ರಾಜಸ್ಥಾನದ ನಾಗುರ್ ಜಿಲ್ಲೆಯಲ್ಲಿ, 5ನೇ ತರಗತಿ ವಿದ್ಯಾರ್ಥಿನಿ ಆಟವಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಆಕೆ ಹೃದಯಾಘಾತದಿಂದ ಮೃತಪಟ್ಟಿದ್ದು, ದುರಂತವೆಂದರೆ, ಕೆಲವೇ ತಿಂಗಳ ಹಿಂದೆ ಆಕೆಯ ಅಣ್ಣ ಕೂಡ ಇದೇ ರೀತಿ ಮೃತಪಟ್ಟಿದ್ದರು.

ದಿನಗಳ ಹಿಂದಷ್ಟೇ ಕರ್ತವ್ಯದ ವೇಳೆ 22ರ ಹರೆಯದ ಸೇನಾ ಕ್ಯಾಪ್ಟನ್ ಒಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಈಗ ರಾಜಸ್ಥಾನದಲ್ಲಿ ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದು ಶಾಲಾ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. 5ನೇ ಕ್ಲಾಸ್ನಲ್ಲಿ ಓದುತ್ತಿದ್ದ 9 ವರ್ಷದ ಹುಡುಗಿ ದಿವ್ಯ ಸಾವನ್ನಪ್ಪಿದ ವಿದ್ಯಾರ್ಥಿನಿ. ಮೈದಾನದಲ್ಲಿ ಆಟವಾಡುತ್ತಿದ್ದಾಗಲೇ ಕುಸಿದು ಬಿದ್ದು ಆಕೆ ಸಾವನ್ನಪ್ಪಿದ್ದಾಳೆ.

ರಾಜಸ್ಥಾನದ ನಾಗುರ್ ಜಿಲ್ಲೆಯಲ್ಲಿ ಈ ಫೆಬ್ರವರಿ 23ರಂದು ಈ ಘಟನೆ ನಡೆದಿದೆ. ಮುಂಜಾನೆ 7.48ರ ಸುಮಾರಿಗೆ ನಾಗುರ್ ಜಿಲ್ಲೆಯ ಗೊಟನ್ ನಗರದ ಗೊಟಲ್ನ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಬಾಲಕಿ ಆಟವಾಡುತ್ತಿದ್ದಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ದಿವ್ಯ ತಲನ್ಪುರದ ರಾಜೇಂದ್ರ ಬಾಪೀಡಿಯಾ ಎಂಬುವವರ ಪುತ್ರಿ.

ಎಂದಿನಂತೆ ಬೇಗನೇ ಶಾಲೆಗೆ ತಲುಪಿದ ದಿವ್ಯ ಬೆಳಗಿನ ಪ್ರಾರ್ಥನೆಗೆ ಇನ್ನೂ ಸಮಯವಿದ್ದಿದ್ದರಿಂದ ದಿವ್ಯಳು ಸೇರಿದಂತೆ ಹಲವರು ಮಕ್ಕಳು ಮೈದಾನದಲ್ಲಿ ಆಟವಾಡುತ್ತಿದ್ದರು. ಇದಕ್ಕಿದ್ದಂತೆ ದಿವ್ಯ ಎಡವಿ ಕುಸಿದು ಬಿದ್ದಿದ್ದು, ಬಳಿಕ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಶಾಲಾ ಸಿಬ್ಬಂದಿ ತಕ್ಷಣ ಆಕೆಯ ಸಹಾಯಕ್ಕೆ ಧಾವಿಸಿ ಬಂದು ಆಕೆಯ ಕುಟುಂಬಕ್ಕೆ ಮಾಹಿತಿ ನೀಡಿದರು. ಕೂಡಲೇ ಆಕೆಯನ್ನು ಗೋಟನ್ನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು.

ವೈದ್ಯರ ಪ್ರಕಾರ, ದಿವ್ಯ ಅವರ ದೇಹದ ಮೇಲೆ ಯಾವುದೇ ಬಾಹ್ಯ ಗಾಯದ ಗುರುತುಗಳಿಲ್ಲ. ಪ್ರಾಥಮಿಕ ಅಂದಾಜಿನಲ್ಲಿ, ಸಾವಿಗೆ ಕಾರಣ ಹೃದಯಾಘಾತ ಎಂದು ಶಂಕಿಸಲಾಗಿದೆ. ದಿವ್ಯ ಅವರ ಕುಟುಂಬವು ಮಗಳ ಮರಣೋತ್ತರ ಪರೀಕ್ಷೆಗೆ ನಿರಾಕರಿಸಿತು. ಹೀಗಾಗಿ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿಲಾಗಿದೆ.

ಶಾಲಾ ನಿರ್ದೇಶಕಿ ರಾಮ್ಕುನ್ವರ್ ಓಲಾ ಮಾತನಾಡಿ, ದಿವ್ಯ ಶಾಲೆಗೆ ಬಂದು ಇತರ ಮಕ್ಕಳಂತೆ ತಾನು ಮೈದಾನದಲ್ಲಿ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾಳೆ. ಕೇವಲ ತಿಂಗಳ ಹಿಂದೆ ನಡೆದ ಇದೇ ರೀತಿಯ ಘಟನೆಯಲ್ಲಿ ದಿವ್ಯ ತನ್ನ ಸೋದರನನ್ನು ಕಳೆದುಕೊಂಡಿದ್ದಳು. ದಿವ್ಯಳಾ ಅಣ್ಣ ಅಭಿಷೇಕ್ ಕೂಡ ಸುಮಾರು 4 ತಿಂಗಳ ಹಿಂದೆ ಇದೇ ರೀತಿ ಸಾವನ್ನಪ್ಪಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

2025 ರ ಸೆಪ್ಟೆಂಬರ್ 9ರಂದು ಮನೆಯಲ್ಲಿ ಆಟವಾಡುತ್ತಿದ್ದಾಗ ದಿವ್ಯಾಳ ಅಣ್ಣ ಪ್ರಜ್ಞೆ ತಪ್ಪಿ ಬಿದ್ದಿದ್ದರು ಮತ್ತು ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ , ಅಲ್ಲಿ ವೈದ್ಯರು ಅವರನ್ನು ಮೃತಪಟ್ಟಿರುವುದಾಗಿ ಘೋಷಿಸಿದರು. ಈಗ ದಿವ್ಯ ಅವರು ಕೂಡ ಸಾವನ್ನಪ್ಪಿದ್ದು, ಕೆಲ ತಿಂಗಳ ಅಂತರದಲ್ಲಿ ಇಬ್ಬರು ಮಕ್ಕಳನ್ನು ಕಳೆದುಕೊಂಡ ಪೋಷಕರು ತೀವ್ರ ಆಘಾತಕ್ಕೊಳಗಾಗಿದ್ದಾರೆ.

Source link
ಕೆಲ ತಿಂಗಳ ಅಂತರದಲ್ಲಿ ಹೃದಯಾಘಾತಕ್ಕೆ ಇಬ್ಬರೂ ಮಕ್ಕಳನ್ನು ಕಳೆದುಕೊಂಡ ಕುಟುಂಬ: ಅಣ್ಣನ ಹಾದಿ ಹಿಡಿದ ತಂಗಿ