
ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಒಳಚರಂಡಿಯಲ್ಲಿ ಸಿಲುಕಿದ್ದ ಐದು ನವಜಾತ ನಾಯಿ ಮರಿಗಳನ್ನು ಸ್ಥಳೀಯ ಮಕ್ಕಳು ರಕ್ಷಿಸಿದ್ದಾರೆ. ತಮ್ಮ ಜೀವವನ್ನೂ ಲೆಕ್ಕಿಸದೆ ಈ ಮಕ್ಕಳು ತೋರಿದ ಕರುಣೆ ಮತ್ತು ಧೈರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ವಿಜಯಪುರ: ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ನಗರದ ಕಾಮತ್ ಹೋಟೆಲ್‌ನ ಹಿಂಭಾಗದಲ್ಲಿನ ಒಳಚರಂಡಿ ಪೈಪ್‌ನಲ್ಲಿ ಸಿಲುಕಿಕೊಂಡಿದ್ದ ಐದು ನವಜಾತ ನಾಯಿ ಮರಿಗಳನ್ನು ಇಲ್ಲಿನ ಮಕ್ಕಳಾದ ಪ್ರಸಾದ.ಬಿ, ಶ್ಲೋಕ, ವೈಶು, ನಕ್ಷ, ದೀಪಾಲಿ, ಸೀಮಾಜಿ, ಕೀರ್ತಿ ರಕ್ಷಿಸಿದ್ದಾರೆ.
ತಮ್ಮ ಜೀವವನ್ನೂ ಲೆಕ್ಕಿಸದೆ ಮಳೆಯಲ್ಲಿಯೇ ಧಾವಿಸಿ ನಾಯಿ ಮರಿಗಳನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ ಈ ಮಕ್ಕಳ ಧೈರ್ಯವನ್ನು ಎಲ್ಲರೂ ಮೆಚ್ಚಿದ್ದಾರೆ. ಜತೆಗೆ ಮಕ್ಕಳ ಕರುಣೆಯಿಂದಾಗಿ ಐದು ಮುಗ್ಧ ಜೀವಗಳು ಬದುಕುಳಿದಿವೆ. ಮಕ್ಕಳ ಈ ಸಾಹಸ ಕಾರ್ಯದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರ ಪ್ರಶಂಸೆಗೆ ಪಾತ್ರವಾಗಿವೆ.
ಪುಟ್ಟ ಪುಟಾಣಿಗಳ ಕಾರ್ಯ ಶ್ಲಾಘನೀಯ
ಈ ಭೂಮಿ ಮೇಲೆ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕು ಇದೆ. ಕಷ್ಟದಲ್ಲಿರುವ ಪ್ರತಿ ಜೀವಿಯನ್ನು ರಕ್ಷಿಸಿ, ಬದುಕು ಕಲ್ಪಿಸುವುದೇ ನಿಜವಾದ ಮಾನವೀಯತೆ. ಅಂತ ಮಾನವೀಯತೆಯನ್ನು ಮೆರೆದ ಈ ಪುಟ್ಟ ಪುಟಾಣಿಗಳ ಕಾರ್ಯ ಶ್ಲಾಘನೀಯ. ರಾಜ್ಯ ಸಾರಿಗೆ ಬಸ್‌ಗಳ ಹಿಂಭಾಗದ ಗಾಜುಗಳ ಮೇಲೆ ಪ್ರಾಣಿಗಳ ಮೇಲೆ ಕರುಣೆ ಇರಲಿ ಎನ್ನುವ ಘೋಷವಾಕ್ಯ ಅಕ್ಷರಶಃ ಸತ್ಯವಾಗಿಸಿದವರು ಈ ನಮ್ಮ ಹೆಮ್ಮೆಯ ಪುಟಾಣಿಗಳು ಎಂದು ಸ್ಥಳೀಯ ವೈದ್ಯೆ ಡಾ.ಅಶ್ವಿನಿ ಹಿರೇಮಠ ಹೇಳಿದ್ದಾರೆ.
ಮಳೆಗೆ ಬೆಳೆಹಾನಿ: ರೈತರ ಆತಂಕ
ಲಕ್ಷ್ಮೇಶ್ವರ ತಾಲೂಕಿನಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಸಿಡಿಲು ಗುಡುಗುಗಳ ಆರ್ಭಟ ತೋರಿಸಿದ ಮಳೆಯು ರೈತರು ನಿದ್ದೆಗೆಡಿಸುವ ಕಾರ್ಯ ಮಾಡುತ್ತಿದೆ.
ಮಂಗಳವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ 15- 20 ನಿಮಿಷಗಳ ಕಾಲ ಆರ್ಭಟಿಸಿದ ಮಳೆಯು ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ಲಕ್ಷ್ಮೇಶ್ವರ ಪಟ್ಟಣ ಸೇರಿದಂತೆ ಗೊಜನೂರ, ಯಳವತ್ತಿ, ಮಾಡಳ್ಳಿ, ಯತ್ತಿನಹಳ್ಳಿ ಗ್ರಾಮಗಳಲ್ಲಿ ಅಕಾಲಿಕ ಮಳೆ ಸುರಿದಿದೆ.
ಇದನ್ನೂ ಓದಿ: ರಕ್ಷಣಾ ಉತ್ಪನ್ನ ಉತ್ಪಾದನೆಗೆ 200 ಎಕರೆ ಪಾರ್ಕ್: ಸಚಿವ ಎಂ.ಬಿ.ಪಾಟೀಲ್
ಹೊಲದಲ್ಲಿ ಒಕ್ಕಣೆ ಮಾಡಲಾಗದೆ ಇರುವ ಕಡಲೆ, ಗೋದಿ ಹಾಗೂ ಕುಸುಬೆ ಬೆಳೆ ಕಿತ್ತು ಕೂಡಿ ಹಾಕಲಾಗಿದ್ದು, ಈಗ ಸುರಿದ ಅಕಾಲಿಕ ಮಳೆಗೆ ಈ ಎಲ್ಲ ಧಾನ್ಯಗಳು ಕೆಟ್ಟು ಹೋಗುವ ಭೀತಿ ಎದುರಾಗಿದೆ. ಅಲ್ಲದೆ ಹೊಲದಲ್ಲಿ ಇರುವ ಬಿಳಿಜೋಳದ ಸೊಪ್ಪಿ, ಗೋದಿ ಹಾಗೂ ಕಡಲೆ ಹೊಟ್ಟು ಕೆಟ್ಟು ಹೋಗುವ ಭೀತಿ ಎದುರಾಗಿದೆ. ಇದು ರೈತರು ನಿದ್ದೆಗೆಡಿಸುವ ಕಾರ್ಯ ಮಾಡಿದೆ ಎಂದು ಪಟ್ಟಣದ ರೈತ ಮುದಕಣ್ಣ ಬೂದಿಹಾಳ ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಾಯರ ಸನ್ನಿಧಿಯಲ್ಲಿ ಕಾಂಗ್ರೆಸ್ ವಿರುದ್ಧ ಅಶ್ವತ್ಥ್ ನಾರಾಯಣ ಕಿಡಿ: ದೇಶದಲ್ಲೇ ನಂಬರ್ 1 ಭ್ರಷ್ಟ ಸರ್ಕಾರ ಎಂದು ವಾಗ್ದಾಳಿ!