Nandagokula: ನಂದಗೋಕುಲ ಧಾರಾವಾಹಿ ಅದ್ಭುತವಾಗಿ ಬರುತ್ತಿದೆ. ಧಾರಾವಾಹಿಯ ಪ್ರತಿಯೊಂದು ಪಾತ್ರಗಳು ಸಹ ಒಂದಕ್ಕಿಂತ ಒಂದು ಚೆನ್ನಾಗಿದೆ. ಅದರಲ್ಲೂ ಅಮೂಲ್ಯ ಪಾತ್ರವನ್ನು ಜನ ಇಷ್ಟಪಟ್ಟಿದ್ದಾರೆ. ಹೊಸ ಪರಿಚಯವಾದ ಈ ಹುಡುಗಿ ಯಾರು? ಇಲ್ಲಿದೆ ಮಾಹಿತಿ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ತುಂಬು ಕುಟುಂಬದ ಕಥೆಯನ್ನು ಹೊಂದಿರುವ ಧಾರಾವಾಹಿ ನಂದಗೋಕುಲ. ನಂದಾ-ಗಿರಿಜಾರಿಂದ ಹಿಡಿದು, ಈ ಧಾರಾವಾಹಿಯಲ್ಲಿ ಬರುವಂತಹ ಪ್ರತಿಯೊಂದು ಪಾತ್ರಗಳನ್ನು ಸಹ ಜನರು ಮೆಚ್ಚಿಕೊಂಡಿದ್ದಾರೆ, ಅದರಲ್ಲಿ ಅಮೂಲ್ಯ ಪಾತ್ರ ಕೂಡ ಒಂದು.

ನಂದನ ಕಿರಿಯ ಮಗ ವಲ್ಲಭ ಮದುವೆಯಾಗಿ ಮನೆಗೆ ಕರೆದುಕೊಂಡು ಬಂದಿರುವ ಕಿರಿಯ ಸೊಸೆ ಅಮೂಲ್ಯ. ಮನೆಮಂದಿಯ ಪ್ರೀತಿಯ ಅಮ್ಮು. ಮನೆಯಲ್ಲಿದ್ದ ಚಿನ್ನ ಕದ್ದು ಇನ್ಯಾರದ್ದೋ ಜೊತೆ ಓಡಿ ಹೋಗಿ, ಅಲ್ಲಿ ಮೋಸ ಹೋಗಿ ಸಾಯಲು ಹೊರಟಿದ್ದವಳನ್ನು ಅತ್ತೆ ಗಿರಿಜಾ ಕಾಪಾಡಿ, ತನ್ನ ಮಗ ವಲ್ಲಭನ ಜೊತೆ ಮದುವೆ ಮಾಡಿಸಿದ್ದಾಳೆ.

ಮೊದಲೇ ಎರಡು ಮನೆಗಳಿಗೆ ಆಗಲ್ಲ, ಅದರಲ್ಲೂ ವಲ್ಲಭ ಮತ್ತು ಅಮ್ಮು ಒಂದೇ ಕಾಲೇಜಿನಲ್ಲಿ, ಒಂದೇ ತರಗತಿಯಲ್ಲಿ ಓದುತ್ತಿದ್ದು, ಒಬ್ಬರಿಗೊಬ್ಬರು ಕಂಡರೇನೆ ಆಗಲ್ಲ. ಈಗ ಒಂದೆ ಮನೆಯಲ್ಲಿ ಗಂಡ ಹೆಂಡತಿಯಾಗಿ ಬದುಕುತ್ತಿದ್ದಾರೆ. ಅಮೂಲ್ಯ ಕೋಳಿ ಜಗಳವನ್ನು, ಪ್ರೀತಿಯನ್ನು, ಮುದ್ದು ಮುದ್ದು ಮಾತುಗಳನ್ನು ವೀಕ್ಷಕರಂತೂ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ.

ಇದೇ ಮೊದಲ ಬಾರಿಗೆ ಕನ್ನಡ ಕಿರುತೆರೆಗೆ ಪರಿಚಿತರಾದ ಈ ಬೆಡಗಿ ಹೆಸರು ಊರ್ಜಿತ ವಲ್ತಾಜೆ. ಇವರು ದಕ್ಷಿಣ ಕನ್ನಡದ ಸುಳ್ಯದ ಗುತ್ತಿಗಾರು ಎನ್ನುವ ಊರಿನವರು. ಇವರ ತಂದೆ ಪ್ರವೀಣ್ ವಾಲ್ತಾಜೆ ಮತ್ತು ತಾಯಿ ಸವೀತಾ ಪ್ರವೀಣ್ ವಾಲ್ತಾಜೆ. ಇದೇ ಮೊದಲ ಬಾರಿಗೆ ಕನ್ನಡ ಕಿರುತೆರೆಗೆ ಕಾಲಿಟ್ಟಿದ್ದು, ಮೊದಲ ಸೀರಿಯಲ್ ಮೂಲಕವೇ ಜನಪ್ರಿಯತೆ ಪಡೆದಿದ್ದಾರೆ.

ಊರ್ಜಿತಾ ಬಯೋಟೆಕ್ ಡಿಗ್ರಿ ಮಾಡಿದ್ದು, ಬಳಿಕ ನಟನೆಯಲ್ಲಿ ಬ್ಯುಸಿ ಆಗಿದ್ದಾರೆ. ಪಿಯುಸಿ ಸುಳ್ಯದಲ್ಲಿ ಮಾಡಿದ್ದು, ಡಿಗ್ರಿಗೆ ಬೆಂಗಳೂರಿಗೆ ಬಂದ ಊರ್ಜಿತಾಗೆ, ಡಿಗ್ರಿ ಫೈನಲ್ ಇಯರ್ ಓದುತ್ತಿರುವಾಗಲೇ ನಂದಗೋಕುಲ ಆಡಿಶನ್ ನಲ್ಲಿ ಆಯ್ಕೆಯಾಗಿದ್ದರು. ಇವರು ಯೂಟ್ಯೂಬರ್ ಹಾಗೂ ಸೋಶಿಯಲ್ ಮೀಡೀಯಾ ಇನ್ಫ್ಲುಯನ್ಸರ್ ಕೂಡ ಹೌದು. ತಮ್ಮ ಇನ್’ಸ್ಟಾಗ್ರಾಂನಲ್ಲಿ 63.7ಕೆ ಫಾಲೋವರ್ಸ್ ಹೊಂದಿದ್ದಾರೆ ಊರ್ಜಿತಾ.

ಊರ್ಜಿತಾ ವಲ್ತಾಜೆ ಅವರಿಗೆ ಮೊದಲ ಧಾರಾವಾಹಿಗೆ ಎರಡೆರಡು ಪ್ರಶಸ್ತಿ ಒಲಿದು ಬಂದಿದೆ. ಈ ವರ್ಷ ನಡೆದ ಕಲರ್ಸ್ ಕನ್ನಡ ಅನುಬಂಧ ಪ್ರಶಸ್ತಿ ಸಮಾರಂಭದಲ್ಲಿ ಜನಮೆಚ್ಚಿದ ಹೊಸ ಪರಿಚಯ ಮತ್ತು ಜನಮೆಚ್ಚಿದ ಡಿಜಿಟಲ್ ಜೋಡಿ ಅವಾರ್ಡ್ ಪ್ರಶಸ್ತಿ ಕೂಡ ಲಭಿಸಿದೆ.

Source link
ಗಂಡನ ಜೊತೆಗಿನ ಕೋಳಿ ಜಗಳದಿಂದಲೇ ಕನ್ನಡಿಗರ ಮನ ಗೆದ್ದ ‘Nandagokula’ದ ಅಮ್ಮು… ಯಾರೀಕೆ?