ಮಲ್ಲಿಕಾರ್ಜುನ ಮುತ್ಯಾನ ಮತ್ತೊಂದು ಆಡಿಯೋ ವೈರಲ್; ಗೂಟದ ಕಾರು ನಂಬಿಕೆಟ್ಟ ಮಾಜಿ ಶಾಸಕ ಚಿಂಚನಸೂರು! | Mallikarjuna Mutya Pocso Case Baburao Chinchansur Viral Audio Yadgir News Sat

ಮಲ್ಲಿಕಾರ್ಜುನ ಮುತ್ಯಾನ ಮತ್ತೊಂದು ಆಡಿಯೋ ವೈರಲ್; ಗೂಟದ ಕಾರು ನಂಬಿಕೆಟ್ಟ ಮಾಜಿ ಶಾಸಕ ಚಿಂಚನಸೂರು! | Mallikarjuna Mutya Pocso Case Baburao Chinchansur Viral Audio Yadgir News Sat



ಮಲ್ಲಿಕಾರ್ಜುನ ಮುತ್ಯಾನ ಮತ್ತೊಂದು ಆಡಿಯೋ ವೈರಲ್; ಗೂಟದ ಕಾರು ನಂಬಿಕೆಟ್ಟ ಮಾಜಿ ಶಾಸಕ ಚಿಂಚನಸೂರು! | Mallikarjuna Mutya Pocso Case Baburao Chinchansur Viral Audio Yadgir News Sat

ಪೋಕ್ಸೋ ಪ್ರಕರಣದಡಿ ತಲೆಮರೆಸಿಕೊಂಡಿರುವ ‘ಪವಾಡ ಪುರುಷ’ ಮಲ್ಲಿಕಾರ್ಜುನ ಮುತ್ಯಾನ ಹಳೆಯ ಆಡಿಯೋವೊಂದು ವೈರಲ್ ಆಗಿದೆ. 2023ರ ಚುನಾವಣೆಯಲ್ಲಿ ಬಾಬುರಾವ್ ಚಿಂಚನಸೂರ್‌ಗೆ ಗೆಲುವಿನ ಭರವಸೆ ನೀಡಿ ವಿಫಲವಾಗಿದ್ದ ಈ ಆಡಿಯೋ, ಮುತ್ಯಾನ ದೈವಶಕ್ತಿಯ ಡೋಂಗಿತನವನ್ನು ಬಯಲು ಮಾಡಿದೆ.

ಯಾದಗಿರಿ (ಫೆ.26): ಕಲ್ಯಾಣ ಕರ್ನಾಟಕ ಸೇರಿದಂತೆ ನೆರೆಯ ಆಂಧ್ರ ಮತ್ತು ತೆಲಂಗಾಣ ಭಾಗಗಳಲ್ಲಿ ‘ಪವಾಡ ಪುರುಷ’ ಎಂದು ನಂಬಲಾಗಿದ್ದ ಮಲ್ಲಿಕಾರ್ಜುನ ಮುತ್ಯಾ ಅವರ ಅಸಲಿ ಬಣ್ಣ ಈಗ ಒಂದೊಂದಾಗಿ ಬಯಲಾಗುತ್ತಿದೆ. ಅಪ್ರಾಪ್ತ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ವಿಡಿಯೋ ವೈರಲ್ ಆಗಿ ಪೋಕ್ಸೋ (POCSO) ಪ್ರಕರಣ ದಾಖಲಾಗುತ್ತಿದ್ದಂತೆಯೇ ಮುತ್ಯಾ ತಲೆಮರೆಸಿಕೊಂಡಿದ್ದಾರೆ. ಈ ನಡುವೆ, ಅವರ ಹಳೆಯ ಆಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಮುತ್ಯಾ ಅವರ ‘ದೈವಶಕ್ತಿ’ ಕೇವಲ ಡೋಂಗಿತನ ಎಂಬ ಚರ್ಚೆ ಶುರುವಾಗಿದೆ.

ಬಾಬುರಾವ್ ಚಿಂಚನಸೂರು ಮತ್ತು ಮುತ್ಯಾ ನಡುವಿನ ಡೀಲ್!

ವೈರಲ್ ಆಗಿರುವ ಈ ಆಡಿಯೋ ರೇಕಾರ್ಡಿಂಗ್ 2023ರ ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದ್ದಾಗಿದೆ. ಅಂದು ಗುರುಮಠಕಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಅವರು ಗೆಲುವಿಗಾಗಿ ಮಲ್ಲಿಕಾರ್ಜುನ ಮುತ್ಯಾ ಅವರ ಮೊರೆ ಹೋಗಿದ್ದರು. ಆಡಿಯೋದಲ್ಲಿ ಚಿಂಚನಸೂರು ಅವರು ಅತ್ಯಂತ ವಿನಮ್ರವಾಗಿ “ಮುತ್ಯಾ ಅವರೇ, ನನ್ನನ್ನು ಗೆಲ್ಲಿಸಿ ಆಶೀರ್ವಾದ ಮಾಡಿ” ಎಂದು ಬೇಡಿಕೊಳ್ಳುತ್ತಿರುವುದು ಕೇಳಿಸುತ್ತದೆ.

‘ಅದು ನಿನ್ನ ಸೀಟ್ ಅಲ್ಲ, ನಂದು!’ – ಮುತ್ಯಾ ಅಹಂಕಾರದ ನುಡಿ

ಚಿಂಚನಸೂರು ಅವರ ಮನವಿಗೆ ಉತ್ತರಿಸಿದ್ದ ಮುತ್ಯಾ, ಅತ್ಯಂತ ಅಹಂಕಾರದಿಂದ ಮಾತನಾಡಿದ್ದರು. ‘ಆ ಗುರುಮಠಕಲ್ ಸೀಟು ನಿನ್ನದಲ್ಲ, ಅದು ನಂದು.. ನಂದು.. ನಂದು..!’ ಎಂದು ಅಬ್ಬರಿಸಿದ್ದರು. ಅಷ್ಟೇ ಅಲ್ಲದೆ, ‘ನಾನು ಈ ಪೀಠದ ಮೇಲೆ ಕುಳಿತು ಹೇಳುತ್ತಿದ್ದೇನೆ, ಇದು ಭಾರತ ದೇಶವೇ ನೋಡುವಂತಹ ಆಶೀರ್ವಾದ. ನೀನು ರಾಜಕೀಯ ಮಾಡು, ನಿನ್ನ ಹಿಂದೆ ನಾನಿದ್ದೇನೆ. ಇದನ್ನು ಬೇಕಿದ್ದರೆ ರೇಕಾರ್ಡ್ ಮಾಡಿಕೋ’ ಎಂದು ಸವಾಲು ಹಾಕಿದ್ದರು. ಆದರೆ ವಿಪರ್ಯಾಸವೆಂದರೆ, ಮುತ್ಯಾ ಅಷ್ಟೊಂದು ಆತ್ಮವಿಶ್ವಾಸದಿಂದ ನೀಡಿದ್ದ ‘ದೈವವಾಣಿ’ ಚುನಾವಣೆಯಲ್ಲಿ ಅಟ್ಟಕ್ಕೇರಿತ್ತು. ಅಂದು ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರ ವಿರುದ್ಧ ಬಾಬುರಾವ್ ಚಿಂಚನಸೂರು ಹೀನಾಯವಾಗಿ ಸೋಲನ್ನಪ್ಪಿದ್ದರು.

10 ಎಸ್ಕಾರ್ಟ್ ಗಾಡಿಗಳ ವೈಭವದ ಆಸೆ!

ಇನ್ನು ಸೋಲುವ ಮುನ್ನ ಬಾಬುರಾವ್ ಚಿಂಚನಸೂರು ಅವರು ಮುತ್ಯಾಗೆ ನೀಡಿದ್ದ ಭರವಸೆಗಳು ಕೂಡ ಈಗ ನಗೆಪಾಟಲಿಗೀಡಾಗಿವೆ. ‘ಗೆದ್ದ ತಕ್ಷಣ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ. ನಿಮ್ಮ ದರ್ಶನಕ್ಕೆ ಬರುವಾಗ ನನ್ನ ಕಾರಿನ ಮುಂದೆ 5 ಎಸ್ಕಾರ್ಟ್ ಮತ್ತು ಹಿಂದೆ 5 ಎಸ್ಕಾರ್ಟ್ ಗಾಡಿಗಳು ಇರಲಿವೆ. ನಾನು ಅಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತೇನೆ’ ಎಂದು ಚಿಂಚನಸೂರು ಹೇಳಿದ್ದರು. ಆದರೆ ಮುತ್ಯಾ ಮಾಡಿದ ಆಶೀರ್ವಾದ ಫಲಿಸಲೂ ಇಲ್ಲ, ಚಿಂಚನಸೂರು ಸಚಿವರಾಗಲೂ ಇಲ್ಲ.

ಪೋಕ್ಸೋ ಕೇಸ್ ದಾಖಲಾಗುತ್ತಿದ್ದಂತೆ ಮುತ್ಯಾ ಪರಾರಿ

ಇತ್ತೀಚೆಗೆ ಬಾಲಕಿಯೊಬ್ಬಳಿಗೆ ಕಿರುಕುಳ ನೀಡಿದ ವಿಡಿಯೋ ಸಾಕ್ಷ್ಯವಾಗಿ ಸಿಕ್ಕ ನಂತರ ಮಹಿಳಾ ಮತ್ತು ಮಕ್ಕಳ ಸಂರಕ್ಷಣಾ ಸಂಘಟನೆಗಳು ಮುತ್ಯಾ ವಿರುದ್ಧ ದೂರು ದಾಖಲಿಸಿವೆ. ಪೊಲೀಸರು ಬಂಧಿಸಲು ಮುಂದಾಗುತ್ತಿದ್ದಂತೆಯೇ ‘ಪವಾಡ ಪುರುಷ’ ಈಗ ಎಸ್ಕೇಪ್ ಆಗಿದ್ದಾರೆ. ಈ ಹಳೆಯ ಆಡಿಯೋ ವೈರಲ್ ಆಗುತ್ತಿರುವುದು ಮುತ್ಯಾ ಅವರ ನಕಲಿ ಭವಿಷ್ಯ ಮತ್ತು ವ್ಯಕ್ತಿತ್ವವನ್ನು ಸಾರ್ವಜನಿಕವಾಗಿ ಬಯಲು ಮಾಡಿದೆ. ಭಕ್ತರನ್ನು ದಾರಿ ತಪ್ಪಿಸಿ ರಾಜಕೀಯ ಲಾಬಿ ನಡೆಸುತ್ತಿದ್ದ ಈತನನ್ನು ಕೂಡಲೇ ಬಂಧಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *