಏನು: ವೀಡಿಯೋ ಮಾಡಿ ಈಕೆನಾ ಕೆಲಸದಿಂದ ತೆಗಿಲಾ ಬೇಡ್ವಾ ಕೇಳಿದ ಮನೆ ಒಡತಿ
ಈ ಸೀರೆಯನ್ನು ಕೆಳಗಿನ ಮಹಡಿಯಲ್ಲಿ ವಾಸವಿರುವವರ ಬಳಿ ಕೇಳಿ ಪಡೆಯಬಹುದಿತ್ತು. ಅಥವಾ ಒಂದು ಸೀರೆಯಲ್ಲಿ ಪ್ರಾಣ ಹೋಗುವಂತಹದ್ದೇನು ಇರಲಿಲ್ಲ, ಹೋಗಲಿ ಬಿಡು ಎಂದು ಸುಮ್ಮನೇ ಇರಬಹುದಿತ್ತು. ಆದರೆ ಈ ತಾಯಿ ಕೆಳಗೆ ಬಿದ್ದ ಸೀರೆಯನ್ನು ಮೇಲೆತ್ತುವುದಕ್ಕಾಗಿ ಮತ್ತೊಂದು ಸೀರೆಯನ್ನು ಬಾಲ್ಕನಿಯ ಗ್ರಿಲ್ಗೆ ಕಟ್ಟಿ ತನ್ನ ಮಗನನ್ನು ಆ ಸೀರೆಯ ಮೂಲಕ ಕೆಳಗೆ ಇಳಿಬಿಟ್ಟು ಸೀರೆಯನ್ನು ತೆಗೆದುಕೊಂಡು ಬರುವಂತೆ ಕಳಿಸಿದ್ದಾಳೆ. ಹಾಗಂತ ಇದೇನು ಕೇವಲ ಎರಡು ಅಂತಸ್ಥಿನ ಮನೆಯಲ್ಲ ಹಲವು ಅಪಾರ್ಟ್ಮೆಂಟ್ಗಳಿರುವ ಗಗನಚುಂಬಿ ಕಟ್ಟಡ ಕೆಳಗೆ ಬಿದ್ದರೆ ಮೂಳೆಯೂ ಚೂರು ಚೂರಾಗೋದು ಪಕ್ಕಾ. ಆದರೂ ಆ ತಾಯಿ ಯಾವುದೇ ಹೆದರಿಕೆ ಇಲ್ಲದೇ ಧೈರ್ಯವಾಗಿ ತನ್ನ ಹದಿಹರೆಯದ ಅಪ್ರಾಪ್ತ ಮಗನನ್ನು ಸೀರೆಯ ಮೂಲಕ ಕೆಳಗೆ ಬಿಟ್ಟು ಬಿದ್ದ ಸೀರೆಯನ್ನು ವಾಪಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ.
ಅದೃಷ್ಟವಶಾತ್ ಯಾವುದೇ ಅನಾಹುತವಾಗದೇ ಆ ಬಾಲಕ ತಾಯಿಯ ಸೀರೆಯನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ವೀಡಿಯೋ ನೋಡಿದವರು ಒಂದು ಸೀರೆಗಾಗಿ ಪುಟ್ಟ ಬಾಲಕನ ಜೀವವನ್ನು ಅಪಾಯಕ್ಕೊಡ್ಡಿದ ತಾಯಿಯ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗುವಿನ ಜೀವಕ್ಕಿಂತಲೂ ಯಾವ ಸೀರೆಯೇ ಮೌಲ್ಯ ಕೂಡ ಹೆಚ್ಚಾಗಲು ಸಾಧ್ಯವಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುಶಃ ಈ ತಾಯಿ ಮಗ ಫೈರ್ ಸರ್ವೀಸ್ನಲ್ಲಿ ಕೆಲಸ ಮಾಡ್ತಿರಬೇಕು ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ಬಹುಶಃ ಅಮೆರಿಕಾ ಕೆನಡಾದಂತಹ ದೇಶಗಳಲ್ಲಿ ತಾಯಿ ಹೀಗೆ ಮಾಡಿದ್ದರೆ ಕನಿಷ್ಠ 10 ವರ್ಷ ಆಕೆ ಜೈಲಿನಲ್ಲಿ ಕಳೆಯಬೇಕಾಗಿರುತ್ತಿತ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಪಂಜಾಬ್ನಲ್ಲಿ ಮತ್ತೊಂದು ಗುಂಡಿನ ದಾಳಿ: ಹಾಡಹಗಲೇ 23 ವರ್ಷದ ನವ ವಿವಾಹಿತೆಗೆ ಗುಂಡೇಟು : ಸಿಸಿಟಿವಿಯಲ್ಲಿ ದೃಶ್ಯ ಸೆರೆ