Headlines

ಕರ್ನಾಟಕದಲ್ಲಿ ರೋಲ್ಸ್ ರಾಯ್ ಮತ್ತಷ್ಟು ಬಂಡವಾಳ ಹೂಡಿಕೆ; ಕೈಗಾರಿಕಾ ಸಚಿವರೊಂದಿಗೆ ಚರ್ಚೆ! | Rolls Royce Considers Investment In Karnataka Defence And Aerospace Projects Sat

ಕರ್ನಾಟಕದಲ್ಲಿ ರೋಲ್ಸ್ ರಾಯ್ ಮತ್ತಷ್ಟು ಬಂಡವಾಳ ಹೂಡಿಕೆ; ಕೈಗಾರಿಕಾ ಸಚಿವರೊಂದಿಗೆ ಚರ್ಚೆ! | Rolls Royce Considers Investment In Karnataka Defence And Aerospace Projects Sat



ರೋಲ್ಸ್‌ ರಾಯ್ಸ್‌ ಕಂಪನಿಯ ಉನ್ನತ ಮಟ್ಟದ ನಿಯೋಗದೊಂದಿಗೆ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಅವರು ರಾಜ್ಯದಲ್ಲಿ ಬಂಡವಾಳ ಹೂಡಿಕೆ, ವಿಸ್ತರಣೆ ಮತ್ತು ತಂತ್ರಜ್ಞಾನ ಸೌಲಭ್ಯ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ. ದೇವನಹಳ್ಳಿಯಲ್ಲಿ ಭೂಸ್ವಾಧೀನ ಕೈಬಿಟ್ಟ ಮರುದಿನವೇ ಈ ಮಾತುಕತೆ ನಡೆದಿದೆ.

ಬೆಂಗಳೂರು (ಜು.16): ಜಾಗತಿಕ ಮಟ್ಟದ ಅಗ್ರಗಣ್ಯ ಕಂಪನಿಗಳಲ್ಲಿ ಒಂದಾಗಿರುವ ಮತ್ತು ರಕ್ಷಣೆ ಹಾಗೂ ವೈಮಾಂತರಿಕ್ಷ ವಲಯದಲ್ಲಿ ಹೆಸರು ಮಾಡಿರುವ ರೋಲ್ಸ್‌ ರಾಯ್ಸ್‌ ಕಂಪನಿಯು ರಾಜ್ಯದಲ್ಲಿ ಬಂಡವಾಳ ಹೂಡಿಕೆ, ವಿಸ್ತರಣೆ ಹಾಗೂ ಅದರ ಭವಿಷ್ಯದ ಯೋಜನೆಗಳು ಮತ್ತು ತಂತ್ರಜ್ಞಾನ ಸೌಲಭ್ಯ ಕುರಿತು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಅವರು, ಕಂಪನಿಯ ಉನ್ನತ ಮಟ್ಟದ ನಿಯೋಗದ ಜತೆ ಬುಧವಾರ ಇಲ್ಲಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ರೋಲ್ಸ್‌ ರಾಯ್ಸ್‌ ನಿಯೋಗದಲ್ಲಿ ಅದರ ಜಾಗತಿಕ ಮಟ್ಟದ ನಿರ್ದೇಶಕ ಫಿಲ್‌ ಪ್ರೀಸ್ಟ್‌, ಭಾರತದಲ್ಲಿನ ಬಿಝಿನೆಸ್‌ ಸರ್ವೀಸ್‌ ವಿಭಾಗದ ಮುಖ್ಯಸ್ಥ ಟಾಮ್‌ ಕ್ಯಾಂಡ್ರಿಕಾಲ್‌, ಡಿಫೆನ್ಸ್‌ ವಿಭಾಗದ ಭಾರತದ ಮುಖ್ಯಸ್ಥೆ ಗಾಯತ್ರಿ ಶರ್ಮ ಸಚಿವರನ್ನು ಭೇಟಿಯಾಗಿದ್ದರು. ಉದ್ದೇಶಿತ ಹೈಟೆಕ್‌ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್‌ ಸ್ಥಾಪನೆಗೆ ದೇವನಹಳ್ಳಿ ತಾಲೂಕಿನಲ್ಲಿ ಪ್ರಸ್ತಾವಿತ ಭೂಸ್ವಾಧೀನವನ್ನು ಸರಕಾರವು ಕೈಬಿಟ್ಟ ಮರುದಿನವೇ ಈ ಮಾತುಕತೆ ನಡೆದಿರುವುದು ಗಮನಾರ್ಹವಾಗಿದೆ.

ರೋಲ್ಸ್‌ ರಾಯ್ಸ್‌ ಕಂಪನಿ ಜತೆಗಿನ ಮಾತುಕತೆ ಬಳಿಕ ಮಾತನಾಡಿದ ಸಚಿವರು, ʻರಾಜ್ಯದಲ್ಲಿರುವ ಕೈಗಾರಿಕಾ ಬೆಳವಣಿಗೆಯ ಅವಕಾಶಗಳು ಮತ್ತು ಇಲ್ಲಿನ ರಕ್ಷಣಾ ಕಾರ್ಯಪರಿಸರದ ಬಗ್ಗೆ ಮನದಟ್ಟು ಮಾಡಿಕೊಡಲಾಗಿದೆ. ನಮ್ಮಲ್ಲಿರುವ ಆಧುನಿಕ ತಾಂತ್ರಿಕ ಪರಿಸರ, ದೀರ್ಘಕಾಲೀನ ದೂರದೃಷ್ಟಿ ಮತ್ತು ಪ್ರಗತಿಪರವಾಗಿರುವ ಕೈಗಾರಿಕಾ ನೀತಿಗಳನ್ನು ಅವರೂ ಮೆಚ್ಚಿಕೊಂಡಿದ್ದಾರೆ. ಜತೆಗೆ ಸಹಭಾಗಿತ್ವ ಹೆಚ್ಚಿಸಿಕೊಳ್ಳಲು ಕಂಪನಿಯ ಅಧಿಕಾರಿಗಳು ಒಲವು ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಕಂಪನಿಯ ಬೆಂಗಳೂರು ಘಟಕದ ವಿಸ್ತರಣೆ ಕೂಡ ನಡೆಯುತ್ತಿದ್ದು ಆ ಬಗ್ಗೆ ಚರ್ಚಿಸಲಾಯಿತು. ಸಂಸ್ಥೆಗೆ ಭೇಟಿ ನೀಡುವಂತೆ ಅವರು ಆಹ್ವಾನ ನೀಡಿದ್ದಾರೆʼ ಎಂದಿದ್ದಾರೆ.

ದೇವನಹಳ್ಳಿಯಲ್ಲಿ ರೈತರ ಕೃಷಿ ಚಟುವಟಿಕೆಗಳನ್ನು ಪರಿಗಣಿಸಿ ಭೂಸ್ವಾಧೀನ ಕೈಬಿಡಲಾಗಿದೆ. ಆದರೆ, ರಾಜ್ಯದ ಎಲ್ಲ ಕಡೆಗಳಲ್ಲೂ ಕೈಗಾರಿಕೆಗಳಿಗೆ ಭೂಮಿ ಇದೆ. ಈ ಬಗ್ಗೆ ಹೂಡಿಕೆದಾರರು ಆತಂಕಕ್ಕೆ ಒಳಗಾಗಬೇಕಿಲ್ಲ. ಅವರು ಕೇಳಿದ ಕಡೆಗಳಲ್ಲಿ ಅವರಿಗೆ ಅಗತ್ಯವಿರುವಷ್ಟು ಭೂಮಿ ಕೊಡಲಾಗುವುದು. ರಾಜ್ಯದ ಕೈಗಾರಿಕಾ ಬೆಳವಣಿಗೆಯು ಅಬಾಧಿತವಾಗಿ ಮುಂದುವರಿಯಲಿದೆ. ನಾವೀಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ರಾಜ್ಯವಾಗಿದ್ದು, ಅದಕ್ಕೆ ತಕ್ಕಂತೆ ನಮ್ಮ ಉಪಕ್ರಮಗಳು ಇರಲಿವೆ ಎಂದು ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಆಯುಕ್ತೆ ಗುಂಜನ್‌ ಕೃಷ್ಣ ಉಪಸ್ಥಿತರಿದ್ದರು.



Source link

Leave a Reply

Your email address will not be published. Required fields are marked *