Headlines

‘ಗಲ್ಫ್‌ನಲ್ಲಿರುವ 1 ಕೋಟಿ ಭಾರತೀಯರ ಸುರಕ್ಷತೆಯೇ ಆದ್ಯತೆ’: ಮಧ್ಯಪ್ರಾಚ್ಯ ಯುದ್ಧ ನಿಲ್ಲಿಸಲು ಭಾರತ ಆಗ್ರಹ | India Pushes For End To Middle East War Safety Of 1 Crore Indians In Gulf San

‘ಗಲ್ಫ್‌ನಲ್ಲಿರುವ 1 ಕೋಟಿ ಭಾರತೀಯರ ಸುರಕ್ಷತೆಯೇ ಆದ್ಯತೆ’: ಮಧ್ಯಪ್ರಾಚ್ಯ ಯುದ್ಧ ನಿಲ್ಲಿಸಲು ಭಾರತ ಆಗ್ರಹ | India Pushes For End To Middle East War Safety Of 1 Crore Indians In Gulf San



‘ಗಲ್ಫ್‌ನಲ್ಲಿರುವ 1 ಕೋಟಿ ಭಾರತೀಯರ ಸುರಕ್ಷತೆಯೇ ಆದ್ಯತೆ’: ಮಧ್ಯಪ್ರಾಚ್ಯ ಯುದ್ಧ ನಿಲ್ಲಿಸಲು ಭಾರತ ಆಗ್ರಹ | India Pushes For End To Middle East War Safety Of 1 Crore Indians In Gulf San

ಮಧ್ಯಪ್ರಾಚ್ಯದಲ್ಲಿ ಹರಡುತ್ತಿರುವ ಯುದ್ಧದಿಂದಾಗಿ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಗಲ್ಫ್‌ನಲ್ಲಿರುವ ಕೋಟ್ಯಂತರ ಭಾರತೀಯರ ಸುರಕ್ಷತೆ, ದೇಶದ ವ್ಯಾಪಾರ ಮತ್ತು ಇಂಧನ ಮಾರ್ಗಗಳ ಮೇಲಾಗುವ ಪರಿಣಾಮಗಳ ಬಗ್ಗೆ ಸರ್ಕಾರ ಆತಂಕಗೊಂಡಿದ್ದು, ತಕ್ಷಣವೇ ಮಾತುಕತೆ ಮೂಲಕ ಸಂಘರ್ಷ ಕೊನೆಗೊಳಿಸಲು ಕರೆ ನೀಡಿದೆ.

ನವದೆಹಲಿ (ಮಾ.3): ಮಧ್ಯಪ್ರಾಚ್ಯದಾದ್ಯಂತ ವೇಗವಾಗಿ ಹರಡುತ್ತಿರುವ ಸಂಘರ್ಷದ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಯುದ್ಧವು ಗಲ್ಫ್‌ನಲ್ಲಿ ವಾಸಿಸುತ್ತಿರುವ ಲಕ್ಷಾಂತರ ಭಾರತೀಯರ ಸುರಕ್ಷತೆಗೆ ಧಕ್ಕೆ ತರಬಹುದು ಮತ್ತು ದೇಶದ ಆರ್ಥಿಕತೆಗೆ ಪ್ರಮುಖವಾಗಿರುವ ವ್ಯಾಪಾರ ಮತ್ತು ಇಂಧನ ಮಾರ್ಗಗಳಿಗೆ ಅಡ್ಡಿಪಡಿಸಬಹುದು ಎಂದು ಎಚ್ಚರಿಸಿದೆ. ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯ ನಂತರ ಪರಿಸ್ಥಿತಿ ಗಂಭೀರವಾಗಿ ಹದಗೆಟ್ಟಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮಂಗಳವಾರ ತಿಳಿಸಿದೆ.

“ಫೆಬ್ರವರಿ 28 ರಂದು ಇರಾನ್ ಮತ್ತು ಗಲ್ಫ್ ಪ್ರದೇಶದಲ್ಲಿ ಸಂಘರ್ಷ ಪ್ರಾರಂಭವಾದಾಗಲೇ ನಾವು ತೀವ್ರ ಕಳವಳ ವ್ಯಕ್ತಪಡಿಸಿದ್ದೆವು. ಆಗಲೇ ಭಾರತವು ಎಲ್ಲಾ ಕಡೆಯವರು ಸಂಯಮ ವಹಿಸಬೇಕು, ಉದ್ವಿಗ್ನತೆಯನ್ನು ತಪ್ಪಿಸಬೇಕು ಮತ್ತು ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿತ್ತು. ದುರದೃಷ್ಟವಶಾತ್, ಪವಿತ್ರ ರಂಜಾನ್ ಮಾಸದಲ್ಲಿ ಈ ಪ್ರದೇಶದ ಪರಿಸ್ಥಿತಿ ನಿರಂತರವಾಗಿ ಹದಗೆಡುತ್ತಿದೆ” ಎಂದು ಸಚಿವಾಲಯ ಹೇಳಿದೆ.

ಪ್ರದೇಶದಾದ್ಯಂತ ಹರಡುತ್ತಿರುವ ಸಂಘರ್ಷ

ಮಂಗಳವಾರ ಹಲವು ದೇಶಗಳಲ್ಲಿ ಹೊಸ ದಾಳಿಗಳು ವರದಿಯಾಗಿದ್ದು, ಯುದ್ಧವು ಆರಂಭಿಕ ಕೇಂದ್ರಬಿಂದುಗಳನ್ನು ಮೀರಿ ಹರಡುತ್ತಿದೆ. ಇರಾನ್‌ನಿಂದ ಉಡಾವಣೆಯಾದ ಕ್ಷಿಪಣಿಗಳನ್ನು ಇಸ್ರೇಲ್ ತಡೆಹಿಡಿದ ನಂತರ ಜೆರುಸಲೆಮ್‌ನಲ್ಲಿ ಸ್ಫೋಟದ ಶಬ್ದಗಳು ಕೇಳಿಬಂದಿವೆ.

ಇನ್ನೊಂದೆಡೆ, ಟೆಹ್ರಾನ್‌ನ ಉತ್ತರ ಭಾಗಗಳು ಸೇರಿದಂತೆ ಕರಾಜ್ ಮತ್ತು ಇಸ್ಫಹಾನ್ ನಗರಗಳಲ್ಲಿ ಭಾರಿ ಸ್ಫೋಟಗಳು ಸಂಭವಿಸಿವೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಇರಾನ್‌ನ ಅಧ್ಯಕ್ಷೀಯ ಕಚೇರಿ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯ ಕಟ್ಟಡವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ. ಇರಾನ್ ರೆಡ್ ಕ್ರೆಸೆಂಟ್ ಪ್ರಕಾರ, ಯುದ್ಧ ಆರಂಭವಾದಾಗಿನಿಂದ ಈವರೆಗೆ ದೇಶಾದ್ಯಂತ 780 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ನಾಗರಿಕರು ಮತ್ತು ಆರ್ಥಿಕತೆಯ ಮೇಲೆ ಆತಂಕ

ಗಲ್ಫ್ ದೇಶಗಳಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಭಾರತೀಯರ ಸಂಖ್ಯೆಯನ್ನು ಉಲ್ಲೇಖಿಸಿದ ಸರ್ಕಾರ, ಅವರ ಕ್ಷೇಮವೇ ನಮಗೆ ಮುಖ್ಯ ಎಂದಿದೆ.

“ಗಲ್ಫ್ ಪ್ರದೇಶದಲ್ಲಿ ಸುಮಾರು ಒಂದು ಕೋಟಿ ಭಾರತೀಯ ನಾಗರಿಕರು ವಾಸಿಸುತ್ತಿದ್ದಾರೆ. ಅವರ ಸುರಕ್ಷತೆ ಮತ್ತು ಯೋಗಕ್ಷೇಮ ನಮ್ಮ ಆದ್ಯತೆ. ಅವರಿಗೆ ತೊಂದರೆಯಾಗುವ ಯಾವುದೇ ಬೆಳವಣಿಗೆಯನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ. ನಮ್ಮ ವ್ಯಾಪಾರ ಮತ್ತು ಇಂಧನ ಪೂರೈಕೆ ಮಾರ್ಗಗಳು ಸಹ ಇದೇ ಪ್ರದೇಶದ ಮೂಲಕ ಹಾದುಹೋಗುತ್ತವೆ. ಯಾವುದೇ ದೊಡ್ಡ ವ್ಯತ್ಯಯವು ಭಾರತೀಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಜಾಗತಿಕ ಕಾರ್ಮಿಕ ಬಲದಲ್ಲಿ ನಮ್ಮವರು ಪ್ರಮುಖರಾಗಿರುವುದರಿಂದ, ವ್ಯಾಪಾರಿ ಹಡಗುಗಳ ಮೇಲಿನ ದಾಳಿಯನ್ನು ಭಾರತ ಬಲವಾಗಿ ವಿರೋಧಿಸುತ್ತದೆ. ಈಗಾಗಲೇ ಕಳೆದ ಕೆಲವು ದಿನಗಳಲ್ಲಿ ನಡೆದ ಇಂತಹ ದಾಳಿಗಳಿಂದ ಕೆಲವು ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ” ಎಂದು ಭಾರತ ಕಳವಳ ವ್ಯಕ್ತಪಡಿಸಿದೆ.

ಆರ್ಥಿಕ ಪರಿಣಾಮ

ಇಂಧನ ಮಾರುಕಟ್ಟೆಯಲ್ಲಿ ಈಗಾಗಲೇ ತಲ್ಲಣ ಶುರುವಾಗಿದೆ. ಪೂರೈಕೆ ವ್ಯತ್ಯಯದ ಭೀತಿಯಿಂದ ಮಂಗಳವಾರ ಬೆಳಿಗ್ಗೆ ಯುರೋಪಿಯನ್ ಅನಿಲ (Gas) ಬೆಲೆಗಳು ಶೇ. 30 ರಷ್ಟು ಏರಿಕೆಯಾಗಿವೆ. ಏಷ್ಯಾದ ಮಾರುಕಟ್ಟೆಗಳಲ್ಲಿ ಬ್ರೆಂಟ್ ಕ್ರೂಡ್ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 81 ಡಾಲರ್ ದಾಟಿದೆ.

ಸೇನಾ ಗುರಿಗಳಲ್ಲದೆ, ಈಗ ಮೂಲಸೌಕರ್ಯ ಮತ್ತು ರಾಯಭಾರ ಕಚೇರಿಗಳ ಮೇಲೂ ದಾಳಿ ನಡೆಯುತ್ತಿದೆ. ರಿಯಾದ್‌ನಲ್ಲಿನ ಅಮೆರಿಕ ರಾಯಭಾರ ಕಚೇರಿಯ ಮೇಲೆ ಎರಡು ಡ್ರೋನ್ ದಾಳಿಗಳು ನಡೆದಿದ್ದು, ಬೆಂಕಿ ಕಾಣಿಸಿಕೊಂಡಿದ್ದರಿಂದ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇರಾನ್ ದಾಳಿಯ ಹಿನ್ನೆಲೆಯಲ್ಲಿ ಕುವೈತ್‌ನಲ್ಲಿನ ಅಮೆರಿಕ ರಾಯಭಾರ ಕಚೇರಿಯನ್ನು ಅನಿರ್ದಿಷ್ಟಾವಧಿಗೆ ಮುಚ್ಚಲಾಗಿದೆ. ಯುಎಇಯಲ್ಲಿರುವ ಅಮೆಜಾನ್‌ನ ಎರಡು ಡೇಟಾ ಸೆಂಟರ್‌ಗಳ ಮೇಲೆ ಡ್ರೋನ್ ದಾಳಿಯಾಗಿದ್ದು, ಕ್ಲೌಡ್ ಸೇವೆಗಳಿಗೆ ವ್ಯತ್ಯಯವುಂಟಾಗಿದೆ. ಫುಜೈರಾದ ತೈಲ ಕೈಗಾರಿಕಾ ವಲಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಹ್ರೇನ್ ಮತ್ತು ಒಮಾನ್ ದೇಶಗಳ ಮೂಲಸೌಕರ್ಯ ಮತ್ತು ಇಂಧನ ಟ್ಯಾಂಕ್‌ಗಳ ಮೇಲೂ ದಾಳಿ ವರದಿಯಾಗಿದೆ.

ಮಾತುಕತೆಗೆ ಭಾರತದ ಕರೆ

ಹಿಂಸಾಚಾರದ ನಡುವೆ, ಮಾತುಕತೆ ಮತ್ತು ರಾಜತಾಂತ್ರಿಕತೆ ಏಕೈಕ ದಾರಿ ಎಂದು ಭಾರತ ಪುನರುಚ್ಚರಿಸಿದೆ. “ಭಾರತವು ಸಂವಾದ ಮತ್ತು ರಾಜತಾಂತ್ರಿಕತೆಗೆ ಬಲವಾಗಿ ಕರೆ ನೀಡುತ್ತದೆ. ಯುದ್ಧವನ್ನು ಕೂಡಲೇ ಕೊನೆಗೊಳಿಸುವ ಪರವಾಗಿ ನಾವು ಧ್ವನಿ ಎತ್ತುತ್ತಿದ್ದೇವೆ. ಈಗಾಗಲೇ ಅನೇಕ ಅಮೂಲ್ಯ ಜೀವಗಳು ಬಲಿಯಾಗಿವೆ ಮತ್ತು ಅದಕ್ಕಾಗಿ ನಾವು ವಿಷಾದಿಸುತ್ತೇವೆ” ಎಂದು ಹೇಳಿದೆ.

ವಿದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಸ್ಥಳೀಯ ನಾಗರಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ನೆರವು ನೀಡುತ್ತಿವೆ ಎಂದು MEA ತಿಳಿಸಿದೆ. ಪ್ರಧಾನಮಂತ್ರಿ ಮತ್ತು ವಿದೇಶಾಂಗ ಸಚಿವರು ಈ ಪ್ರದೇಶದ ದೇಶಗಳ ನಾಯಕರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಯುದ್ಧವು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಪರಿಸ್ಥಿತಿಯನ್ನು ಭಾರತ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ.



Source link

Leave a Reply

Your email address will not be published. Required fields are marked *