ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‌ ಸಮಾವೇಶ-ಜಿ ರಾಮ್‌ ಜಿ ರದ್ಧತಿವರೆಗೂ ಹೋರಾಟ ನಿಲ್ಲಲ್ಲ : ಸಿದ್ದರಾಮಯ್ಯ | Will Not Stop Protest Until G Ram G Is Withdrawn Siddaramaiah

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‌ ಸಮಾವೇಶ-ಜಿ ರಾಮ್‌ ಜಿ ರದ್ಧತಿವರೆಗೂ ಹೋರಾಟ ನಿಲ್ಲಲ್ಲ : ಸಿದ್ದರಾಮಯ್ಯ | Will Not Stop Protest Until G Ram G Is Withdrawn Siddaramaiah



ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‌ ಸಮಾವೇಶ-ಜಿ ರಾಮ್‌ ಜಿ ರದ್ಧತಿವರೆಗೂ ಹೋರಾಟ ನಿಲ್ಲಲ್ಲ : ಸಿದ್ದರಾಮಯ್ಯ | Will Not Stop Protest Until G Ram G Is Withdrawn Siddaramaiah

ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ‘ವಿಬಿ ಜಿ ರಾಮ್ ಜಿ’ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನರಿಗೆ ಕರೆ ನೀಡಿದ್ದಾರೆ.

ಚಿಕ್ಕಬಳ್ಳಾಪುರ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮನರೇಗಾದ ಸ್ವರೂಪ ಬದಲಿಸಿ ಬಡವರ, ದೀನದಲಿತರ, ಶೋಷಿತರ ಉದ್ಯೋಗದ ಹಕ್ಕನ್ನು ಕಿತ್ತುಕೊಂಡಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ‘ವಿಬಿ ಜಿ ರಾಮ್ ಜಿ’ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಬೇಕೆಂದು ರಾಜ್ಯದ ಜನರಿಗೆ ಕರೆ ನೀಡಿದ್ದಾರೆ.

ಬಯಲುಸೀಮೆಯ ಹೆಬ್ಬಾಗಿಲು ಚಿಕ್ಕಬಳ್ಳಾಪುರ ಹೊರವಲಯದ ಅಗಲಗುರ್ಕಿಯಲ್ಲಿ ಸೋಮವಾರ ನಡೆದ ‘ಅಖಿಲ ಭಾರತ ಮಟ್ಟದ ನರೇಗಾ ಬಜಾವ್‌ ಆಂದೋಲನ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿಧಾನಸೌಧದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದ ಭವ್ಯ ವೇದಿಕೆಯಲ್ಲಿ ಸನಿಕೆಯಿಂದ ಮಣ್ಣು ಎತ್ತಿ ಬಾಣಲೆಗೆ ಸುರಿದು ತಲೆಯ ಮೇಲೆ ಹೊರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ದು, ತಮ್ಮ ಭಾಷಣದುದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಚಳಿಗಾಲದ ಅಧಿವೇಶನದಲ್ಲಿ ಕೇಂದ್ರದ ಎನ್‌ಡಿಎ ಸರ್ಕಾರ ಮನರೇಗಾವನ್ನು ರದ್ದುಪಡಿಸಿ, ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಜಾರಿ ಮಾಡಿದೆ. ಮನರೇಗಾದ ರದ್ದು ಅಗತ್ಯವಿರಲಿಲ್ಲ. ಹೀಗಾಗಿ, ಕಾಂಗ್ರೆಸ್‌ನಿಂದ ದೇಶಾದ್ಯಂತ ‘ಮನರೇಗಾ ಉಳಿಸಿ’ ಅಭಿಯಾನ ಪ್ರಾರಂಭಿಸಲಾಗಿದೆ. ಮನರೇಗಾವನ್ನು ಮರುಸ್ಥಾಪಿಸುವವರೆಗೂ ಹೋರಾಟ ಮುಂದುವರಿಯಲಿದೆ. ಈ ಹೋರಾಟಕ್ಕೆ ಬೆಂಬಲ ನೀಡಿ ಎಂದು ಕರೆ ನೀಡಿದರು.

ಕೂಲಿಕಾರರು, ಆದಿವಾಸಿಗಳು, ಸಣ್ಣ ರೈತರಿಗೆ, ಮಹಿಳೆಯರಿಗೆ ಉದ್ಯೋಗದ ಅನುಕೂಲ ಕಲ್ಪಿಸುವ ದಿಸೆಯಲ್ಲಿ 2005ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ, ನಾಯಕಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಈ ಕಾಯ್ದೆ ಜಾರಿಯಾಯಿತು. ಈ ಕಾಯ್ದೆಯಲ್ಲದೆ, ಶಿಕ್ಷಣ, ಆಹಾರ, ಮಾಹಿತಿ ಹಕ್ಕು ಸೇರಿದಂತೆ ಹಲವು ಜನಪರ ಕಾಯ್ದೆಗಳನ್ನು ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದೆ. ಆದರೆ, ಕಾಂಗ್ರೆಸ್‌ನ ಈ ಎಲ್ಲ ಜನಪರ ಕಾಯ್ದೆಗಳನ್ನು ದುರ್ಬಲಗೊಳಿಸುವ ಕೆಲಸವನ್ನು ಮೋದಿಯವರ ನೇತೃತ್ವದ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.

12.16 ಕೋಟಿ ಜನರಿಗೆ ಉದ್ಯೋಗ:

ಸದನದಲ್ಲಿ ಕೇವಲ 8 ಗಂಟೆಗಳ ಕಾಲ ಚರ್ಚೆ ಮಾಡಿದ ಕೇಂದ್ರ ಸರ್ಕಾರ, ನಂತರ ಹೊಸ ಕಾಯ್ದೆಯನ್ನು ಜಾರಿಗೆ ತಂದಿತು. ಮನರೇಗಾದಲ್ಲಿ 12.16 ಕೋಟಿ ಜನರು ಕೆಲಸ ಪಡೆಯುತ್ತಿದ್ದರು. ಶೇ.53ರಷ್ಟು ಗ್ರಾಮೀಣ ಭಾಗದ ಮಹಿಳೆಯರಿಗೆ ಉದ್ಯೋಗ ಸಿಗುತ್ತಿತ್ತು. ಪರಿಶಿಷ್ಟ ಜಾತಿಯ ಶೇ.17ರಷ್ಟು ಮತ್ತು ಪರಿಶಿಷ್ಟ ವರ್ಗದ ಶೇ.11ರಷ್ಟು ಜನರು ಇದರಿಂದ ಉದ್ಯೋಗ ಪಡೆಯುತ್ತಿದ್ದರು. ಈ ಎಲ್ಲ ಜನರ ಹಕ್ಕುಗಳನ್ನು ಈಗ ಕಸಿದುಕೊಳ್ಳಲಾಗಿದೆ ಎಂದು ವಿಷಾದಿಸಿದರು.

ಶಕ್ತಿ ತುಂಬಿದ್ದ ಮನರೇಗಾ:

ಮನರೇಗಾ ಕಾಯ್ದೆಗೆ ಗ್ರಾಮೀಣಾಭಿವೃದ್ಧಿಯ ಕನಸು ಕಂಡಿದ್ದ ಮಹಾತ್ಮಾಗಾಂಧಿಯವರ ಹೆಸರನ್ನು ಇಡಲಾಗಿತ್ತು. ಅವರ ಗ್ರಾಮ ಸ್ವರಾಜ್ಯದ ಕಲ್ಪನೆಗೆ ಮನರೇಗಾ ಶಕ್ತಿ ತುಂಬಿತ್ತು. 100 ದಿನಗಳ ಉದ್ಯೋಗದ ಖಾತ್ರಿ ನೀಡುತ್ತಿದ್ದ ಮನರೇಗಾ ಕಾಯ್ದೆಯಡಿ, ಕೂಲಿಕಾರರು ತಮ್ಮ ಸ್ಥಳೀಯ ಮಟ್ಟದಲ್ಲಿಯೇ ಕೆಲಸ ಮಾಡಬಹುದಿತ್ತು. ಗ್ರಾಮ ಪಂಚಾಯಿತಿ ಮತ್ತು ಗ್ರಾಮಸಭೆಗಳಿಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರವಿತ್ತು. ಆದರೀಗ ಈ ನಿರ್ಧಾರವನ್ನು ಕೇಂದ್ರ ಸರ್ಕಾರವೇ ಕೈಗೊಳ್ಳಲಿದೆ. ಕೇಂದ್ರದ ಅನುದಾನ, ಅನುಮತಿ ಇಲ್ಲದೆ, ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಈಗ ಯಾವುದೇ ಕೆಲಸವಾಗಲು ಸಾಧ್ಯವಿಲ್ಲ. ಆದ್ದರಿಂದ ಮನರೇಗಾ ವನ್ನು ಮುಂದುವರಿಸಬೇಕೆಂಬುದು ಕಾಂಗ್ರೆಸ್ ಸರ್ಕಾರದ ಒತ್ತಾಯ ಎಂದರು.

ಬೇಡಿಕೆ ಈಡೇರುವವರೆಗೂ ಹೋರಾಟ:

ವಿಬಿ ಜಿ ರಾಮ್ ಜಿ ಯೋಜನೆಯನ್ನು ಸಂಪೂರ್ಣವಾಗಿ ರದ್ದುಪಡಿಸಿ, ಮನರೇಗಾವನ್ನು ಮರು ಜಾರಿಗೊಳಿಸಬೇಕು. ಜನರ ಉದ್ಯೋಗದ ಹಕ್ಕನ್ನು ಮರುಸ್ಥಾಪಿಸಬೇಕು. ದಿನಕ್ಕೆ 400 ರು.ಗಳ ಕನಿಷ್ಠ ವೇತನ ನೀಡಬೇಕು. ಈ ಎಲ್ಲಾ ಬೇಡಿಕೆಗಳು ಈಡೇರುವವರೆಗೂ ನಮ್ಮ ಆಂದೋಲನ ನಿಲ್ಲುವುದಿಲ್ಲ ಎಂದು ಘೋಷಿಸಿದರು.

ಆರುವ ಮುನ್ನ ದೀಪ ಜೋರಾಗಿ ಉರಿಯುತ್ತೆ

ದೀಪ ಆರುವ ಮುನ್ನ ಜೋರಾಗಿ ಉರಿಯುತ್ತೆ. ಅದೇ ರೀತಿ, ಬಿಜೆಪಿ ಕೂಡ ನರೇಗಾದಿಂದ ಗಾಂಧಿ ಹೆಸರನ್ನು ಕಿತ್ತು, ಜಿ ರಾಮ್ ಜಿ ಎಂದು ಮರು ನಾಮಕರಣ ಮಾಡಿದೆ. ಆದರೆ, ಗಾಂಧಿ ಹೆಸರನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಮುಂದೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಮನರೇಗಾ ಮರುಸ್ಥಾಪಿಸಲಿದೆ.

ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ

ಬಿಜೆಪಿ ಬಡಜನರ ಹೊಟ್ಟೆಗೆ ಹೊಡೆದಿದೆ

ಕೇಂದ್ರ ಸರ್ಕಾರ ಮನರೇಗಾ ಯೋಜನೆ ಕೈಬಿಟ್ಟಿದ್ದು, ಕಾಂಗ್ರೆಸ್ ಮೇಲೆ ನಡೆಸಿದ ಹಲ್ಲೆಯಲ್ಲ. ಬದಲಾಗಿ, ಬಿಜೆಪಿ ಮತ್ತು ಜೆಡಿಎಸ್ ಸೇರಿಕೊಂಡು, ಕುತಂತ್ರ ಮಾಡಿ, ಶ್ರಮಿಕರ, ರೈತರ, ಬಡಜನರ ಹೊಟ್ಟೆ ಪಾಡಿನ ಮೇಲೆ ನಡೆಸಿದ ಹಲ್ಲೆ‌.

ರಣದೀಪ್‌ ಸುರ್ಜೇವಾಲಾ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ



Source link

Leave a Reply

Your email address will not be published. Required fields are marked *