ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿದ್ದ ನಟಿ ಸಂದೀಪಾ ವಿರ್ಕ್, ಅಲ್ಲಿನ ಕಠೋರ ಜೀವನ, ಅನೈರ್ಮಲ್ಯ ಮತ್ತು ಭ್ರಷ್ಟಾಚಾರದ ಬಗ್ಗೆ ತಮ್ಮ ನೋವಿನ ಅನುಭವವನ್ನು ಹಂಚಿಕೊಂಡಿದ್ದಾರೆ. ಜೈಲಿನಲ್ಲಿದ್ದಾಗ ಸಾವನ್ನೇ ಬಯಸಿದ್ದೆ ಎಂದು ಹೇಳಿದ್ದಾರೆ.
ನವದೆಹಲಿ (ಮಾ.2): ಹಣ ಅಕ್ರಮ ವರ್ಗಾವಣೆ (PMLA) ಪ್ರಕರಣದಲ್ಲಿ ಸಿಲುಕಿ ಸುಮಾರು ನಾಲ್ಕು ತಿಂಗಳುಗಳ ಕಾಲ ತಿಹಾರ್ ಜೈಲಿನಲ್ಲಿದ್ದ ನಟಿ ಸಂದೀಪಾ ವಿರ್ಕ್, ಅಲ್ಲಿನ ಕಠೋರ ಜೀವನದ ಬಗ್ಗೆ ಸಿಮ್ರಾನ್ ಜೋತ್ ಮಕ್ಕರ್ ಅವರೊಂದಿಗೆ ನಡೆಸಿದ ಸಂದರ್ಶನದಲ್ಲಿ ಆಘಾತಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ನಟಿ ಸಂದೀಪಾ ವಿರ್ಕ್ 2023ರಲ್ಲಿ ಸಿವಿ ಅಶೋಕ್ ಕುಮಾರ್ ನಟಿಸಿ ನಿರ್ದೇಶನ ಮಾಡಿದ್ದ ಅಂಬಾಸಿಡರ್ ಎನ್ನುವ ಕನ್ನಡ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು.ಈ ಸಿನಿಮಾಕ್ಕೆ ಗುರುಕಿರಣ್ ಸಂಗೀತ ನೀಡಿದ್ದರು. ಆದರೆ, ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸದ್ದು ಮಾಡದ ಕಾರಣ ಸಂದೀಪಾ ವಿರ್ಕ್ ಕನ್ನಡದಲ್ಲಿ ನಂತರ ಅವಕಾಶ ಸಿಕ್ಕಿರಲಿಲ್ಲ.
“ನನ್ನ ಶತ್ರುವಿಗೂ ಇಂತಹ ಸ್ಥಿತಿ ಬೇಡ”
ಜೈಲಿನ ಅನುಭವದ ಬಗ್ಗೆ ಮಾತನಾಡಿರುವ ಸಂದೀಪಾ, “ತಿಹಾರ್ ಅಂತಹ ಜಾಗ ನನ್ನ ಕಡುಶತ್ರುವಿಗೂ ಬೇಡ. ಮೊದಲ ದಿನ ಅಲ್ಲಿಗೆ ಹೋದಾಗ ‘ದೇವರೆ, ನಾನು ಇದಕ್ಕೆ ಅರ್ಹಳಲ್ಲ’ ಎಂದು ಅತ್ತಿದ್ದೆ. ಅಲ್ಲಿನ ಶೌಚಾಲಯಗಳನ್ನು ನೋಡಿದಾಗ, ಹಿಂದಿನ ಜನ್ಮದಲ್ಲಿ ನಾನು ಮಾಡಿದ ಯಾವ ತಪ್ಪಿಗೆ ಈ ಶಿಕ್ಷೆ ಎಂದು ಮನಸ್ಸಿನಲ್ಲೇ ಕೊರಗುತ್ತಿದ್ದೆ” ಎಂದು ನೋವು ತೋಡಿಕೊಂಡಿದ್ದಾರೆ.
ಕುಟುಂಬದವರನ್ನು ನೋಡಿ ಅನುಭವಿಸಿದ ಸಂಕಟ
“ಜೈಲಿನಲ್ಲಿರುವಾಗ ಪ್ರತಿದಿನ ‘ಸಾವೇ ಬಂದು ನನ್ನನ್ನು ಕರೆದೊಯ್ಯಲಿ’ ಎಂದು ಪ್ರಾರ್ಥಿಸುತ್ತಿದ್ದೆ. ಎಲ್ಲಕ್ಕಿಂತ ದೊಡ್ಡ ನೋವೆಂದರೆ, ನನ್ನನ್ನು ನೋಡಲು ನನ್ನ ತಂದೆ-ತಾಯಿ ಜೈಲಿಗೆ ಬರುತ್ತಿದ್ದ ಕ್ಷಣ. ನನ್ನಿಂದಾಗಿ ಅವರು ಜೈಲಿಗೆ ಬರಬೇಕಾಯಿತಲ್ಲಾ ಎಂದು ಅವರಲ್ಲಿ ಕ್ಷಮೆ ಕೇಳುತ್ತಿದ್ದೆ. ಆದರೆ ನನ್ನ ಕುಟುಂಬದವರು ನನ್ನ ಜೊತೆಗಿದ್ದರು, ನಾನು ಯಾರು ಎಂಬುದು ಅವರಿಗೆ ತಿಳಿದಿತ್ತು” ಎಂದು ಭಾವುಕರಾಗಿದ್ದಾರೆ.

ನಟಿ ಹಾಗೂ ಇನ್‌ಫ್ಲುಯೆನ್ಸರ್ ಸಂದೀಪಾ ವಿರ್ಕ್ ನಟಿಸಿದ್ದ ಕನ್ನಡ ಸಿನಿಮಾ ಅಂಬಾಸಿಡರ್ ಪೋಸ್ಟರ್
ಜೈಲಿನ ದುಸ್ಥಿತಿ ಮತ್ತು ಅನಾರೋಗ್ಯ
ತಿಹಾರ್ ಜೈಲಿನ ಸ್ಥಿತಿಯನ್ನು ವಿವರಿಸಿದ ಅವರು, 500 ಜನರ ಜೊತೆ ಒಂದು ಕಡೆ ಇರುವುದು ದೈಹಿಕ ಮತ್ತು ಮಾನಸಿಕವಾಗಿ ಹೈರಾಣಾಗಿಸಿತ್ತು. ತೀವ್ರ ಒತ್ತಡದಿಂದಾಗಿ ನನಗೆ ಸರಿಯಾಗಿ ನಿಲ್ಲಲೂ ಸಾಧ್ಯವಾಗುತ್ತಿರಲಿಲ್ಲ. ಅಲ್ಲಿನ ದಿನಚರಿ ಹೇಗಿತ್ತೆಂದರೆ, ಬೆಳಿಗ್ಗೆ 6 ಗಂಟೆಗೆ ಬ್ಯಾರಕ್ ತೆರೆಯುತ್ತಾರೆ, ಮಧ್ಯಾಹ್ನ 12ಕ್ಕೆ ಮುಚ್ಚುತ್ತಾರೆ. ಮತ್ತೆ 3ಕ್ಕೆ ತೆರೆದು ಸಂಜೆ 6ಕ್ಕೆ ಲಾಕ್ ಮಾಡುತ್ತಾರೆ. ನೆಲದ ಮೇಲೆಯೇ ಮಲಗಬೇಕು. ಪ್ರತಿದಿನ ಅದೇ ದಾಲ್, ಅದೇ ಸಾಂಬಾರ್, ನಾಲ್ಕು ರೊಟ್ಟಿ ಮತ್ತು ಅನ್ನ. ಆ ಆಹಾರವನ್ನು ತಿನ್ನಲೂ ಮನಸ್ಸಾಗುತ್ತಿರಲಿಲ್ಲ. ಶೌಚಾಲಯಗಳಂತೂ ಅತ್ಯಂತ ಗಲೀಜಾಗಿದ್ದವು. ಕೆಲವು ಪೊಲೀಸ್ ಮಹಿಳೆಯರು ದಯೆ ತೋರುತ್ತಿದ್ದರು, ಇನ್ನು ಕೆಲವರು ಕೈದಿಗಳ ಮೇಲೆ ತಮ್ಮ ಸಿಟ್ಟು ತೀರಿಸಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.
ಹಣವಿದ್ದರೆ ಜೈಲಿನಲ್ಲಿ ಕೆಲಸ ಆಗುತ್ತೆ!
ಜೈಲಿನೊಳಗಿನ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಅವರು, “ಜೈಲಿನಲ್ಲಿ ಹಣವಿಲ್ಲದೆ ಏನೂ ನಡೆಯುವುದಿಲ್ಲ. ನಿಮ್ಮ ಬಳಿ ಹಣವಿದ್ದರೆ ನಿಮ್ಮ ಕೆಲಸಗಳು ಸುಲಭವಾಗಿ ಆಗುತ್ತವೆ, ಇಲ್ಲದಿದ್ದರೆ ಸುಮ್ಮನೆ ಕುಳಿತುಕೊಳ್ಳಬೇಕು” ಎಂದು ಸ್ಫೋಟಕ ಮಾಹಿತಿ ನೀಡಿದ್ದಾರೆ.
ಜೈಲಿಂದ ಬಂದ ಮೇಲೆ ಮಾಡಿದ ಮಾನವೀಯ ಕಾರ್ಯ
ಜಾಮೀನಿನ ಮೇಲೆ ಹೊರಬಂದ ನಂತರ ಸಂದೀಪಾ ಇಬ್ಬರು ಮಹಿಳಾ ಕೈದಿಗಳಿಗೆ ಸಹಾಯ ಮಾಡಿದ್ದಾಗಿ ಹೇಳಿದ್ದಾರೆ. 3,000 ರೂ. ಕಳ್ಳತನದ ಆರೋಪದ ಮೇಲೆ 4 ತಿಂಗಳು ಜೈಲಲ್ಲಿದ್ದ ಮಹಿಳೆಗೆ ಕಾನೂನು ನೆರವು ನೀಡಿ ಹೊರತಂದಿದ್ದಾರೆ. ಆಕೆಯ ತಾಯಿ ಅಂಧರಾಗಿದ್ದರು ಮತ್ತು ತಂದೆ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು ಎಂದರು. ಪತಿಯಿಂದಾಗಿ ಶೇರ್ ಮಾರ್ಕೆಟ್ ವಂಚನೆಯಲ್ಲಿ ಸಿಲುಕಿ 6 ತಿಂಗಳು ಜೈಲಲ್ಲಿದ್ದ ಇನ್ನೊಬ್ಬ ಮಹಿಳೆಗೆ ಮಧ್ಯಂತರ ಜಾಮೀನು ಕೊಡಿಸಲು ನೆರವಾಗಿದ್ದೇನೆ ಎಂದಿದ್ದಾರೆ.
ಪ್ರಕರಣದ ಹಿನ್ನೆಲೆ
ಸುಮಾರು 6 ಕೋಟಿ ರೂ.ಗಳ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಂದೀಪಾ ವಿರ್ಕ್ ನಾಲ್ಕು ತಿಂಗಳು ಕಸ್ಟಡಿಯಲ್ಲಿದ್ದರು. ಸಿನಿಮಾದಲ್ಲಿ ಪ್ರಮುಖ ಪಾತ್ರ ನೀಡುವುದಾಗಿ ನಂಬಿಸಿ ಹೂಡಿಕೆದಾರರಿಂದ ಹಣ ಪಡೆದು ವಂಚಿಸಿದ ಪ್ರಕರಣ ಇದಾಗಿದೆ. ಜಾರಿ ನಿರ್ದೇಶನಾಲಯದ (ED) ಪ್ರಕಾರ, ಈ ಹಣವು ಅವರ ಖಾತೆಗಳ ಮೂಲಕ ಆಸ್ತಿ ಖರೀದಿ ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ವರ್ಗಾವಣೆಯಾಗಿತ್ತು.