
ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡದ ಪರಾಸ್ ಡೋಗ್ರಾ ಕರ್ನಾಟಕದ ಫೀಲ್ಡರ್‌ಗೆ ತಲೆಯಿಂದ ಗುದ್ದಿ ವಿವಾದ ಸೃಷ್ಟಿಸಿದ್ದಾರೆ. ಈ ಘಟನೆಯಿಂದ ಕೆರಳಿದ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಡೋಗ್ರಾ ವಿರುದ್ಧ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿ (ಫೆ.25): ರಣಜಿ ಟ್ರೋಫಿ ಫೈನಲ್ ಪಂದ್ಯದ ಎರಡನೇ ದಿನವಾದ ಬುಧವಾರ ಮೈದಾನದಲ್ಲಿ ಅಹಿತಕರ ಘಟನೆ ಜರುಗಿದೆ. ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ, ಅನುಭವಿ ಆಟಗಾರ ಪರಾಸ್ ಡೋಗ್ರಾ ಅವರು ಕರ್ನಾಟಕದ ಫೀಲ್ಡರ್‌ಗೆ ತಲೆಯಿಂದ ಗುದ್ದುವ (Headbutt) ಮೂಲಕ ಕರ್ನಾಟಕ ಪ್ಲೇಯರ್‌ಗಳನ್ನು ಕೆಣಕಿದ್ದಾರೆ.
ಜಮ್ಮು-ಕಾಶ್ಮೀರ ಇನಿಂಗ್ಸ್‌ನ 101ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಪ್ರಸಿದ್ಧ್ ಕೃಷ್ಣ ಅವರ ಎಸೆತವನ್ನು ಡೋಗ್ರಾ ಬೌಂಡರಿಗಟ್ಟಿದಾಗ, ಫಾರ್ವರ್ಡ್ ಶಾರ್ಟ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕರ್ನಾಟಕದ ಬದಲಿ ಆಟಗಾರ ಕೆ.ವಿ. ಅನೀಶ್ ಮತ್ತು ಡೋಗ್ರಾ ನಡುವೆ ಮಾತಿನ ಚಕಮಕಿ ನಡೆಯಿತು. ಅನೀಶ್ ಸತತವಾಗಿ ಸ್ಲೆಡ್ಜಿಂಗ್ ಮಾಡುತ್ತಿದ್ದರಿಂದ ತಾಳ್ಮೆ ಕಳೆದುಕೊಂಡ ಡೋಗ್ರಾ, ನೇರವಾಗಿ ಅನೀಶ್ ಬಳಿ ತೆರಳಿ ತಮ್ಮ ಹೆಲ್ಮೆಟ್‌ನಿಂದ ಡಿಚ್ಚಿ ಹೊಡೆದಿದ್ದಾರೆ.
ಕೆ.ಎಲ್. ರಾಹುಲ್ ಆಕ್ರೋಶ
ತಕ್ಷಣವೇ ಮಧ್ಯಪ್ರವೇಶಿಸಿದ ಮಯಾಂಕ್ ಅಗರ್ವಾಲ್ ಮತ್ತು ಅಂಪೈರ್‌ಗಳು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಓವರ್ ಮುಗಿದ ನಂತರ ಡೋಗ್ರಾ ಕ್ಷಮೆ ಕೇಳಿದರೂ, ಅನೀಶ್ ಅದನ್ನು ಸ್ವೀಕರಿಸಲು ನಿರಾಕರಿಸಿದರು. ಪರಾಸ್ ಡೋಗ್ರಾ ವರ್ತನೆಯಿಂದ ಕೆರಳಿದ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್, ಡೋಗ್ರಾ ವಿರುದ್ಧ ವಾಗ್ದಾಳಿ ನಡೆಸಿದರು. ಮೈದಾನದಲ್ಲಿ ರಾಹುಲ್ ಸತತವಾಗಿ ಡೋಗ್ರಾ ವಿರುದ್ಧ ಮಾತಿನ ಪ್ರಹಾರ ನಡೆಸುತ್ತಿದ್ದುದು ಕಂಡುಬಂದಿತು.
Scroll to load tweet…
ವೈಶಾಕ್ ಮತ್ತು ವಾಧವನ್ ನಡುವೆ ಮಾತಿನ ಚಕಮಕಿ
ಇಷ್ಟಕ್ಕೇ ಮುಗಿಯದ ಗದ್ದಲ, ಕರ್ನಾಟಕದ ವೇಗಿ ವೈಶಾಕ್ ವಿಜಯ್ ಕುಮಾರ್ ಮತ್ತು ಬ್ಯಾಟರ್ ಕನ್ಹಯ್ಯ ವಾಧವನ್ ನಡುವೆಯೂ ಮುಂದುವರಿಯಿತು. ರನ್ ಓಡುವಾಗ ವಾಧವನ್ ಅವರ ಮೊಣಕೈ ವೈಶಾಕ್ ಅವರಿಗೆ ತಗುಲಿದಾಗ ಇಬ್ಬರೂ ಮುಖಾಮುಖಿಯಾದರು. ಅಂಪೈರ್ ಮಧ್ಯಪ್ರವೇಶಿಸಿ ಇಬ್ಬರನ್ನೂ ದೂರ ಸರಿಸಬೇಕಾಯಿತು. ಈ ವೇಳೆ ದೂರದಲ್ಲಿ ನಿಂತಿದ್ದ ಡೋಗ್ರಾ ವ್ಯಂಗ್ಯವಾಗಿ ನಗುತ್ತಿದ್ದುದು ಕಂಡುಬಂದಿತು.
ಪರಾಸ್ ಡೋಗ್ರಾ ಐತಿಹಾಸಿಕ ಮೈಲಿಗಲ್ಲು
ಘರ್ಷಣೆಗಳ ನಡುವೆಯೂ 41 ವರ್ಷದ ಪರಾಸ್ ಡೋಗ್ರಾ ರಣಜಿ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ ಎರಡನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು. ವಾಸಿಂ ಜಾಫರ್ ನಂತರ ಈ ಸಾಧನೆ ಮಾಡಿದ ಏಕೈಕ ಆಟಗಾರ ಇವರಾಗಿದ್ದಾರೆ. ಹಿಮಾಚಲ ಪ್ರದೇಶ ಮತ್ತು ಪುದುಚೇರಿ ಪರ ಆಡಿದ್ದ ಡೋಗ್ರಾ, ಕಳೆದ ವರ್ಷ ಜಮ್ಮು-ಕಾಶ್ಮೀರ ಸೇರಿದ್ದರು. ಅವರ ಅನುಭವ ತಂಡಕ್ಕೆ ದೊಡ್ಡ ಶಕ್ತಿಯಾಗಿದೆ ಎಂದು ಮಾಜಿ ನಾಯಕ ಪರ್ವೇಜ್ ರಸೂಲ್ ಶ್ಲಾಘಿಸಿದ್ದಾರೆ.
ಪಂದ್ಯದ ಸ್ಥಿತಿ
ದ್ವಿತೀಯ ದಿನದಾಟ ನಡೆಯುತ್ತಿರಯವ ವೇಳೆಗೆ ಜಮ್ಮು ಮತ್ತು ಕಾಶ್ಮೀರ 6 ವಿಕೆಟ್ ನಷ್ಟಕ್ಕೆ 527 ರನ್ ಗಳಿಸಿ ಸುಸ್ಥಿತಿಯಲ್ಲಿದೆ. ಶುಭಂ ಪುಂಡಿರ್ (121) ಶತಕ ಬಾರಿಸಿದರೆ, ಯಾವರ್ ಹಸನ್ (88) ಮತ್ತು ಅಬ್ದುಲ್ ಸಮದ್ (61), ಕನ್ಹಯ್ಯ ವಾಧವನ್ (70), ಸಾಹಿಲ್ ಲೂತ್ರಾ (57) ಅರ್ಧಶತಕಗಳ ಕೊಡುಗೆ ನೀಡಿದ್ದಾರೆ.