ತನ್ನ ನಾಯಕನ ಹತ್ಯೆಯ ನಂತರ ಇರಾನ್, ಸೌದಿ ಅರೇಬಿಯಾದ ರಾಸ್ ತನುರಾ ತೈಲ ಘಟಕ ಸೇರಿದಂತೆ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿದೆ. ಈ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿ ಬಂದ್ ಆಗಿದ್ದು, ಕಚ್ಚಾ ತೈಲದ ಬೆಲೆ ಗಗನಕ್ಕೇರಿದೆ ಇದರಿಂದ ಜಾಗತಿಕವಾಗಿ ಆರ್ಥಿಕ ಸಂಕಷ್ಟದ ಭೀತಿ ಎದುರಾಗಿದೆ.

ತನ್ನ ನಾಯಕನ ಸಾವಿನಿಂದ ಧೃತಿಗೆಟ್ಟಿರುವ ಇರಾನ್ ಸಿಕ್ಕ ಸಿಕ್ಕ ದೇಶಗಳ ಮೇಲೆ ದಾಳಿ ಮಾಡುತ್ತಿದೆ. ಇಸ್ರೇಲ್ ಹಾಗೂ ಅಮೆರಿಕಾ ಜಂಟಿ ದಾಳಿಯಲ್ಲಿ ತನ್ನ ನಾಯಕ ಅಯತೊಲ್ಲಾ ಖಮೇನಿ ಹತ್ಯೆಯಾದ ನಂತರ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ಶುರು ಮಾಡಿರುವ ಇರಾನ್ ಈಗಾಗಲೇ ಗಲ್ಫ್ ದೇಶಗಳ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿದ್ದು, ಇರಾನ್ ಕ್ಷಿಪಣಿ ಹಾಗೂ ಡ್ರೋನ್ ದಾಳಿಯಿಂದಾಗಿ ದುಬೈ, ದೋಹಾ ಕುವೈತ್, ಬಹ್ರೈನ್ ಸೇರಿದಂತೆ ಹಲವು ಕಡೆಗಳಲ್ಲಿ ಸಾವು ನೋವು ಸಂಭವಿಸಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.

ಕೆಲ ಸಮಯದ ಹಿಂದೆ ಅಬುಧಾಬಿಯ ನೌಕಾನೆಲೆ ಮೇಲೆ ದಾಳಿ ನಡೆಸಿದ್ದ ಇರಾನ್ ಈಗ ಸೌದಿ ಅರೇಬಿಯಾದ ತೈಲ ಸಂಸ್ಕರಣಾ ಘಟಕದ ಮೇಲೆ ದಾಳಿ ನಡೆಸಿದೆ. ಇರಾನಿನ ಡ್ರೋನ್‌ಗಳು ಸೌದಿ ಅರೇಬಿಯಾದ ತೈಲ ಸಂಸ್ಕರಣಾ ಘಟಕ ರಾಸ್ ತನುರಾ ಮೇಲೆ ದಾಳಿ ಮಾಡಿದ ನಂತರ ಸೌದಿ ಅರೇಬಿಯಾದ ತೈಲ ಕಂಪೆನಿ ಸೌದಿ ಅರಾಮ್ಕೊ ತನ್ನ ರಾಸ್ ತನುರಾ ಸಂಸ್ಕರಣಾಗಾರವನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಸೌದಿ ಅರೇಬಿಯಾದ ಪ್ರಮುಖ ಸಂಸ್ಕರಣಾ ಕೇಂದ್ರಗಳಲ್ಲಿ ಒಂದಾದ ರಾಸ್ ತನುರಾ ಮೇಲಿನ ಈ ದಾಳಿಯಿಂದಾಗಿ ಈ ಪ್ರದೇಶದ ಇಂಧನ ಮೂಲಸೌಕರ್ಯದಲ್ಲಿ ವ್ಯಾಪಕ ಅಡ್ಡಿ ಉಂಟಾಗುವ ಭೀತಿ ಎದುರಾಗಿದೆ.

ಸೌದಿ ಅರೇಬಿಯಾದ ಅರಾಮ್ಕೊ ತೈಲ ಸಂಸ್ಕರಣಾಗಾರಕ್ಕೆ ಇರಾನ್‌ನ ಡ್ರೋನ್‌ಗಳು ದಾಳಿ ಮಾಡಿದ್ದು, .ಸೌದಿ ಅರೇಬಿಯಾದ ಪ್ರಮುಖ ಸಂಸ್ಕರಣಾ ಕೇಂದ್ರಗಳಲ್ಲಿ ಒಂದಾದ ರಾಸ್ ತನುರಾ ಮೇಲಿನ ದಾಳಿಯು, ಈ ಪ್ರದೇಶದ ಇಂಧನ ಮೂಲಸೌಕರ್ಯದಲ್ಲಿ ವ್ಯಾಪಕ ಅಡ್ಡಿ ಉಂಟಾಗುವ ಭೀತಿಯನ್ನು ಹೆಚ್ಚಿಸಿದೆ. ದಾಳಿಯ ಕುರಿತು ಅರಾಮ್ಕೊ ಮಾಧ್ಯಮ ಕಚೇರಿ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಸೌದಿ ಅರಾಮ್ಕೊದ ರಾಸ್ ತನುರಾವನ್ನು ಗುರಿಯಾಗಿಸಿಕೊಂಡು ಹಾರಿಸಲಾದ ಎರಡು ಡ್ರೋನ್‌ಗಳನ್ನು ತಡೆಹಿಡಿಯಲಾಗಿದೆ ಎಂದು ಸೌದಿಯ ರಕ್ಷಣಾ ಸಚಿವಾಲಯದ ವಕ್ತಾರರು, ಅಲ್ ಅರೇಬಿಯಾ ಟಿವಿಗೆ ತಿಳಿಸಿದ್ದಾರೆ.

ಇರಾನ್ ಮೇಲೆ ಇಸ್ರೇಲ್ ಅಮೆರಿಕಾ ನಡುವಣ ಯುದ್ಧದಿಂದಾಗಿ ಜಾಗತಿಕ ತೈಲ ಮಾರುಕಟ್ಟೆೆಯಲ್ಲಿ ತೀವ್ರ ಒತ್ತಡ ಏರ್ಪಟ್ಟಿರುವ ಸಮಯದಲ್ಲಿ ಇರಾನ್ ಈ ದಾಳಿ ನಡೆಸಿದೆ. ಇರಾನ್ ಸಂಘರ್ಷ ಹೆಚ್ಚುತ್ತಿರುವ ಕಾರಣ ಕಚ್ಚಾ ತೈಲ ಬೆಲೆಗಳು ನಾಲ್ಕು ವರ್ಷಗಳಲ್ಲೇ ಅತ್ಯಂತ ಹೆಚ್ಚಿನ ಏರಿಕೆ ಕಂಡಿವೆ. ಇತ್ತ ಇರಾನ್‌ನ ಹಾರ್ಮುಜ್ ಜಲಸಂಧಿಯು ವಿಶ್ವದ ದೈನಂದಿನ ತೈಲ ಹರಿವಿನ ಸುಮಾರು ಶೇಕಡಾ 20ರಷ್ಟು ತೈಲವನ್ನು ನಿರ್ವಹಿಸುವ ಕಿರಿದಾದ ಮಾರ್ಗವಾಗಿದೆ

ಇರಾನ್ ಈ ಇಸ್ರೇಲ್ ಅಮೆರಿಕಾದ ದಾಳಿಯ ಬಳಿಕ ಹಾರ್ಮುಜ್ ಜಲಸಂಧಿಯನ್ನು ಕೂಡ ಮುಚ್ಚಿರುವ ಹಿನ್ನೆಲೆ ಇದು ತೈಲ ಸಾಗಣೆಯನ್ನು ಪರಿಣಾಮಕಾರಿಯಾಗಿ ಸ್ಥಗಿತಗೊಳಿಸಿದೆ. ಹಲವಾರು ಹಡಗು ಮಾಲೀಕರು ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ಇಲ್ಲಿ ಸಾಗಣೆಯನ್ನು ಸ್ಥಗಿತಗೊಳಿಸಿದ್ದಾರೆ, ಇದು ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ಕಾರಿಡಾರ್‌ಗಳಲ್ಲಿ ಒಂದಾಗಿದೆ.

ಈ ಯುದ್ಧದಿಂದಾಗಿ ಇಂಧನ ಮಾರುಕಟ್ಟೆಗಳು ಈಗ ದೀರ್ಘಕಾಲದ ಅಸ್ಥಿರತೆಗೆ ಸಿದ್ಧವಾಗುತ್ತಿವೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿ ಪರಿಣಾಮಕಾರಿಯಾಗಿ ಸ್ಥಗಿತಗೊಂಡಿರುವುದರಿಂದ ಜಾಗತಿಕ ಬೇಡಿಕೆ ಹೆಚ್ಚಾದಂತೆ ಪೂರೈಕೆ ಕಡಿಮೆಯಾಗಲಿದೆ. ಇದು ವಿಶ್ವಾದ್ಯಂತ ಹೊಸ ಹಣದುಬ್ಬರದ ಒತ್ತಡಗಳಿಗೆ ವೇದಿಕೆ ಸಿದ್ಧಪಡಿಸುತ್ತಿದೆ. ವ್ಯಾಪಾರಿಗಳು ಗಲ್ಫ್‌ನಲ್ಲಿ ಹೊಸ ಪೂರೈಕೆಯ ಅಪಾಯಗಳನ್ನು ಎದುರಿಸುತ್ತಿರುವುದರಿಂದ ಆರಂಭಿಕ ವ್ಯಾಪಾರದಲ್ಲಿ ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ 80 ಡಾಲರ್ (7,323 ರೂ.) ಏರಿಕೆಯಾಗಿದೆ.

Source link
ಸೌದಿ ಅರೇಬಿಯಾದ ತೈಲ ಸಂಸ್ಕರಣ ಘಟಕದ ಮೇಲೆ ಇರಾನ್ ಡ್ರೋನ್ ದಾಳಿ: ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ 80 ಡಾಲರ್‌ಗೆ ಏರಿಕೆ