
ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ, ಟೆಹ್ರಾನ್ ಮತ್ತು ಕುಮ್ಮು ನಗರಗಳಲ್ಲಿ ವ್ಯಾಸಂಗ ಮಾಡುತ್ತಿರುವ 150ಕ್ಕೂ ಹೆಚ್ಚು ಕನ್ನಡಿಗರು, ವಿಶೇಷವಾಗಿ ಅಲಿಪುರದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಟರ್ನೆಟ್ ಸೇವೆ ಸ್ಥಗಿತಗೊಂಡಿರುವುದರಿಂದ ಕುಟುಂಬದೊಂದಿಗೆ ಸಂಪರ್ಕ ಕಡಿತಗೊಂಡಿದೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಈಗ ವಿಕೋಪಕ್ಕೆ ತಲುಪಿದೆ. ಅಮೆರಿಕಾ ಮತ್ತು ಇಸ್ರೇಲ್ ಪಡೆಗಳು ಜಂಟಿಯಾಗಿ ಇರಾನ್ ಮೇಲೆ ಭೀಕರ ಏರ್ ಸ್ಟ್ರೈಕ್ ನಡೆಸಿರುವುದು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ. ಈ ಯುದ್ಧದ ಕಾರ್ಮೋಡದ ನಡುವೆ ಇರಾನ್ನ ವಿವಿಧ ನಗರಗಳಲ್ಲಿ ವ್ಯಾಸಂಗ ಮತ್ತು ಉದ್ಯೋಗಕ್ಕಾಗಿ ನೆಲೆಸಿರುವ 150ಕ್ಕೂ ಹೆಚ್ಚು ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಲಿಪುರದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ:
ಇರಾನ್ನ ರಾಜಧಾನಿ ಟೆಹ್ರಾನ್ ಹಾಗೂ ಕುಮ್ಮು (Qom) ನಗರಗಳಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲಿಪುರ ಗ್ರಾಮದ ನೂರಕ್ಕೂ ಹೆಚ್ಚು ಮಂದಿ ಇರಾನ್ನಲ್ಲಿದ್ದಾರೆ ಎಂದು ತಿಳಿದುಬಂದಿದೆ. ಇವರಲ್ಲಿ ಹೆಚ್ಚಿನವರು ಎಂಬಿಬಿಎಸ್ (MBBS) ಹಾಗೂ ಇಸ್ಲಾಮಿಕ್ ಅಧ್ಯಯನಕ್ಕಾಗಿ ತೆರಳಿರುವ ವಿದ್ಯಾರ್ಥಿಗಳಾಗಿದ್ದಾರೆ.
ಇಂಟರ್ನೆಟ್ ಸ್ಥಗಿತ: ಪೋಷಕರ ಆತಂಕ:
ಯುದ್ಧದ ಭೀತಿಯ ಹಿನ್ನೆಲೆಯಲ್ಲಿ ಇರಾನ್ ಸರ್ಕಾರ ದೇಶಾದ್ಯಂತ ಇಂಟರ್ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದರಿಂದಾಗಿ ಇರಾನ್ನಲ್ಲಿರುವ ವಿದ್ಯಾರ್ಥಿಗಳು ಮತ್ತು ನಾಗರಿಕರು ಕರ್ನಾಟಕದಲ್ಲಿರುವ ತಮ್ಮ ಕುಟುಂಬಸ್ಥರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ. ಮಧ್ಯಾಹ್ನದವರೆಗೂ ಮಕ್ಕಳೊಂದಿಗೆ ಮಾತನಾಡಿದ್ದ ಪೋಷಕರಿಗೆ ಈಗ ಸಂಪರ್ಕ ಕಡಿತಗೊಂಡಿರುವುದು ಭೀತಿ ಹುಟ್ಟಿಸಿದೆ. ಅಲಿಪುರ ಸೇರಿದಂತೆ ರಾಜ್ಯದ ವಿವಿಧೆಡೆ ಪೋಷಕರು ತಮ್ಮ ಮಕ್ಕಳ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.
ಸುರಕ್ಷಿತವಾಗಿದ್ದಾರೆ ಎಂದ ಹಕೀಮ್ ರಾಜಾ:
ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಇಂಡೋ-ಇರಾನ್ ಚೇಂಬರ್ಸ್ ಆಫ್ ಕಾಮರ್ಸ್ನ ರಾಷ್ಟ್ರೀಯ ಅಧ್ಯಕ್ಷ ಹಕೀಮ್ ರಾಜಾ, “ನಮ್ಮ ಕುಟುಂಬಸ್ಥರು ಮತ್ತು ಅನೇಕ ಸಂಬಂಧಿಕರು ಇರಾನ್ನಲ್ಲಿದ್ದಾರೆ. ಮಧ್ಯಾಹ್ನದವರೆಗೂ ನಾನು ಅವರ ಸಂಪರ್ಕದಲ್ಲಿದ್ದೆ, ಎಲ್ಲರೂ ಸುರಕ್ಷಿತವಾಗಿದ್ದಾರೆ. ಆದರೆ ಮಧ್ಯಾಹ್ನದ ನಂತರ ಇಂಟರ್ನೆಟ್ ಸ್ಥಗಿತಗೊಂಡಿರುವುದರಿಂದ ಮಾಹಿತಿ ಸಿಗುತ್ತಿಲ್ಲ. ಟೆಹ್ರಾನ್ ಮತ್ತು ಕುಮ್ಮು ನಗರಗಳಲ್ಲಿ ಅಲಿಪುರದ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 150ಕ್ಕೂ ಹೆಚ್ಚು ಕನ್ನಡಿಗರು ಇದ್ದಾರೆ,” ಎಂದು ಮಾಹಿತಿ ನೀಡಿದ್ದಾರೆ.
ಸರ್ಕಾರದ ನೆರವಿಗೆ ಆಗ್ರಹ:
ಇರಾನ್ ಮೇಲೆ ಸರಣಿ ದಾಳಿಗಳು ನಡೆಯುತ್ತಿರುವುದರಿಂದ ಅಲ್ಲಿನ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಸಂತ್ರಸ್ತ ಕುಟುಂಬಗಳು ಮನವಿ ಮಾಡಿವೆ. ವಿದೇಶಾಂಗ ಇಲಾಖೆಯು ಇರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕ ಸಾಧಿಸಿ, ಕನ್ನಡಿಗರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕೆಂದು ಒತ್ತಾಯಿಸಲಾಗಿದೆ.