
ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ, 850 ಮಹಿಳೆಯರು ತಮ್ಮ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಅರ್ಧಕ್ಕೆ ನಿಂತಿದ್ದ ಯಲ್ಲಮ್ಮ ದೇವಸ್ಥಾನದ ನಿರ್ಮಾಣಕ್ಕೆ ಸಮರ್ಪಿಸಿದ್ದಾರೆ. ದೇಗುಲ ಕಾಮಗಾರಿಯನ್ನು ಪೂರ್ಣಗೊಳಿಸಲು ಈ ಮಹಿಳೆಯರು ಒಟ್ಟು ₹16 ಲಕ್ಷ ದೇಣಿಗೆ ನೀಡಲು ಮುಂದಾಗಿದ್ದಾರೆ.
ಗದಗ: ತಮ್ಮ ಊರಿನಲ್ಲಿ ಅರ್ಧಕ್ಕೆ ನಿಂತ ಯಲ್ಲಮ್ಮ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ 850 ಮಹಿಳೆಯರು ತಮಗೆ ಸರ್ಕಾರ ನೀಡಿದ್ದ ಗೃಹಲಕ್ಷ್ಮಿ ಹಣವನ್ನು ಸಮರ್ಪಿಸಿರುವ ಪ್ರಸಂಗ ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.
ತಿಮ್ಮಾಪೂರದಲ್ಲಿ ಕಳೆದ 4 ವರ್ಷದಿಂದ ಯಲ್ಲಮ್ಮ ದೇವಸ್ಥಾನ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈಗಾಗಲೇ ಗ್ರಾಮಸ್ಥರು ₹50 ಲಕ್ಷ ವೆಚ್ಚ ಮಾಡಿದ್ದಾರೆ. ಹಣದ ಕೊರತೆಯಿಂದಾಗಿ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಮಂದಿರ ಪೂರ್ಣಗೊಳ್ಳಲು ಲಕ್ಷಾಂತರ ಅಗತ್ಯವಿದ್ದು, ಗ್ರಾಮದ 850 ಮಹಿಳೆಯರು ತಮ್ಮ ಖಾತೆಗೆ ಜಮೆಯಾಗುವ ಗೃಹಲಕ್ಷ್ಮಿ ಹಣವನ್ನು ನೀಡುವ ಮೂಲಕ ರಾಜ್ಯದ ಗಮಸ ಸೆಳೆದಿದ್ದಾರೆ.
₹2.50 ಲಕ್ಷ ದೇಣಿಗೆ
850 ಗೃಹಲಕ್ಷ್ಮಿ ಫಲಾನುಭವಿಗಳು ತಮಗೆ ಬರುವ ಹಣವನ್ನು ಸಂಗ್ರಹಿಸಿ ಈಗಾಗಲೇ ₹2.50 ಲಕ್ಷ ದೇಣಿಗೆ ನೀಡಿದ್ದು, ಒಟ್ಟು ₹16 ಲಕ್ಷ ನೀಡಲಿದ್ದಾರೆ. ಈ ನಿರ್ಧಾರಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂಸತ ವ್ಯಕ್ತಪಡಿಸಿದ್ದಾರೆ.
ಮೃತರ ಖಾತೆಗೆ ಗೃಹಲಕ್ಷ್ಮೀ ಹಣ ಬಗ್ಗೆ ಪರಿಶೀಲನೆ: ಲಾಡ್
ಬೆಂಗಳೂರು: ಕೆಲವೆಡೆ ಮೃತಪಟ್ಟವರ ಖಾತೆಗೆ ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆಯ ಹಣ ಜಮಾ ಆಗಿರಬಹುದು. ಸಂಬಂಧಪಟ್ಟ ಇಲಾಖೆಯವರು ಅದನ್ನು ಪರಿಶೀಲಿಸುತ್ತಾರೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, 1.30 ಕೋಟಿ ಫಲಾನುಭವಿಗಳಲ್ಲಿ ಶೇ.0.1 ಅಥವಾ ಶೇ.0.2ರಷ್ಟು ಕೇಸ್ಗಳಲ್ಲಿ ಲೋಪ ಆಗಿರುತ್ತವೆ. ಆದರೆ, ದುರುಪಯೋಗ ಆಗಿರುವ ಸಾಧ್ಯತೆ ಬಹಳ ಕಡಿಮೆ ಎಂದರು.
ಸಚಿವ ಸಂಪುಟದಲ್ಲಿ 56,000 ಹುದ್ದೆಗಳ ನೇಮಕಾತಿಗೆ ನಿರ್ಣಯ ತೆಗೆದುಕೊಳ್ಳಲಾಗಿದೆ. ಆದರೆ, ಎಷ್ಟು ದಿನಗಳಲ್ಲಿ ನೇಮಕಾತಿ ಮಾಡಲಾಗುತ್ತದೆ ಎಂಬುದರ ಕುರಿತು ಇನ್ನೆರಡು ವಾರಗಳಲ್ಲಿ ಸ್ಪಷ್ಟತೆ ಸಿಗಲಿದೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.