
ಜರ್ಮನ್ ಯೂಟ್ಯೂಬರ್ ಲಿಜ್ ಅವರು ಬೆಂಗಳೂರಿನ ಟ್ರಾಫಿಕ್ ಬಗ್ಗೆ ಮಾಡಿದ ವ್ಯಂಗ್ಯಾತ್ಮಕ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ ಊಟ-ತಿಂಡಿ, ಲ್ಯಾಪ್‌ಟಾಪ್ ಇಟ್ಟುಕೊಂಡು ಕೆಲಸ ಮುಗಿಸಿಕೊಳ್ಳಿ ಎಂಬ ಆಕೆಯ ಸಲಹೆ ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ.
ಸಿಲಿಕಾನ್ ಸಿಟಿ ಬೆಂಗಳೂರು ಪದೇ ಪದೇ ಟ್ರಾಫಿಕ್ ವಿಚಾರಕ್ಕೆ ಸುದ್ದಿಯಲ್ಲಿರುವ ನಗರ. ಇದೀಗ ಮತ್ತೆ ಸಂಚಾರ ದಟ್ಟಣೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ. ಈ ಬಾರಿ ಚರ್ಚೆಗೆ ಕಾರಣವಾಗಿರುವುದು ಜರ್ಮನ್ ಮೂಲದ ಯೂಟ್ಯೂಬರ್ ಆಗಿರುವ ಲಿಜ್ ಅವರ ಹಾಸ್ಯಮಯ ಆದರೆ ವ್ಯಂಗ್ಯಭರಿತ ಪೋಸ್ಟ್.
ಕ್ಯಾಬ್‌ನಲ್ಲಿ ಪ್ರಯಾಣ ಮಾಡುವವರಿಗೆ ಸಲಹೆ
ಲಿಜ್ ಅವರು ಬೆಂಗಳೂರಿನಲ್ಲಿ ಕ್ಯಾಬ್‌ನಲ್ಲಿ ಪ್ರಯಾಣಿಸುವ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ನಗರದ ಟ್ರಾಫಿಕ್ ಸ್ಥಿತಿಯನ್ನು ಲೇವಡಿ ಶೈಲಿಯಲ್ಲಿ ವಿವರಿಸಿದ್ದಾರೆ. “ಬೆಂಗಳೂರಿನಲ್ಲಿ ಕ್ಯಾಬ್‌ನಲ್ಲಿ ಪ್ರಯಾಣ ಮಾಡುವವರು ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಂಡಿರಬೇಕು” ಎಂದು ಹೇಳಿದ್ದು, ಊಟ–ತಿಂಡಿ ಜೊತೆ ಇಟ್ಟುಕೊಳ್ಳಿ, ಲ್ಯಾಪ್‌ಟಾಪ್ ತೆಗೆದುಕೊಂಡು ಕೆಲಸ ಶುರುಮಾಡಿ, ನಿಮ್ಮ ದಿನದ ಅರ್ಧ ಕೆಲಸವನ್ನು ಟ್ರಾಫಿಕ್‌ನಲ್ಲೇ ಮುಗಿಸಬೇಕಾಗುತ್ತದೆ. ನಾನು ಅದನ್ನೇ ಮಾಡುತ್ತಿದ್ದೇನೆ. ಕರೆಯನ್ನೆಲ್ಲ ಕ್ಯಾಬ್ ನಲ್ಲೇ ರಿಸೀವ್ ಮಾಡಿದೆ ಎಂದು ವ್ಯಂಗ್ಯವಾಗಿ ಉಲ್ಲೇಖಿಸಿದ್ದಾರೆ. ಈ ಮಾತುಗಳು ಹಾಸ್ಯಮಯವಾಗಿದ್ದರೂ, ಬೆಂಗಳೂರಿನ ದೈನಂದಿನ ಸಂಚಾರ ಸಂಕಷ್ಟವನ್ನು ಸ್ಪಷ್ಟವಾಗಿ ಹೇಳಿದಂತಿದೆ.
ಲಿಜ್ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಇದು ಬೆಂಗಳೂರಿನ ನಿಜವಾದ ಸ್ಥಿತಿ, ಅವರು ಹೇಳಿದ್ದು ತಪ್ಪೇನಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ವಿಶೇಷವಾಗಿ ಐಟಿ ಉದ್ಯೋಗಿಗಳು ಮತ್ತು ದಿನನಿತ್ಯ ದೂರದ ಪ್ರಯಾಣ ಮಾಡುವವರು, ತಮ್ಮ ಅನುಭವಗಳೊಂದಿಗೆ ಲಿಜ್ ಅವರ ಮಾತಿಗೆ ಒಪ್ಪಿಗೆ ಸೂಚಿಸಿದ್ದಾರೆ.
ಪರ ವಿರೋಧ ಚರ್ಚೆ
ಇನ್ನೊಂದು ಕಡೆ, ಕೆಲವರು ಈ ಪೋಸ್ಟ್‌ನ್ನು ನಗರದ ಮೇಲೆ ಅನಾವಶ್ಯಕ ಟೀಕೆ ಎಂದು ಕಿಡಿಕಾರಿದ್ದಾರೆ. ಟ್ರಾಫಿಕ್ ಸಮಸ್ಯೆ ಅನೇಕ ಮಹಾನಗರಗಳಲ್ಲಿ ಇದೆ. ಬೆಂಗಳೂರನ್ನು ಮಾತ್ರ ಗುರಿಯಾಗಿಸಿಕೊಂಡು ಲೇವಡಿ ಮಾಡುವುದು ಸರಿಯಲ್ಲ ಎಂದು ಕೆಲ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಬೆಂಗಳೂರಿನ ಆತಿಥ್ಯ, ಉದ್ಯೋಗಾವಕಾಶ ಮತ್ತು ಸಂಸ್ಕೃತಿಯ ಬಗ್ಗೆ ಮಾತನಾಡದೆ ಕೇವಲ ಟ್ರಾಫಿಕ್‌ನ್ನೇ ಎತ್ತಿ ತೋರಿಸಲಾಗುತ್ತಿದೆ ಎಂಬ ಅಭಿಪ್ರಾಯಗಳೂ ಕೇಳಿಬಂದಿವೆ.
ಒಟ್ಟಾರೆ, ಲಿಜ್ ಅವರ ಈ ಪೋಸ್ಟ್ ಹಾಸ್ಯ ಮತ್ತು ವ್ಯಂಗ್ಯದ ಮೂಲಕ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಮತ್ತೊಮ್ಮೆ ಸಾರ್ವಜನಿಕ ಚರ್ಚೆಗೆ ತಂದಿದೆ. ಲೇವಡಿಯೆಂದು ತೆಗೆದುಕೊಳ್ಳಬೇಕೋ ಅಥವಾ ನಗರ ಆಡಳಿತ ಮತ್ತು ಮೂಲಸೌಕರ್ಯ ಸಮಸ್ಯೆಗಳ ಕುರಿತು ಗಂಭೀರ ಚಿಂತನೆ ಮಾಡಬೇಕೋ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ . ಯಾವುದೇ ಆಗಲಿ, ಬೆಂಗಳೂರಿನ ಸಂಚಾರ ದಟ್ಟಣೆ ಇನ್ನೂ ಬಹಳ ಜನರಿಗೆ ದಿನನಿತ್ಯದ ದೊಡ್ಡ ಸವಾಲಾಗಿಯೇ ಉಳಿದಿದೆ ಎಂಬುದರಲ್ಲಿ ಸಂದೇಹವಿಲ್ಲ.