
ಇರಾನ್‌ನ ಅಣ್ವಸ್ತ್ರ ಕನಸಿಗೆ ತಡೆಯೊಡ್ಡುವ ಕಾರಣಕ್ಕಾಗಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಆರಂಭಿಸಿದ್ದ ಯುದ್ಧ ಇದೀಗ 12 ದೇಶಗಳಿಗೆ ವ್ಯಾಪಿಸಿದೆ. ಇದರಿಂದಾಗಿ ಮಧ್ಯಪ್ರಾಚ್ಯ ಮತ್ತು ಅಕ್ಕಪಕ್ಕದ ದೇಶಗಳು ಹೊತ್ತಿ ಉರಿಯುತ್ತಿದ್ದು ಇಡೀ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ
ಟೆಹ್ರಾನ್/ಟೆಲ್‌ಅವೀವ್: ಇರಾನ್‌ನ ಅಣ್ವಸ್ತ್ರ ಕನಸಿಗೆ ತಡೆಯೊಡ್ಡುವ ಕಾರಣಕ್ಕಾಗಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಆರಂಭಿಸಿದ್ದ ಯುದ್ಧ ಇದೀಗ 12 ದೇಶಗಳಿಗೆ ವ್ಯಾಪಿಸಿದೆ. ಇದರಿಂದಾಗಿ ಮಧ್ಯಪ್ರಾಚ್ಯ ಮತ್ತು ಅಕ್ಕಪಕ್ಕದ ದೇಶಗಳು ಹೊತ್ತಿ ಉರಿಯುತ್ತಿದ್ದು ಇಡೀ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ, ಮೊದಲ ದಿನ ಕೇವಲ ಪರಸ್ಪರರ ಸೇನಾ ನೆಲೆ ಗುರಿಯಾಗಿ ದಾಳಿ ನಡೆಸುತ್ತಿದ್ದ ದೇಶಗಳು, ಇದೀಗ ಪರಮಾಣು ನೆಲೆ, ರಾಯಭಾರ ಕಚೇರಿ, ತೈಲ ಸಂಸ್ಕರಣಾ ಘಟಕ, ಪ್ರಧಾನಿಗಳ ಕಚೇರಿಯನ್ನೂ ಗುರಿಯಾಗಿಸಿ ದಾಳಿ ಆರಂಭಿಸಿವೆ. ಇರಾನ್ ಸೇನೆ ಹಾಗೂ ಅದರ ಬೆಂಬಲಿತ ಬಂಡುಕೋರರೇ 9 ದೇಶಗಳ ಮೇಲೆ ದಾಳಿಗೆ ಇಳಿದಿದ್ದಾರೆ.
ಜೊತೆಗೆ ನಾವು ಇಲ್ಲಿ ಸರ್ಕಾರ ಸ್ಥಾಪಿಸಲು ಬಂದಿಲ್ಲ, ನಾವು ಬಂದಿರುವುದು ಇರಾನ್ ಅಣ್ವಸ್ತ್ರ ಸಾಮರ್ಥ್ಯವನ್ನು ಮುಗಿಸಲು ಎಂದು ಅಮೆರಿಕದ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಅಬ್ಬರಿಸಿದ್ದರೆ, ಯುದ್ಧ 4 ವಾರಗಳ ಕಾಲ ಮುಂದುವರೆಯಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಹೀಗಾಗಿ ಮುಂದಿನ ಒಂದು ತಿಂಗಳ ಕಾಲ ಜಗತ್ತು ಮತ್ತೊಂದು ಭೀಕರ ಯುದ್ಧಕ್ಕೆ ಸಾಕ್ಷಿಯಾಗಬೇಕಾದ ಸುಳಿವು ಸಿಕ್ಕಿದೆ.
12 ದೇಶಗಳಿಗೆ ವಿಸ್ತರಣೆ:
ಈವರೆಗೆ ಇರಾನ್, ಇಸ್ರೇಲ್, ಸೌದಿ, ಯುಎಇ, ಕುವೈತ್, ಬಹ್ರೈನ್, ಕತಾರ್ ದೇಶಗಳಿಗೆ ಸೀಮಿತವಾಗಿದ್ದ ಈ ಸಂಘರ್ಷ ಇದೀಗ, ಲೆಬನಾನ್, ಸೈಪ್ರಸ್ ಸೇರಿ ಒಟ್ಟಾರೆ 12ಕ್ಕೂ ದೇಶಗಳಿಗೆ ವ್ಯಾಪಿಸಿದೆ. ಸೈಪ್ರಸ್‌ನಲ್ಲಿರುವ ಬ್ರಿಟನ್ ಸೇನಾ ನೆಲೆಗಳ ಮೇಲೆ ಇರಾನ್ ಡ್ರೋನ್ ದಾಳಿಗೆ ಯತ್ನಿಸಿದ್ದು, ಇದರ ಬೆನ್ನಲ್ಲೇ ಫ್ರಾನ್ಸ್, ಬ್ರಿಟನ್, ಜರ್ಮನಿಯಂಥ ನ್ಯಾಟೋ ರಾಷ್ಟ್ರಗಳೂ ಇದೀಗ ಅಮೆರಿಕ-ಇಸ್ರೇಲ್ ಬೆನ್ನಿಗೆ ನಿಲ್ಲಲು ಮುಂದಾಗಿವೆ.
ಪ್ರತೀಕಾರ:
ತನ್ನ ಪರಮೋಚ್ಚ ಧಾರ್ಮಿಕ ನಾಯಕ ಅಯತೊಲ್ಲ ಅಲಿ ಖಮೇನಿ ಹತ್ಯೆಗೆ ಪ್ರತೀಕಾರದ ಮಾತುಗಳನ್ನು ಆಡಿದ್ದ ಇರಾನ್, ಸೋಮವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಚೇರಿ, ಸೌದಿ ಅರೇಬಿಯಾದಲ್ಲಿರುವ ವಿಶ್ವದಲ್ಲೇ ಅತಿದೊಡ್ಡ ತೈಲ ಸಂಸ್ಕರಣಾ ಘಟಕ, ಕುವೈತ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ, ಕತಾರ್‌ನ ತೈಲ ಘಟಕದ ಮೇಲೆ ದಾಳಿ ನಡೆಸಿದೆ. ಇದಲ್ಲದೆ ಕುವೈತ್, ಬಹ್ರೈನ್ ಹಾಗೂ ಇತರೆ ದೇಶಗಳಲ್ಲಿನ ಅಮೆರಿಕದ ನೆಲೆ, ವಾಣಿಜ್ಯ ಹಿತಾಸಕ್ತಿ ಕೇಂದ್ರಗಳ ಮೇಲೂ ದಾಳಿ ನಡೆಸಿದೆ.
ಭಾರತೀಯ ಬಲಿ:
ಈ ನಡುವೆ ಹೋರ್ಮುಜ್ ಜಲಸಂಧಿ ಮುಚ್ಚಿದ ಬಳಿಕ ಆ ವಲಯದಲ್ಲಿ ಸಂಚರಿಸುತ್ತಿರುವ ಹಡಗುಗಳು ಮೇಲೆ ಇರಾನ್ ಇಲ್ಲವೇ ಅದರ ಬೆಂಬಲಿತ ಉಗ್ರ ಸಂಘಟನೆಗಳು ದಾಳಿ ಆರಂಭಿಸಿವೆ. ಇಂಥದ್ದೇ ಒಂದು ದಾಳಿಯಲ್ಲಿ ಭಾರತೀಯ ನಾವಿಕನೊಬ್ಬ ಸಾವನ್ನಪ್ಪಿದ್ದಾನೆ. ಮತ್ತೊಂದೆಡೆ ಇರಾನ್ ಅನ್ನು ಬೆಂಬಲಿಸಿ ಇಸ್ರೇಲ್ ಮೇಲೆ ಹಿಜ್ಬುಲ್ಲಾ ಉಗ್ರರು ದಾಳಿ ನಡೆಸಿದ್ದಾರೆ. ಈ ವೇಳೆ ಇಸ್ರೇಲ್ ನಡೆಸಿದ ಪ್ರತಿದಾಳಿಗೆ ಕನಿಷ್ಠ 31 ಲೆಬನಾನಿಗಳು ಸಾವನ್ನಪ್ಪಿದ್ದಾರೆ.
ವಿಮಾನ ಪತನ:
ಈ ನಡುವೆ ಕುವೈತ್‌ನಲ್ಲಿ ಅಮೆರಿಕದ ಮೂರು ಎಫ್-15ಎಸ್ ಯುದ್ಧವಿಮಾನಗಳು ಪತನ ಆಗಿದ್ದು, ಇದನ್ನು ತಾನೇ ಹೊಡೆದುರುಳಿಸಿದ್ದಾಗಿ ಇರಾನ್ ಹೇಳಿಕೊಂಡರೆ, ಅಮೆರಿಕ ಮಾತ್ರ ಕುವೈಟ್ ತಪ್ಪಾಗಿ ಅಮೆರಿಕದ ಯುದ್ಧ ವಿಮಾನಗಳನ್ನು ಹೊಡೆದುರುಳಿದೆ ಎಂದು ಸ್ಪಷ್ಟನೆ ನೀಡಿದೆ.
ಜಂಟಿ ದಾಳಿ:
ಈ ನಡುವೆ ಅಮೆರಿಕ-ಇಸ್ರೇಲ್ ಸೇರಿಕೊಂಡು ನಟಾನ್ಜ್ ಅಣು ಕೇಂದ್ರದ ಮೇಲೆ ಬಾಂಬ್ ದಾಳಿ ನಡೆಸಿದೆ. ಇದರಿಂದ ವಿಕಿರಣ ಸೋರಿಕೆಯ ಆತಂಕ ಎದುರಾಗಿದೆ ಎಂದು ಇರಾನ್ ಹೇಳಿಕೊಂಡಿದೆ. ಆದರೆ, ಇಸ್ರೇಲ್ ಈ ಆರೋಪವನ್ನು ತಳ್ಳಿಹಾಕಿದೆ. ಜೊತೆಗೆ ಬಿ2 ಬಾಂಬರ್ ಬಳಸಿ ಇರಾನ್‌ನ ಕ್ಷಿಪಣಿ ಘಟಕ, ಜೊತೆಗೆ ರೆವಲ್ಯೂಷನರಿ ಗಾರ್ಡ್ಸ್ ಹೆಡ್‌ಆಫೀಸ್ ಅನ್ನು ಧ್ವಂಸಗೊಳಿಸಲಾಗಿದೆ ಎಂದು ಅಮೆರಿಕ ಹೇಳಿದೆ.
ಈ ನಡುವೆ ಕಳೆದ ಮೂರು ದಿನಗಳಲ್ಲಿ ಇರಾನ್‌ನ 131 ನಗರ ಗುರಿಯಾಗಿಸಿ ನಡೆದ ದಾಳಿಯಲ್ಲಿ 555 ಜನ ಸಾವನ್ನಪ್ಪಿದ್ಧಾರೆ ಎಂದು ಇರಾನ್ ಹೇಳಿದೆ.