ಕೆಂಪೇಗೌಡ ವಿಮಾನ ನಿಲ್ದಾಣ, ಶಾಸಕ ಎಸಿ ಶ್ರೀನಿವಾಸ್ಚಿತ್ರ ಕ್ರೆಡಿಟ್ ಮೂಲ: tv9 ಕನ್ನಡ
ದೇವನಹಳ್ಳಿ, ಮಾರ್ಚ್ 02: ಕಳೆದ ಮೂರು ದಿನಗಳಿಂದ ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿ ದಾಳಿ (ಇಸ್ರೇಲ್-ಇರಾನ್ ಸಂಘರ್ಷ) ಮಾಡುತ್ತಿರುವ ಕಾರಣ ವಿಮಾನ ಹಾರಾಟ ರದ್ದಾಗಿದ್ದು ಪ್ರಯಾಣಿಕರು ಪರದಾಡುತ್ತಿದ್ದಾರೆ. ತವರಿಗೆ ವಾಪಸ್ ಆಗದೆ ಪರದಾಡುತ್ತಿರುವ ಬೆನ್ನಲ್ಲೆ ಶಾಸಕ ಮಾತ್ರ ಯುದ್ಧ ಭೂಮಿಯಿಂದ ಗ್ರೇಟ್ ಎಸ್ಕೇಪ್ ಆಗಿ ಬಂದಿದ್ದಾರೆ. ಆ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಇನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 24 ವಿಮಾನಗಳು ಹಾರಾಟ ರದ್ದಾಗಿವೆ.
ಯುದ್ಧ ಹಿನ್ನೆಲೆ ಕ್ಷಣಕ್ಷಣಕ್ಕೂ ಆತಂಕ ಹೆಚ್ಚುತ್ತಿದೆ. ದುಬೈ ಏರ್‌ಪೋರ್ಟ್‌ನಲ್ಲೆ ಮೂರು ದಿನಗಳಿಂದ ಕನ್ನಡಿಗರು ವಿಮಾನಗಳಿಲ್ಲದೆ ತವರಿಗೆ ಬರಲಾಗದೆ ಪರದಾಡುತ್ತಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಿಂದಲೂ ತವರಿಗೆ ಟಿಕೆಟ್ ಬುಕ್ ಮಾಡಿಕೊಂಡಿದ್ದ ಪ್ರಯಾಣಿಕರು ವಿಮಾನ ಹಾರಾಟವಿಲ್ಲದೆ ಕಂಗಾಲಾಗಿದ್ದಾರೆ. ಇಂದು ಸಹ 24 ವಿಮಾನಗಳು ಹಾರಾಟ ನಡೆಸದೆ ನಿಂತಲ್ಲೇ ನಿಂತಿವೆ.
ಯುದ್ಧ ಭೂಮಿಯಿಂದ ಗ್ರೇಟ್ ಎಸ್ಕೇಪ್
ಜೆಡಿಎಸ್ ಪರಿಷತ್ ಸದಸ್ಯ ಭೋಜೇಗೌಡ, ಡ್ರೋನ್ ಪ್ರತಾಪ್ ಸೇರಿದಂತೆ ನೂರಾರು ಕನ್ನಡಿಗರು ತವರಿಗೆ ಬರಲಾಗದೆ ದುಬೈನಲ್ಲಿ ಸಿಲುಕಿ ಪರದಾಡುತ್ತಿರುವ ಬೆನ್ನಲ್ಲೇ ಆರು ದಿನದ ಹಿಂದೆ ದುಬೈಗೆ ತೆರಳಿದ್ದ ಪುಲಕೇಶಿ ನಗರ ಶಾಸಕ ಎಸ್‌ಸಿ ಶ್ರೀನಿವಾಸ್, ಮಸ್ಕತ್ ಮೂಲಕ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಮೊದಲೇ ಗೋಲ್ಡನ್ ವೀಸಾ ಎಂದು ದುಬೈಗೆ ತೆರಳಿದ್ದ ಕಾರಣ ಯದ್ಧ ಭೂಮಿಯಿಂದ ಹರಸಾಹಸ ಪಟ್ಟು 6 ಗಂಟೆಗಳ ಕಾಲ ರಸ್ತೆ ಪ್ರಯಾಣ ಮಾಡಿ ಮಸ್ಕಟ್ ಸೇರಿದ್ದಾರೆ. ಜೊತೆಗೆ ಮಸ್ಕಟ್ ನಿಂದ ವಿಮಾನದಲ್ಲಿ ಇಂದು ಬೆಳಗ್ಗೆ 09 ಗಂಟೆ ಬೆಂಗಳೂರು ತಲುಪುವ ಮೂಲಕ ನಿಟ್ಟುಸಿರುವ ಬಿಟ್ಟಿದ್ದು, ಸುರಕ್ಷಿತವಾಗಿ ಮನೆ ಸೇರಿದ್ದಾರೆ.
24 ವಿಮಾನಗಳು ರದ್ದು
ಕೆಐಎಬಿಯಿಂದ ದುಬೈ ಸೇರಿದಂತೆ ಹೊರದೇಶಗಳಿಗೆ ತೆರಳಲು ಆಗಮಿಸಿರುವ ಪ್ರಯಾಣಿಕರು ಸದ್ಯ ಪರದಾಡುತ್ತಿದ್ದಾರೆ. ಯುದ್ಧ ಹಿನ್ನೆಲೆ ಇಂದು ಸಹ ಇರಾನ್ ನಲ್ಲಿ ವಾಯುನೆಲೆ ಓಪನ್ ಆಗಿಲ್ಲ. ಹೀಗಾಗಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ದುಬೈ, ದೋಹಾ, ಅಬುಧಾಬಿ, ಜಿದ್ದಾ, ಬಹ್ರೇನ್ ಸೇರಿದಂತೆ ಹಲವೆಡೆ ತೆರಳಬೇಕಿದ್ದ 24 ವಿಮಾನಗಳು ರದ್ದಾಗಿವೆ.
ಇದನ್ನೂ ಓದಿ: ಇಸ್ರೇಲ್-ಇರಾನ್ ಮಧ್ಯೆ ಯುದ್ಧ: ದುಬೈ ವಿಮಾನ ನಿಲ್ದಾಣದಲ್ಲಿ ಕುಟುಂಬ ಸಮೇತ ಸಿಲುಕಿದ ಭೋಜೇಗೌಡ
ಕಳೆದ ಎರಡು ದಿನಗಳಿಂದ ವಿಮಾನ ರದ್ದಾಗಿದ್ದ ಕಾರಣ ಇಂದು ಹಾರಾಟ ಮಾಡಬಹುದು ಅಂತ ಬಂದಿದ್ದ ಪ್ರಯಾಣಿಕರು ಸಹ ರದ್ಧಾಗಿನಿಂದ ವಾಪಸ್ ಆಗಿದ್ದಾರೆ. ಏರ್‌ಪೋರ್ಟ್‌ನ ಟರ್ಮಿನಲ್ 2 ಗಂಟೆಗಟ್ಟಲೆ ಕಾದು ಸುಸ್ತಾದ ಪ್ರಯಾಣಿಕರು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕೌಂಟರ್‌ನಲ್ಲಿ ತಮ್ಮ ಟಿಕೆಟ್ ಮರು ಬುಕ್ಕಿಂಗ್ ಮತ್ತು ರದ್ದು ಮಾಡುವ ಬಗ್ಗೆ ಮಾಹಿತಿ ಪಡೆದು ಮನೆಗಳಿಗೆ ವಾಪಸ್ ಆದರು.
ಇದನ್ನೂ ಓದಿ: ಬೆಂಗಳೂರಿನಿಂದ ವಿದೇಶಕ್ಕೆ ಹೋಗುವ, ಬರುವ ಒಟ್ಟು 24 ವಿಮಾನಗಳು ರದ್ದು: ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ
ಒಟ್ಟಾರೆ ಮೂರನೇ ದಿನ ಕೂಡ ದುಬೈನಿಂದ ಯಾವುದೇ ವಿಮಾನಗಳು ಟೇಕ್ ಆಫ್ ಆಗದಿರುವುದು, ಪ್ರಯಾಣಿಕರು ತವರು ಸೇರುವ ತವಕದಲ್ಲಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.