Dubai: ಆದಾಯ ತೆರಿಗೆ ಇಲ್ಲದಿದ್ರೂ, ದುಬೈ ಹೇಗೆ ಅಷ್ಟೊಂದು ಶ್ರೀಮಂತವಾಗಿದೆ ಗೊತ್ತಾ? | Even Without Income Tax Do You Know How Dubai Is So Rich

Dubai: ಆದಾಯ ತೆರಿಗೆ ಇಲ್ಲದಿದ್ರೂ, ದುಬೈ ಹೇಗೆ ಅಷ್ಟೊಂದು ಶ್ರೀಮಂತವಾಗಿದೆ ಗೊತ್ತಾ? | Even Without Income Tax Do You Know How Dubai Is So Rich



Dubai: ಆದಾಯ ತೆರಿಗೆ ಇಲ್ಲದಿದ್ರೂ, ದುಬೈ ಹೇಗೆ ಅಷ್ಟೊಂದು ಶ್ರೀಮಂತವಾಗಿದೆ ಗೊತ್ತಾ? | Even Without Income Tax Do You Know How Dubai Is So Rich

ದುಬೈನಲ್ಲಿ ವೈಯಕ್ತಿಕ ಆದಾಯ ತೆರಿಗೆ ಇಲ್ಲದಿದ್ದರೂ, ಸರ್ಕಾರವು ತನ್ನ ಆದಾಯವನ್ನು ಬೇರೆ ಮೂಲಗಳಿಂದ ಗಳಿಸುತ್ತದೆ. ಕಾರ್ಪೊರೇಟ್ ತೆರಿಗೆ, ಮೌಲ್ಯವರ್ಧಿತ ತೆರಿಗೆ (VAT), ಪ್ರವಾಸೋದ್ಯಮ, ಸೇವಾ ಶುಲ್ಕಗಳು ಮತ್ತು ಸರ್ಕಾರಿ ಸ್ವಾಮ್ಯದ ಕಂಪನಿಗಳ ಲಾಭದ ಮೂಲಕ ದುಬೈ ತನ್ನ ಆರ್ಥಿಕತೆಯನ್ನು ಬಲಪಡಿಸಿಕೊಂಡಿದೆ.

ದುಬೈನಲ್ಲಿ ಆದಾಯ ತೆರಿಗೆ ಇಲ್ಲ: ದುಬೈ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ ಎಂದರೆ ನಂಬುತ್ತೀರಾ? ಹೌದು ದುಬೈನಲ್ಲಿ ವೈಯಕ್ತಿಕ ಆದಾಯ ತೆರಿಗೆ ಇಲ್ಲ. ಆದಾಯ ತೆರಿಗೆಯೇ ಇಲ್ಲದಿದ್ದರೆ, ಸರ್ಕಾರವು ಆದಾಯವನ್ನು ಹೇಗೆ ಗಳಿಸುತ್ತದೆ ಎಂಬ ಪ್ರಶ್ನೆ ಮೂಡುತ್ತದೆ ಅಲ್ಲವೇ? ವಾಸ್ತವವಾಗಿ, ದುಬೈನಲ್ಲಿ ವ್ಯಕ್ತಿಗಳ ಆದಾಯದ ಮೇಲೆ ಯಾವುದೇ ನೇರ ತೆರಿಗೆ ಇಲ್ಲದಿರುವುದು ಜಗತ್ತಿನಾದ್ಯಂತ ಹೂಡಿಕೆದಾರರನ್ನು ಸೆಳೆಯುವ ಪ್ರಮುಖ ಅಂಶವಾಗಿದೆ. ಆದರೆ, ಆದಾಯ ತೆರಿಗೆ ಇಲ್ಲದಿದ್ದರೂ ದುಬೈ ಸರ್ಕಾರವು ಪ್ರಪಂಚದ ಅತ್ಯಂತ ಬಲಿಷ್ಠ ಮತ್ತು ವೈವಿಧ್ಯಮಯ ಆರ್ಥಿಕತೆಗಳಲ್ಲಿ ಒಂದನ್ನು ಕಟ್ಟಿದೆ. ಇಲ್ಲಿನ ಸರ್ಕಾರವು ಕೇವಲ ತೆರಿಗೆಯನ್ನು ನಂಬಿಕೊಳ್ಳದೆ ಸೇವೆಗಳು, ಅಂತರರಾಷ್ಟ್ರೀಯ ವ್ಯಾಪಾರ, ಪ್ರವಾಸೋದ್ಯಮ ಮತ್ತು ಕಾರ್ಯತಂತ್ರದ ಹೂಡಿಕೆಗಳ ಮೂಲಕ ತನ್ನ ಖಜಾನೆಯನ್ನು ಸಮೃದ್ಧಗೊಳಿಸಿಕೊಳ್ಳುತ್ತದೆ.

ಸರ್ಕಾರಿ ಶುಲ್ಕಗಳು ಮತ್ತು ಸಾರ್ವಜನಿಕ ಸೇವೆಗಳ ಆದಾಯ

ದುಬೈ ಸರ್ಕಾರದ ಆದಾಯದ ಬಹುದೊಡ್ಡ ಭಾಗವು ಆಡಳಿತಾತ್ಮಕ ಮತ್ತು ಸೇವಾ ಶುಲ್ಕಗಳಿಂದ ಬರುತ್ತದೆ. ದುಬೈನಲ್ಲಿ ವಾಸಿಸುವ ಲಕ್ಷಾಂತರ ವಲಸಿಗರು ವೀಸಾ ಶುಲ್ಕ, ರೆಸಿಡೆನ್ಸಿ ಪರ್ಮಿಟ್ ಮತ್ತು ಕೆಲಸದ ಪರವಾನಗಿ ಪಡೆಯಲು ನಿಗದಿತ ಶುಲ್ಕ ಪಾವತಿಸಬೇಕು. ಇದರ ಜೊತೆಗೆ, ಯಾವುದೇ ವ್ಯವಹಾರವನ್ನು ಆರಂಭಿಸಲು ಅಥವಾ ನವೀಕರಿಸಲು ಕಂಪನಿಗಳು ಭಾರಿ ಮೊತ್ತದ ಪರವಾನಗಿ ಶುಲ್ಕವನ್ನು ನೀಡುತ್ತವೆ. ಕಸ ವಿಲೇವಾರಿ, ನೀರು, ವಿದ್ಯುತ್ ಮತ್ತು ಆಸ್ತಿ ನೋಂದಣಿ ಶುಲ್ಕಗಳು ಕೂಡ ಸರ್ಕಾರದ ಪಾಲಿಗೆ ದೊಡ್ಡ ಲಾಭ ತರುತ್ತವೆ. ಇಲ್ಲಿನ ಕಟ್ಟುನಿಟ್ಟಾದ ಸಂಚಾರ ನಿಯಮಗಳು ಮತ್ತು ಸ್ವಯಂಚಾಲಿತ ದಂಡ ವಿಧಿಸುವ ವ್ಯವಸ್ಥೆಯು ಶಿಸ್ತಿನ ಜೊತೆಗೆ ಆದಾಯವನ್ನೂ ತಂದುಕೊಡುತ್ತದೆ.

ಕಾರ್ಪೊರೇಟ್ ತೆರಿಗೆ, ಪರೋಕ್ಷ ತೆರಿಗೆಯ ಜಾಲ

ವ್ಯಕ್ತಿಗಳಿಗೆ ತೆರಿಗೆ ಇಲ್ಲದಿದ್ದರೂ, ವ್ಯವಹಾರಗಳಿಗೆ ಯುಎಇ ಸರ್ಕಾರ ತೆರಿಗೆ ವಿಧಿಸುತ್ತದೆ. 2023 ರಿಂದ ಜಾರಿಗೆ ಬಂದಿರುವ ನಿಯಮದಂತೆ, 375,000 ದಿರ್ಹಮ್‌ಗಳಿಗಿಂತ ಹೆಚ್ಚಿನ ಲಾಭ ಗಳಿಸುವ ಕಂಪನಿಗಳ ಮೇಲೆ 9% ಕಾರ್ಪೊರೇಟ್ ತೆರಿಗೆಯನ್ನು ವಿಧಿಸಲಾಗುತ್ತಿದೆ. ಅಲ್ಲದೆ, ಪ್ರತಿಯೊಂದು ಸರಕು ಮತ್ತು ಸೇವೆಗಳ ಮೇಲೆ 5% ಮೌಲ್ಯವರ್ಧಿತ ತೆರಿಗೆಯನ್ನು (VAT) ಸಂಗ್ರಹಿಸಲಾಗುತ್ತದೆ. ವಿಶೇಷವಾಗಿ ತೈಲ ಕಂಪನಿಗಳ ಮೇಲೆ ಶೇ. 55 ರವರೆಗೆ ಮತ್ತು ವಿದೇಶಿ ಬ್ಯಾಂಕುಗಳ ಮೇಲೆ ಶೇ. 20 ರಷ್ಟು ದೊಡ್ಡ ಪ್ರಮಾಣದ ತೆರಿಗೆಯನ್ನು ವಿಧಿಸುವ ಮೂಲಕ ಸರ್ಕಾರವು ತನ್ನ ಆರ್ಥಿಕತೆಯನ್ನು ಸುಸ್ಥಿರವಾಗಿರಿಸಿದೆ.

ಪ್ರವಾಸೋದ್ಯಮ, ವಾಯುಯಾನವೇ ಆದಾಯ

ದುಬೈ ಎಂದರೆ ಪ್ರವಾಸಿಗರ ಸ್ವರ್ಗ. ಪ್ರತಿ ವರ್ಷ ಕೋಟ್ಯಂತರ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಹೋಟೆಲ್ ಬುಕಿಂಗ್, ರೆಸ್ಟೋರೆಂಟ್ ಹಾಗೂ ಮನರಂಜನಾ ತಾಣಗಳಲ್ಲಿ ಪ್ರವಾಸೋದ್ಯಮ ತೆರಿಗೆಯನ್ನು (Tourism Dirham) ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೆ, ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಹಾದುಹೋಗುವ ಪ್ರತಿಯೊಬ್ಬ ಪ್ರಯಾಣಿಕನಿಂದಲೂ ನಿರ್ಗಮನ ಮತ್ತು ಸೇವಾ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ಇದು ವಾಯುಯಾನ ಕ್ಷೇತ್ರವನ್ನು ದೇಶದ ಪ್ರಮುಖ ಆದಾಯದ ಮೂಲವನ್ನಾಗಿ ಮಾಡಿದೆ.

ಸರ್ಕಾರಿ ಸ್ವಾಮ್ಯದ ಕಂಪನಿಗಳ ಭರ್ಜರಿ ಲಾಭ

ದುಬೈ ಸರ್ಕಾರವು ವಿಶ್ವದರ್ಜೆಯ ಹಲವಾರು ಕಂಪನಿಗಳ ಒಡೆತನವನ್ನು ಹೊಂದಿದೆ. ಜಾಗತಿಕವಾಗಿ ಯಶಸ್ವಿಯಾಗಿರುವ ‘ಎಮಿರೇಟ್ಸ್’ ವಿಮಾನಯಾನ ಸಂಸ್ಥೆಯು ಸರ್ಕಾರಕ್ಕೆ ಬೃಹತ್ ಪ್ರಮಾಣದ ಲಾಭವನ್ನು ತಂದುಕೊಡುತ್ತದೆ. ಇದರ ಜೊತೆಗೆ ಬುರ್ಜ್ ಖಲೀಫಾದಂತಹ ಐಕಾನಿಕ್ ಕಟ್ಟಡಗಳನ್ನು ನಿರ್ಮಿಸಿರುವ ಸರ್ಕಾರಿ ಬೆಂಬಲಿತ ರಿಯಲ್ ಎಸ್ಟೇಟ್ ಕಂಪನಿಗಳು ಹೂಡಿಕೆ, ಗುತ್ತಿಗೆ ಮತ್ತು ಪ್ರವಾಸೋದ್ಯಮದ ಮೂಲಕ ನಿರಂತರವಾಗಿ ಸರ್ಕಾರದ ಖಜಾನೆಯನ್ನು ತುಂಬಿಸುತ್ತಿವೆ.



Source link

Leave a Reply

Your email address will not be published. Required fields are marked *