ಚಿಕ್ಕಮಗಳೂರು, ಮಾರ್ಚ್ 1: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿ ಪ್ರದೇಶದಲ್ಲಿ 30ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಸಂಚರಿಸುತ್ತಿದ್ದು, ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹಾಸನ ಜಿಲ್ಲೆಯ ಬೇಲೂರು ಮಾರ್ಗವಾಗಿ ಬಂದಿರುವ ಈ ಹಿಂಡು ಕಳೆದ ನಾಲ್ಕು ದಿನಗಳಿಂದ ವಿವಿಧ ಗ್ರಾಮಗಳ ಸುತ್ತಮುತ್ತ ಬೀಡುಬಿಟ್ಟಿದೆ. ಕಸ್ಕೆಬೈಲು ಗ್ರಾಮದ ಸಮೀಪ ರಸ್ತೆಯಲ್ಲೇ ಕಾಡಾನೆಗಳು ತಂಗಿದ್ದ ವಾಹನ ಸವಾರರು ಭಯಭೀತರಾಗಿದ್ದಾರೆ. ಜೊತೆಗೆ ಕಾಫಿ ತೋಟಗಳಲ್ಲಿಯೂ ಕಾಡಾನೆಗಳ ಸಂಚಾರ ಕಂಡುಬಂದಿದ್ದು, ಕಾರ್ಮಿಕರು ತೋಟಗಳಿಗೆ ತೆರಳದಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.
ಬೀಟಮ್ಮ, ಭುವನೇಶ್ವರಿ ಹಾಗೂ ಗ್ಯಾಂಗ್ ಎಂದು ಗುರುತಿಸಲಾಗಿರುವ ಈ ಕಾಡಾನೆಗಳ ಹಿಂಡು ಕಸ್ಕೆಬೈಲು, ಕಲ್ಲುಗುಡ್ಡ, ಚೌಕ, ಕಮ್ಮರಗೋಡು ಗಡಿ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಓಡಾಟ ನಡೆಸಲಾಗುತ್ತಿದೆ. ಹಿಂಡಿನಿಂದ ಕೆಲವು ಆನೆಗಳು ಅಲೆದಾಡುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಮೂಡಿಗೆರೆ ಅರಣ್ಯ ಅಧಿಕಾರಿಗಳು ಸ್ಥಳದಲ್ಲೇ ಶಿಬಿರ ಹೂಡಿ ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಮಸ್ಥರು ಅನಾವಶ್ಯಕವಾಗಿ ಹೊರಗೆ ಸಂಚರಿಸಬಾರದು, ರಾತ್ರಿ ವೇಳೆ ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ