
ಬೆಂಗಳೂರಿನ ಅಮೃತಹಳ್ಳಿ ಗ್ಯಾಂಗ್ ರೇಪ್ ಪ್ರಕರಣವು ವ್ಯವಸ್ಥಿತ ಸೆಕ್ಸ್ ರ‍್ಯಾಕೆಟ್ ಎಂಬ ಸಂಶಯ ಮೂಡಿಸಿದೆ. ಆರೋಪಿಗಳು ಇನ್‌ಸ್ಟಾಗ್ರಾಮ್ ಮೂಲಕ ಹೊರ ರಾಜ್ಯದ ಯುವತಿಯರನ್ನು ಟಾರ್ಗೆಟ್ ಮಾಡಿ, ಫೋಟೋ ಶೂಟ್ ಮತ್ತು ಪಾರ್ಟಿಗಳ ಆಮಿಷವೊಡ್ಡಿ ವಿಲ್ಲಾಗಳಿಗೆ ಕರೆದೊಯ್ದು ದೌರ್ಜನ್ಯ ಎಸಗುತ್ತಿದ್ದರು.
ಬೆಂಗಳೂರು (ಫೆ.28): ಸಿಲಿಕಾನ್ ಸಿಟಿಯನ್ನು ಬೆಚ್ಚಿಬೀಳಿಸಿರುವ ಅಮೃತಹಳ್ಳಿ ಗ್ಯಾಂಗ್ ರೇಪ್ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಆರೋಪಿಗಳು ಎಸಗುತ್ತಿದ್ದ ಒಂದೊಂದೇ ಪೈಶಾಚಿಕ ಕೃತ್ಯಗಳು ಹೊರಬರುತ್ತಿವೆ. ಇದು ಕೇವಲ ಒಂದು ದಿನದ ಆಕಸ್ಮಿಕ ಘಟನೆಯಲ್ಲ, ಬದಲಾಗಿ ಇದೊಂದು ವ್ಯವಸ್ಥಿತವಾಗಿ ನಡೆಯುತ್ತಿದ್ದ ‘ಸೆಕ್ಸ್ ರ‍್ಯಾಕೆಟ್’ ಎಂಬ ಸಂಶಯ ದಟ್ಟವಾಗುತ್ತಿದೆ. ಇನ್‌ಸ್ಟಾಗ್ರಾಮ್ ಮತ್ತು ಕಾಲೇಜುಗಳಲ್ಲಿ ಪರಿಚಯವಾಗುವ ಯುವತಿಯರನ್ನು ಬಲೆಗೆ ಬೀಳಿಸಲು ಈ ಗ್ಯಾಂಗ್ ಅತ್ಯಂತ ಚಾಣಾಕ್ಷ ತಂತ್ರಗಳನ್ನು ಬಳಸುತ್ತಿತ್ತು.
ಹೊರ ರಾಜ್ಯದ ಯುವತಿಯರೇ ಟಾರ್ಗೆಟ್ ಏಕೆ?
ಪೊಲೀಸರ ತನಿಖೆಯ ವೇಳೆ ಬಯಲಾದ ಅತ್ಯಂತ ಆಘಾತಕಾರಿ ವಿಷಯವೆಂದರೆ, ಆರೋಪಿಗಳು ಹೆಚ್ಚಾಗಿ ಬೆಂಗಳೂರಿನ ಮೂಲ ನಿವಾಸಿಗಳಲ್ಲದ ಯುವತಿಯರನ್ನೇ ಗುರಿಯಾಗಿಸಿಕೊಳ್ಳುತ್ತಿದ್ದರು. ದೆಹಲಿ, ಮುಂಬೈ, ಪಶ್ಚಿಮ ಬಂಗಾಳ ಅಥವಾ ಉತ್ತರ ಕರ್ನಾಟಕದ ಭಾಗಗಳಿಂದ ಓದಿಗೆಂದು ಬೆಂಗಳೂರಿಗೆ ಬಂದು ಪಿಜಿ ಅಥವಾ ಹಾಸ್ಟೆಲ್‌ಗಳಲ್ಲಿ ಇರುವ ಯುವತಿಯರೊಂದಿಗೆ ಮೊದಲು ಸ್ನೇಹ ಬೆಳೆಸುತ್ತಿದ್ದರು. ಈ ಯುವತಿಯರಿಗೆ ಸ್ಥಳೀಯವಾಗಿ ಯಾರೂ ಆಪ್ತರಿರುವುದಿಲ್ಲ ಮತ್ತು ಏನಾದರೂ ತೊಂದರೆಯಾದರೆ ಮರ್ಯಾದೆಗೆ ಅಂಜಿ ದೂರು ನೀಡುವುದಿಲ್ಲ ಎಂಬುದು ಆರೋಪಿಗಳ ಲೆಕ್ಕಾಚಾರವಾಗಿತ್ತು.
ಫೋಟೋ ಶೂಟ್ ಮತ್ತು ಆಫ್ಟರ್ ಪಾರ್ಟಿ ಎಂಬ ಆಮಿಷ:
ಆರೋಪಿಗಳಾದ ನಿಕಿಲ್ ಮತ್ತು ಡಿಕ್ಸನ್ ಇನ್‌ಸ್ಟಾಗ್ರಾಮ್ ಮೂಲಕ ಮಾಡೆಲಿಂಗ್ ಆಸಕ್ತಿ ಇರುವ ಅಥವಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಯುವತಿಯರನ್ನು ಸಂಪರ್ಕಿಸುತ್ತಿದ್ದರು. ‘ಉಚಿತವಾಗಿ ಫೋಟೋ ಶೂಟ್ ಮಾಡಿಕೊಡುತ್ತೇವೆ’ ಅಥವಾ ‘ನಮ್ಮ ಪ್ರಭಾವಿ ಗೆಳೆಯರ ಗ್ರೂಪ್ ಇದೆ, ದೊಡ್ಡ ಆಫ್ಟರ್ ಪಾರ್ಟಿ ಇದೆ ಬನ್ನಿ’ ಎಂದು ನಂಬಿಸಿ ಐಷಾರಾಮಿ ವಿಲ್ಲಾಗಳಿಗೆ ಕರೆದೊಯ್ಯುತ್ತಿದ್ದರು. ಕೇವಲ ಅಮೃತಹಳ್ಳಿ ಮಾತ್ರವಲ್ಲದೆ, ಬೆಂಗಳೂರಿನ ಸುತ್ತಮುತ್ತಲಿನ ಹಲವು ವಿಲ್ಲಾಗಳನ್ನು ಇವರು ಪಾರ್ಟಿ ಹೆಸರಿನಲ್ಲಿ ಬುಕ್ ಮಾಡುತ್ತಿದ್ದರು. ಅಷ್ಟೇ ಅಲ್ಲದೆ, ಯುವತಿಯರನ್ನು ಗೋವಾ ಹಾಗೂ ಹೊರ ದೇಶಗಳಿಗೂ ಪಾರ್ಟಿ ನೆಪದಲ್ಲಿ ಕರೆದೊಯ್ದಿರುವ ಮಾಹಿತಿ ಲಭ್ಯವಾಗಿದೆ.
ಆ ರಾತ್ರಿ ವಿಲ್ಲಾದಲ್ಲಿ ನಡೆದಿದ್ದೇನು?
ದೂರು ದಾಖಲಾದ ದಿನದಂದು ಜಕ್ಕೂರು ಬಳಿಯ ವಿಲ್ಲಾದಲ್ಲಿ ನಡೆದ ಪಾರ್ಟಿಯಲ್ಲಿ ಒಟ್ಟು 9 ಮಂದಿ ಇದ್ದರು. ಈ ಪೈಕಿ ಆರು ಮಂದಿ ಯುವತಿಯರು ಹಾಗೂ ಮೂವರು ಯುವಕರಿದ್ದರು. ಆರೋಪಿಗಳಾದ ನಿಕಿಲ್, ಡಿಕ್ಸನ್ ಮತ್ತು ಅನಿರುದ್ಧ್ ಎಂಬುವವರು ಅಲ್ಲಿ ಹಾಜರಿದ್ದರು. ನಿಕಿಲ್ ಮತ್ತು ಡಿಕ್ಸನ್‌ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದರೆ, ದಾವಣಗೆರೆ ಮೂಲದ ಕಾಂಟ್ರಾಕ್ಟರ್ ಅನಿರುದ್ಧ್‌ನನ್ನು ಠಾಣೆಗೆ ಕರೆಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ತನಿಖೆಗೆ ಹೈಪ್ರೊಫೈಲ್ ತಂಡ ರಚನೆ:
ಆರೋಪಿ ನಿಕಿಲ್‌ಗೆ ಕೆಲವು ಪ್ರಭಾವಿ ಐಪಿಎಸ್ ಅಧಿಕಾರಿಗಳ ನಂಟು ಇದೆ ಎಂಬ ಗಂಭೀರ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ, ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಡಿಸಿಪಿ ಮಿಥುನ್ ಕುಮಾರ್ ಇದರ ನೇತೃತ್ವ ವಹಿಸಿದ್ದಾರೆ. ತಂಡದಲ್ಲಿ ಯಲಹಂಕ ಎಸಿಪಿ ನರಸಿಂಹಮೂರ್ತಿ ಮತ್ತು ಸಂಪಿಗೆಹಳ್ಳಿ ಎಸಿಪಿ ಮುರುಗೇಂದ್ರಯ್ಯ ಅವರಂತಹ ದಕ್ಷ ಅಧಿಕಾರಿಗಳಿದ್ದಾರೆ.
ಈಗಾಗಲೇ ಹತ್ತಕ್ಕೂ ಹೆಚ್ಚು ಸಂತ್ರಸ್ತ ಯುವತಿಯರು ಪೊಲೀಸರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದ್ದು, ಹೊಸದಾಗಿ ಯಾರಾದರೂ ದೂರು ನೀಡಲು ಮುಂದೆ ಬಂದರೆ ಅವರ ವಿವರಗಳನ್ನು ರಹಸ್ಯವಾಗಿರಿಸಿ ತನಿಖೆ ನಡೆಸಲು ಪೊಲೀಸರು ಸಿದ್ಧರಾಗಿದ್ದಾರೆ. ಈ ಹೈಫೈ ಪಾರ್ಟಿಗಳ ರಹಸ್ಯ ಬಯಲಾಗುತ್ತಿದ್ದಂತೆ ಗಾಂಧಿನಗರದ ಪಡಸಾಲೆಗಳಲ್ಲಿ ನಡುಕ ಶುರುವಾಗಿದೆ.