Headlines

Unseasonal rain in Karnataka: ಬಂಗಾಳಕೊಲ್ಲಿ ವಾಯುಭಾರ ಕುಸಿತ; ಉತ್ತರಕನ್ನಡ, ಚಿಕ್ಕಮಗಳೂರಲ್ಲಿ ಭರ್ಜರಿ ಮಳೆ | Today Karnataka Rains Bay Of Bengal Depression Triggers Heavy Thunderstorms In Uttara Kannada

Unseasonal rain in Karnataka: ಬಂಗಾಳಕೊಲ್ಲಿ ವಾಯುಭಾರ ಕುಸಿತ; ಉತ್ತರಕನ್ನಡ, ಚಿಕ್ಕಮಗಳೂರಲ್ಲಿ ಭರ್ಜರಿ ಮಳೆ | Today Karnataka Rains Bay Of Bengal Depression Triggers Heavy Thunderstorms In Uttara Kannada


ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದಿಂದಾಗಿ ಉತ್ತರಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಕಾಲಿಕ ಮಳೆ ಸುರಿದಿದೆ. ಈ ಮಳೆಯು ಕಾಫಿನಾಡಿನ ಬೆಳೆಗಾರರಿಗೆ, ವಿಶೇಷವಾಗಿ ಹೂ ಬಿಡುವ ಹಂತದಲ್ಲಿರುವ ಕಾಫಿ ಗಿಡಗಳಿಗೆ ವರದಾನವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಕಾರವಾರ (ಫೆ.24): ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಉತ್ತರಕನ್ನಡ ಜಿಲ್ಲೆಯಾದ್ಯಂತ ಅಕಾಲಿಕ ಮಳೆ ಸುರಿದಿದೆ. ಜಿಲ್ಲೆಯ ಹಲವೆಡೆ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿದ್ದು, ಯಲ್ಲಾಪುರ ತಾಲೂಕಿನಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆರಾಯ ಅಬ್ಬರಿಸಿದ್ದಾನೆ. 

ತಾಸು ಬಿಟ್ಟುಬಿಡದೆ ಸುರಿದ ಮಳೆಗೆ ರಾಷ್ಟ್ರೀಯ ಹೆದ್ದಾರಿಯ ಮೇಲೆಯೇ ನೀರು ತುಂಬಿ ಹರಿದಿದ್ದು, ವಾಹನ ಸವಾರರು ಪರದಾಡುವಂತಾಯಿತು. ಹಳಿಯಾಳದಲ್ಲಿ ಮಳೆಯ ಸಿಂಚನವಾಗಿದ್ದರೆ, ದಾಂಡೇಲಿ ಮತ್ತು ಭಟ್ಕಳದಲ್ಲಿ ದಟ್ಟವಾದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.

ಕಾಫಿನಾಡಲ್ಲಿ ಭರ್ಜರಿ ಮಳೆ, ಸುಡುಬಿಸಿಲಿಗೆ ತಂಪೆರೆದ ಮಳೆರಾಯ

ಚಿಕ್ಕಮಗಳೂರು: ಕಳೆದ ಕೆಲವು ದಿನಗಳಿಂದ ತೀವ್ರ ಬಿಸಿಲು ಮತ್ತು ಏರಿದ ತಾಪಮಾನದಿಂದ ಬಳಲುತ್ತಿದ್ದ ಕಾಫಿನಾಡಿನ ಜನತೆಗೆ ವರುಣದೇವ ತಂಪೆರೆದಿದ್ದಾನೆ. ಜಿಲ್ಲೆಯ ಆಲ್ದೂರು ಹಾಗೂ ಸುತ್ತಮುತ್ತಲಿನ ಮಲೆನಾಡು ಭಾಗದಲ್ಲಿ ಇಂದು ಮಧ್ಯಾಹ್ನ ದಿಢೀರ್ ವಾತಾವರಣ ಬದಲಾಯ್ತು. ಬಿಸಿಲು ಮಾಯವಾಗಿ ಮೋಡ ಕವಿದು, ಹೊಸ ಮಳೆಯ ಮಣ್ಣಿನ ಸುವಾಸನೆಯೊಂದಿಗೆ ಧಾರಾಕಾರ ಮಳೆ ಸುರಿಯಿತು. ಈ ಅಕಾಲಿಕ ಮಳೆಯು ಜಿಲ್ಲೆಯ ಜನರಲ್ಲಿ ಹರ್ಷ ತಂದಿದ್ದು, ಸುಡು ಬಿಸಿಲಿನ ಬೇಗೆಗೆ ತಾತ್ಕಾಲಿಕ ವಿರಾಮ ನೀಡಿದೆ.

ಬೆಳೆಗಾರರ ಮುಖದಲ್ಲಿ ಮಂದಹಾಸ: ಕಾಫಿ ಗಿಡಗಳಿಗೆ ಜೀವಧಾರೆ

ಈ ಮಳೆಯು ಮಲೆನಾಡಿನ ಕಾಫಿ ಮತ್ತು ಅಡಿಕೆ ಬೆಳೆಗಾರರಿಗೆ ವರದಾನವಾಗಿ ಪರಿಣಮಿಸಿದೆ. ಹೂ ಬಿಡುವ ಹಂತದಲ್ಲಿರುವ ಕಾಫಿ ಗಿಡಗಳಿಗೆ ಮಳೆರಾಯ ನೀರುಣಿಸಿದ್ದಾನೆ. ಇದರಿಂದಾಗಿ ಉತ್ತಮ ಇಳುವರಿಯ ನಿರೀಕ್ಷೆ ಮೂಡಿಸಿದೆ. ಕಾಫಿ ತೋಟಗಳಿಗೆ ನೀರು ಹರಿಸಲು ಹರಸಾಹಸ ಪಡುತ್ತಿದ್ದ ಬೆಳೆಗಾರರು ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಆಲ್ದೂರು ಭಾಗದ ಕಾಫಿ ತೋಟಗಳು ಮತ್ತೆ ಹಸಿರಿನಿಂದ ಕಂಗೊಳಿಸಲಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಜಿಲ್ಲಾದ್ಯಂತ ಮುಂದುವರಿದ ಮೋಡ ಕವಿದ ವಾತಾವರಣ

ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಇನ್ನೂ ಮೋಡ ಕವಿದ ವಾತಾವರಣ ದಟ್ಟವಾಗಿದ್ದು, ಯಾವುದೇ ಕ್ಷಣದಲ್ಲಿ ಮತ್ತೆ ಮಳೆ ಸುರಿಯುವ ಸಾಧ್ಯತೆಯಿದೆ. ಅಕಾಲಿಕ ಮಳೆಯಿಂದಾಗಿ ಒಂದೆಡೆ ರೈತರಿಗೆ ಖುಷಿಯಾಗಿದ್ದರೆ, ಇನ್ನೊಂದೆಡೆ ಸಾರ್ವಜನಿಕರ ದೈನಂದಿನ ಜನಜೀವನದಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಯ ಉಂಟಾಗಿದೆ.



Source link

Leave a Reply

Your email address will not be published. Required fields are marked *