ಕರ್ನಾಟಕ ಅಗ್ನಿಶಾಮಕ ಇಲಾಖೆ ನೇಮಕಾತಿ: 1600+ ಹುದ್ದೆಗಳ ಭರ್ತಿ- ಡಾ.ಜಿ. ಪರಮೇಶ್ವರ ಘೋಷಣೆ | Karnataka Fire Services Recruitment 1600 Jobs Home Minister Parameshwara Announcement Sat

ಕರ್ನಾಟಕ ಅಗ್ನಿಶಾಮಕ ಇಲಾಖೆ ನೇಮಕಾತಿ: 1600+ ಹುದ್ದೆಗಳ ಭರ್ತಿ- ಡಾ.ಜಿ. ಪರಮೇಶ್ವರ ಘೋಷಣೆ | Karnataka Fire Services Recruitment 1600 Jobs Home Minister Parameshwara Announcement Sat



ಕರ್ನಾಟಕ ಅಗ್ನಿಶಾಮಕ ಇಲಾಖೆ ನೇಮಕಾತಿ: 1600+ ಹುದ್ದೆಗಳ ಭರ್ತಿ- ಡಾ.ಜಿ. ಪರಮೇಶ್ವರ ಘೋಷಣೆ | Karnataka Fire Services Recruitment 1600 Jobs Home Minister Parameshwara Announcement Sat

ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯಲ್ಲಿ 1,600ಕ್ಕೂ ಹೆಚ್ಚು ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡುವುದಾಗಿ ಘೋಷಿಸಿದ್ದಾರೆ. ಈ ನೇಮಕಾತಿಯ ಜೊತೆಗೆ, ಪೊಲೀಸ್ ಮಾದರಿಯಲ್ಲಿ ಸಿಬ್ಬಂದಿಗೆ ವಸತಿ ಗೃಹಗಳನ್ನು ನಿರ್ಮಿಸುವ ಭರವಸೆಯನ್ನೂ ನೀಡಿದ್ದಾರೆ.

ಬೆಂಗಳೂರು (ಫೆ.24): ರಾಜ್ಯದಲ್ಲಿ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಜನತೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ ಬರೋಬ್ಬರಿ 1,600ಕ್ಕೂ ಹೆಚ್ಚು ವಿವಿಧ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದು ಘೋಷಿಸಿದ್ದಾರೆ.

ಮಂಗಳವಾರ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಆರ್.ಎ.ಮುಂಡ್ಕುರ್ ಅಗ್ನಿಶಾಮಕ ತರಬೇತಿ ಅಕಾಡೆಮಿಯಲ್ಲಿ ನಡೆದ ‘ಮುಖ್ಯಮಂತ್ರಿಗಳ ಪದಕ’ ಪ್ರದಾನ ಹಾಗೂ 40 ಹೊಸ ಅಗ್ನಿಶಾಮಕ ಜಲ ವಾಹನಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಕರ್ನಾಟಕ ಅಗ್ನಿಶಾಮಕ ದಳ:

ಕರ್ನಾಟಕದ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯು ತನ್ನ ಶಿಸ್ತು ಮತ್ತು ಕಾರ್ಯಕ್ಷಮತೆಯಿಂದ ರಾಷ್ಟ್ರ ಮಟ್ಟದಲ್ಲಿ ಮಾದರಿಯಾಗಿದೆ ಎಂದು ಸಚಿವರು ಶ್ಲಾಘಿಸಿದರು. ‘ನಮ್ಮ ಅಗ್ನಿಶಾಮಕ ಸಿಬ್ಬಂದಿಗಳು ಶಿಸ್ತಿನ ಸಿಪಾಯಿಗಳು. ಪ್ರಕೃತಿ ವಿಕೋಪಗಳು ಅಥವಾ ಅಗ್ನಿ ಅವಘಡಗಳ ಸಂಭವಿಸಿದಾಗ ಪ್ರಾಣದ ಹಂಗು ತೊರೆದು ನಾಗರಿಕರ ಆಸ್ತಿ ಮತ್ತು ಜೀವ ರಕ್ಷಣೆ ಮಾಡುವಲ್ಲಿ ನೀವು ಸದಾ ಮುಂಚೂಣಿಯಲ್ಲಿದ್ದೀರಿ. ವಿಶೇಷವಾಗಿ ಮಡಿಕೇರಿ ಪ್ರವಾಹದ ಸಂದರ್ಭದಲ್ಲಿ ನೀವು ತೋರಿದ ಸಾಹಸವನ್ನು ಇಡೀ ರಾಜ್ಯವೇ ಕೊಂಡಾಡಿದೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

1600 ಹುದ್ದೆಗಳ ಬೃಹತ್ ನೇಮಕಾತಿ:

ಇಲಾಖೆಯ ಬಲವರ್ಧನೆಗೆ ಒತ್ತು ನೀಡುತ್ತಿರುವ ಸರ್ಕಾರ, 1,600ಕ್ಕೂ ಹೆಚ್ಚು ವಿವಿಧ ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. ಈ ಕುರಿತು ಈಗಾಗಲೇ ಮುಖ್ಯಮಂತ್ರಿಯವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ಇದು ಇಲಾಖೆಯ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಮತ್ತು ತುರ್ತು ಸಂದರ್ಭಗಳಲ್ಲಿ ಹೆಚ್ಚಿನ ಸೇವೆ ಒದಗಿಸಲು ಸಹಕಾರಿಯಾಗಲಿದೆ.

ಪೊಲೀಸ್ ಮಾದರಿಯಲ್ಲಿ ವಸತಿ ಗೃಹ:

ಅಗ್ನಿಶಾಮಕ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಮಹತ್ವದ ನಿರ್ಧಾರ ಕೈಗೊಂಡಿರುವ ಸಚಿವರು, ‘ಪೊಲೀಸ್ ಗೃಹ ಯೋಜನೆಯಡಿ ಈಗಾಗಲೇ 40 ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಇದೇ ಮಾದರಿಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಿಗೂ ಸುಸಜ್ಜಿತ ವಸತಿ ಗೃಹಗಳನ್ನು ಕಲ್ಪಿಸಲಾಗುವುದು. ಇದಕ್ಕಾಗಿ ಪ್ರತ್ಯೇಕ ಹಣ ಒದಗಿಸಿ, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು’ ಎಂದು ಭರವಸೆ ನೀಡಿದರು.

ಆಧುನಿಕ ತಂತ್ರಜ್ಞಾನ ಮತ್ತು ಹೊಸ ಠಾಣೆಗಳು:

ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳಕ್ಕೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಮೊದಲ ಬಾರಿಗೆ 90 ಮೀಟರ್ ಎತ್ತರ ತಲುಪಬಲ್ಲ ‘ಏರಿಯಲ್ ಲ್ಯಾಡರ್ ಫ್ಲಾಟ್‌ಫಾರ್ಮ್’ ವಾಹನವನ್ನು ಒದಗಿಸಲಾಗಿದೆ. ಅಲ್ಲದೆ, 15 ಹೊಸ ತಾಲೂಕುಗಳಲ್ಲಿ ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸಲು ಕ್ರಮ ವಹಿಸಲಾಗಿದೆ. 15ನೇ ಹಣಕಾಸಿನ ಯೋಜನೆಯಡಿ ಒದಗಿಸಲಾದ 329 ಕೋಟಿ ರೂಪಾಯಿಗಳ ಪೈಕಿ 98 ಕೋಟಿ ರೂಪಾಯಿಗಳನ್ನು ಬಳಸಿ ಈಗಾಗಲೇ 21 ಹೊಸ ಠಾಣೆಗಳನ್ನು ನಿರ್ಮಿಸಲಾಗಿದೆ. ತರಬೇತಿ ಕೇಂದ್ರಗಳ ಉನ್ನತೀಕರಣಕ್ಕೂ ಸರ್ಕಾರ ಬದ್ಧವಾಗಿದೆ ಎಂದು ಪರಮೇಶ್ವರ ತಿಳಿಸಿದರು.

ಕಾರ್ಯಕ್ರಮದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



Source link

Leave a Reply

Your email address will not be published. Required fields are marked *