ವಿಜಯಪುರ ಜಿಲ್ಲೆಯ ಪಾಟೀಲ ಕುಟುಂಬವೊಂದು ಕಳೆದ 16 ವರ್ಷಗಳಿಂದ ವಿಚಿತ್ರ ಸಮಸ್ಯೆಯನ್ನು ಎದುರಿಸುತ್ತಿದೆ. ಅಣ್ಣ-ತಂಗಿಯ ಮೈಮೇಲೆ ನಿಗೂಢ ಗಾಯಗಳು, ರಕ್ತದಲ್ಲಿ ಚಿಹ್ನೆಗಳು ಕಾಣಿಸಿಕೊಳ್ಳುತ್ತಿದ್ದು, ಬಟ್ಟೆಗಳಿಗೆ ಬೆಂಕಿ ತಗುಲುವಂತಹ ಘಟನೆಗಳಿಂದ ಅವರ ಬದುಕು ನರಕಸದೃಶವಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಒಂದು ಕುಟುಂಬ ಕಳೆದ 16 ವರ್ಷಗಳಿಂದ ಅರ್ಥವಾಗದ, ಆತಂಕಕಾರಿ ಹಾಗೂ ವಿಚಿತ್ರ ಸಮಸ್ಯೆಗೆ ಒಳಗಾಗಿದ್ದು, ಅವರ ಬದುಕು ಸಂಪೂರ್ಣವಾಗಿ ಸಮಸ್ಯೆಯಿಂದ ತುಂಬಿದೆ. ವಿಜಯಪುರ ತಾಲೂಕಿನ ಕನ್ನೂರು ಗ್ರಾಮದಲ್ಲಿರುವ ಪಾಟೀಲ ಕುಟುಂಬದ ಇಬ್ಬರು ಸಹೋದರ–ಸಹೋದರಿ ಈ ವಿಚಿತ್ರ ಕಾಟಕ್ಕೆ ಬೇಸತ್ತು ನರಕ ಯಾತನೆ ಅನುಭವಿಸುತ್ತಿದ್ದಾರೆ.

ಪಾಟೀಲ ಕುಟುಂಬದ ಸುನೀಲ ಮತ್ತು ಸುನೀತಾ ಎಂಬ ಅಣ್ಣ–ತಂಗಿಯ ಮೈಮೇಲೆ ಯಾವುದೇ ಕಾರಣವಿಲ್ಲದೆ ತಾನೇ ತಾನಾಗಿ ಗಾಯಗಳು ಕಾಣಿಸಿಕೊಳ್ಳುತ್ತಿವೆ. ಬ್ಲೇಡ್ನಿಂದ ಕತ್ತರಿಸಿದಂತೆ ಕಾಣುವ ಆಳವಾದ ಗಾಯಗಳು ಅವರ ಹಣೆ, ಕೈ, ಎದೆ, ಹೊಟ್ಟೆ, ಬೆನ್ನು, ತೊಡೆ ಹಾಗೂ ಕಾಲುಗಳ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಅವುಗಳಿಂದ ನಿರಂತರವಾಗಿ ರಕ್ತ ಜಿನುಗುತ್ತಿದೆ.

ಗಾಯಗಳ ಜೊತೆಗೇ ಇನ್ನೊಂದು ಅಚ್ಚರಿಯ ಸಂಗತಿ ಎಂದರೆ, ಅವರ ಮೈಮೇಲೆ ಹರಿಯುವ ರಕ್ತದಲ್ಲಿ ಉರ್ದು ಭಾಷೆಯನ್ನು ಹೋಲುವ ಅಕ್ಷರಗಳು, ಅಂಕಿಗಳು ಹಾಗೂ ಅರ್ಧಚಂದ್ರ ನಕ್ಷತ್ರದಂತಿರುವ ಗುರುತುಗಳು ತಾನಾಗಿಯೇ ಮೂಡುತ್ತಿವೆ ಇದನ್ನು ಕಂಡ ಕುಟುಂಬಸ್ಥರು ಹಾಗೂ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಈ ಸಮಸ್ಯೆ ಕೇವಲ ಗಾಯಗಳಿಗೆ ಸೀಮಿತವಾಗಿಲ್ಲ. ಸುನೀಲ ಮತ್ತು ಸುನೀತಾ ಧರಿಸುವ ಬಟ್ಟೆಗಳು ಹಾಗೂ ಮನೆಯಲ್ಲಿರುವ ಕೆಲವು ವಸ್ತುಗಳಿಗೆ ಅಚಾನಕ್ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಕುಟುಂಬ ಹೇಳಿದೆ. ಇನ್ನು ಮನೆಯಲ್ಲಿದ್ದ ಸುಮಾರು 250ರಿಂದ 300 ಗ್ರಾಂ ಚಿನ್ನಾಭರಣಗಳು ರಹಸ್ಯವಾಗಿ ನಾಪತ್ತೆಯಾಗಿರುವುದೂ ಕುಟುಂಬದ ನೋವನ್ನು ಮತ್ತಷ್ಟು ಹೆಚ್ಚಿಸಿದೆ.

ಈ ವಿಚಿತ್ರ ಸಮಸ್ಯೆ ಮೊದಲ ಬಾರಿಗೆ 16 ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದು, ಕುಟುಂಬ ಮೂಲತಃ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಉಮ್ರಾನಿ ಗ್ರಾಮದವರು. ಸಮಸ್ಯೆಯಿಂದಾಗಿ ತಮ್ಮ ಊರನ್ನು ಬಿಟ್ಟು ವಿಜಯಪುರ ನಗರದಲ್ಲಿ ಮನೆ ಮಾಡಿಕೊಂಡರೂ ಅಲ್ಲಿಯೂ ಇದೇ ತೊಂದರೆ ಮುಂದುವರಿದಿದೆ. ನಂತರ ಅವರು ಕನ್ನೂರು ಗ್ರಾಮಕ್ಕೆ ಬಂದರೂ ಸಮಸ್ಯೆಯಿಂದ ಮುಕ್ತಿ ಸಿಕ್ಕಿಲ್ಲ.

ಸುನೀಲನ ತಾಯಿ ಪ್ರಸ್ತುತ ತವರು ಮನೆಯಲ್ಲಿ ವಾಸವಾಗಿದ್ದಾರೆ. ಕನ್ನೂರಿನ ಮನೆಯಲ್ಲಿಯೂ ಸುನೀಲ–ಸುನೀತಾರ ಬಟ್ಟೆಗಳು ಮತ್ತು ವಸ್ತುಗಳು ಸುಟ್ಟು ಹೋಗಿರುವ ಘಟನೆಗಳು ನಡೆದಿವೆ. ಮೈಮೇಲೆ ಗಾಯಗಳು ಆಗುವುದು ಹಾಗೂ ರಕ್ತ ಸುರಿಯುವುದು ಇನ್ನೂ ನಿಂತಿಲ್ಲ. ಈ ನಿರಂತರ ಆತಂಕ ಮತ್ತು ಚಿಂತೆಯ ಮಧ್ಯೆ ಸುನೀಲನ ಹಿರಿಯ ಸಹೋದರ ಬಸವರಾಜ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸುನೀತಾಗೆ ಈ ಸಮಸ್ಯೆಯಿಂದ ಮದುವೆ ಕೂಡ ಮಾಡಲಾಗಿಲ್ಲ. ಸುನೀಲನಿಗೆ ಮದುವೆಯಾದರೂ ಸಂಸಾರ ನಡೆಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಕುಟುಂಬವು ಹಲವು ವರ್ಷಗಳಿಂದ ಕಂಡ ಕಂಡ ದೇವಾಲಯಗಳನ್ನು ಸುತ್ತಿದ್ದು, ಜೋತಿಷಿಗಳು, ಪಂಡಿತರು, ಪರಿಹಾರ ಹೇಳುವವರ ಬಳಿ ತೆರಳಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ನಮ್ಮ ಈ ಅರ್ಥವಾಗದ ಸಮಸ್ಯೆಗೆ ಯಾರಾದರೂ ಪರಿಹಾರ ಸೂಚಿಸಿ, ನಮ್ಮ ಬದುಕಿಗೆ ಬೆಳಕು ತಂದುಕೊಡಿ ಎಂದು ಪಾಟೀಲ ಕುಟುಂಬ ಮನವಿ ಮಾಡಿದೆ. ವಿಜ್ಞಾನಕ್ಕೂ ಮೀರಿದಂತೆ ಕಾಣುತ್ತಿರುವ ಈ ಘಟನೆಗಳು ಸ್ಥಳೀಯರಲ್ಲೂ ಕುತೂಹಲ ಮತ್ತು ಆತಂಕ ಮೂಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತಜ್ಞರು ಈ ಪ್ರಕರಣದತ್ತ ಗಮನ ಹರಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

Source link
ವಿಜಯಪುರ ಮನೆಯಲ್ಲಿ ಕಾಣಿಸಿಕೊಳ್ಳುವ ರಕ್ತದೋಕುಳಿ, ದೇಹದ ಮೇಲೆಲ್ಲಾ ಕಾಣಿಸಿಕೊಳ್ಳುವ ವಿಚಿತ್ರ ಚಿಹ್ನೆ, ಉರ್ದು ಬರಹ!