
ಸಿಎಂ ಸಿದ್ದರಾಮಯ್ಯ ನೇತೃತ್ವದ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಸಭೆಯಲ್ಲಿ ರಾಹುಲ್ ಗಾಂಧಿಗೆ ‘ನ್ಯಾಯ ಯೋಧ’ ಬಿರುದು ನೀಡಿ, ರಾಷ್ಟ್ರೀಯ ಜಾತಿ ಗಣತಿ ಮತ್ತು ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಲಾಗಿದೆ. ಜುಲೈ 25 ರಂದು ದೆಹಲಿಯಲ್ಲಿ ಕಾಂಗ್ರೆಸ್ ಒಬಿಸಿ ನಾಯಕತ್ವ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ.
ಬೆಂಗಳೂರು (ಜು.16): ರಾಜಧಾನಿಯಲ್ಲಿ ಸಿಎಂ ಸಿದ್ಧರಾಮಯ್ಯ ಭಾಗವಮಹಿಸಿದ್ದ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಸಭೆಯಲ್ಲಿ, ರಾಹುಲ್ ಗಾಂಧಿಗೆ ‘ನ್ಯಾಯ ಯೋಧ’ ಎಂಬ ಬಿರುದು ನೀಡಲಾಗಿದೆ. ಅದರೊಂದಿಗೆ ರಾಷ್ಟ್ರೀಯ ಜಾತಿ ಗಣತಿ ನಡೆಸಲು ಹಾಗೂ ಮೀಸಲಾತಿಯನ್ನು ಶೇ. 75ಕ್ಕೆ ಏರಿಸಲು ಒತ್ತಾಯಿಸುವ ನಿರ್ಣಯವನ್ನೂ ಕೈಗೊಳ್ಳಲಾಗಿದೆ. ಅದರೊಂದಿಗೆ ಜುಲೈ 25 ರಂದು ದೆಹಲಿಯಲ್ಲಿ ಕಾಂಗ್ರೆಸ್‌ನ ಒಬಿಸಿ ನಾಯಕತ್ವದ ಸಮ್ಮೇಳವನ್ನು ಯಶಸ್ವಿಯಾಗಿ ನಡೆಸಲು ತೀರ್ಮಾಣ ತೆಗೆದುಕೊಳ್ಳಲಾಗಿದೆ.
ಬೆಂಗಳೂರು ಘೋಷಣೆ ಎನ್ನುವ ಹೆಸರಿನಲ್ಲಿ ಸಿಎಂ ಸಿದ್ಧರಾಮಯ್ಯ ಮೂರು ಮಹತ್ವದ ನಿರ್ಣಯಗಳನ್ನು ಪ್ರಕಟ ಮಾಡಿದರು. ರಾಜ್ಯದಲ್ಲಿ ಮಂಗಳವಾರ ಹಾಗೂ ಬುಧವಾರ ಸಲಹಾ ಸಮಿತಿಯ ಸಭೆಯ ನಡೆದಿದ್ದು ಭವಿಷ್ಯದ ಕಾರ್ಯಸೂಚಿಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು.
ತೆಗೆದುಕೊಂಡಿರುವ ನಿರ್ಣಯ
- ಜು.25 ರಂದು ದೆಹಲುಯಲ್ಲಿ ಕಾಂಗ್ರೆಸ್ ಒಬಿಸಿ ನಾಯಕತ್ವ ಭಾಗೀಧಾರಿ ಸಮ್ಮೇಳನ ಯಶಸ್ವಿಯಾಗಿ ಮಾಡಲು ನಿರ್ಣಯ. ಇದನ್ನು ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಲಿದ್ದಾರೆ.
- ಭಾರತೀಯ ಗಣತಿ ಆಯೋಗದ ಮೂಲಕ ರಾಷ್ಟ್ರೀಯ ಮಟ್ಟದ ಜಾತಿ ಗಣತಿ ಮಾಡಬೇಕು. ಈ ಜಾತಿ ಗಣತಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ, ರಾಜಕೀಯ ವಿಚಾರಗಳನ್ನು ಪರಿಗಣಿಸಬೇಕು. ತೆಲಂಗಾಣ ರಾಜ್ಯದ ಜಾತಿ ಗಣತಿಯನ್ನು ಮಾದರಿಯಾಗಿ ಪರಿಗಣಿಸಬೇಕು.
- ಶೇ. 50ರಷ್ಟು ಮೀಸಲಾತಿ ಮಿತಿಯನ್ನು ತೆಗೆದು ಹಾಕಿ ಶೇ. 75 ಮೀಸಲಾತಿ ಕಲ್ಪಿಸಬೇಕು. ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲೂ ಮೀಸಲಾತಿ ಕಲ್ಪಿಸಲು ಆಗ್ರಹಿಸುವ ಬಗ್ಗೆ ನಿರ್ಣಯ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ‘ಸಮಾಜದ ನಿರ್ಲಕ್ಷಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ತೋರಿರುವ ಧೈರ್ಯ ಹಾಗೂ ವಿಶೇಷವಾಗಿ ಹಿಂದುಳಿದ ವರ್ಗಗಳ ಬಗ್ಗೆ ತೋರಿರುವ ಕಾಳಜಿಗೆ ಎಐಸಿಸಿ ಒಬಿಸಿ ವಿಭಾಗದ ಸಲಹಾ ಸಮಿತಿಯು, ನ್ಯಾಯ ಯೋಧರಾದ ರಾಹುಲ್ ಗಾಂಧಿಯವರಿಗೆ ಧನ್ಯವಾದಗಳನ್ನು ಅರ್ಪಿಸುತ್ತದೆ. ರಾಹುಲ್ ಗಾಂಧಿಯವರ ದೃಢ ನಿಶ್ಚಯದಿಂದಾಗಿ ಮನುವಾದಿ ಮೋದಿ ಸರ್ಕಾರವನ್ನು ನ್ಯಾಯಯುತ ಮತ್ತು ಸಾಂವಿಧಾನಿಕ ಬೇಡಿಕೆಯಾಗಿದ್ದ ಜಾತಿ ಗಣತಿಯನ್ನು ಭಾರತದಲ್ಲಿ ಕೈಗೊಳ್ಳುವಂತೆ ಮಾಡಿತು. ಈ ಐತಿಹಾಸಿಕ ಸಾಧನೆಗಾಗಿ ಭಾರತದ ಎಲ್ಲಾ ಹಿಂದುಳಿದ ವರ್ಗಗಳ ಪರವಾಗಿ ಸಮಿತಿಯು ಹೃತ್ಪೂರ್ವಕವಾಗಿ ರಾಹುಲ್ ಗಾಂಧಿಯವರನ್ನು ಶ್ಲಾಘಿಸುತ್ತದೆ.
ಇದೊಂದು ಮೈಲಿಗಲ್ಲಾದರೂ, ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಇದೊಂದು ಸಣ್ಣ ಹೆಜ್ಜೆ. ನ್ಯಾಯ ಯೋಧ ರಾಹುಲ್ ಗಾಂಧಿಯವರ ಅಚಲ ನಾಯಕತ್ವದಡಿಯಲ್ಲಿ, ಭಾರತವು ಅತ್ಯುನ್ನತ ಸಾಂವಿಧಾನಿಕ ಉದ್ದೇಶವಾದ ಸಾಮಾಜಿಕ ಪರಿವರ್ತನೆಯನ್ನು ಸಾಕಾರಗೊಳಿಸಲಿದೆ. ತನ್ಮೂಲಕ ನಮ್ಮ ಮಹಾನ್ ದೇಶದಲ್ಲಿ ಸಮಸಮಾಜವನ್ನು ನಿರ್ಮಿಸಲು ಇದರಿಂದ ಸಾಧ್ಯವಾಗಲಿದೆ.
ನ್ಯಾಯ ಯೋಧರಾದ ರಾಹುಲ್ ಗಾಂಧಿಜಿಯವರ ಧೀರ ಮತ್ತು ನಿರ್ಭಯ ನಾಯಕತ್ವದಡಿಯಲ್ಲಿ ಕಾಂಗ್ರೆಸ್ ಪಕ್ಷದ ಧ್ವಜವನ್ನು ಹಿಡಿದು ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಿಸಲು ನಿರ್ಧರಿಸಿ, ಹೋರಾಡಲು ನಾವೆಲ್ಲರೂ ಪ್ರಮಾಣ ಮಾಡುತ್ತೇವೆ ಎಂದು ಬರೆದಿದ್ದಾರೆ.