
ವರ್ಷದ ಮೊದಲ ಖಗ್ರಾಸ್ ಚಂದ್ರಗ್ರಹಣದಂದು, ದೇಶದ ಹಲವು ದೇಗುಲಗಳು ಮುಚ್ಚಿದರೆ, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠವು ಭಕ್ತರ ದರ್ಶನಕ್ಕೆ ತೆರೆದಿರುತ್ತದೆ. ಕೇವಲ 21 ನಿಮಿಷಗಳ ಕಾಲ ಗ್ರಹಣದ ಅನುಷ್ಠಾನವಿದ್ದು, ದರ್ಶನಕ್ಕೆ ಯಾವುದೇ ನಿರ್ಬಂಧವಿಲ್ಲದಿದ್ದರೂ, ಕೆಲವು ವಿಶೇಷ ಸೇವೆ ಬದಲಾವಣೆಯಾಗಿದೆ.
ರಾಯಚೂರು (ಮಾ.3): ವರ್ಷದ ಮೊದಲ ಖಗ್ರಾಸ್ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ದೇಶಾದ್ಯಂತ ಹಲವು ದೇವಾಲಯಗಳು ಬಾಗಿಲು ಮುಚ್ಚುತ್ತಿದ್ದರೆ, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಾತ್ರ ಭಕ್ತರಿಗೆ ದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ. ಈ ಕುರಿತು ಮಠದ ವಿದ್ಯಾಪೀಠದ ಪ್ರಾಂಶುಪಾಲರಾದ ವಾದಿರಾಜಾಚಾರ್ಯ ಅವರು ಏಷ್ಯಾನೆಟ್ ಸುವರ್ಣನ್ಯೂಸ್ಗೆ ವಿಶೇಷ ಮಾಹಿತಿ ನೀಡಿದ್ದಾರೆ.
ಕೇವಲ 21 ನಿಮಿಷಗಳ ಕಾಲ ಗ್ರಹಣದ ಅನುಷ್ಠಾನ
ಸಾಮಾನ್ಯವಾಗಿ ಚಂದ್ರಗ್ರಹಣವು ರಾತ್ರಿ ಸಂಭವಿಸುತ್ತದೆ. ಆದರೆ ಈ ಬಾರಿ ಚಂದ್ರಗ್ರಹಣವು ಮಧ್ಯಾಹ್ನ 3:10ಕ್ಕೆ ಆರಂಭವಾಗಿದ್ದರೂ, ಭಾರತದಲ್ಲಿ ಸೂರ್ಯ ಮುಳುಗಿ ಚಂದ್ರ ಉದಯಿಸಿದ ಬಳಿಕವಷ್ಟೇ ಇದರ ಅನುಷ್ಠಾನ ಆರಂಭವಾಗಲಿದೆ. ಸಂಜೆ 6:26ಕ್ಕೆ ಅನುಷ್ಠಾನ ಶುರುವಾಗಿ, 6:47ಕ್ಕೆ ಮುಕ್ತಾಯಗೊಳ್ಳಲಿದೆ. ಅಂದರೆ ಕೇವಲ 21 ನಿಮಿಷಗಳ ಕಾಲ ಮಾತ್ರ ಗ್ರಹಣದ ಪ್ರಭಾವ ಇರಲಿದೆ ಎಂದು ಅವರು ವಿವರಿಸಿದ್ದಾರೆ.
ದರ್ಶನಕ್ಕೆ ಇಲ್ಲ ನಿರ್ಬಂಧ: ಎಂದಿನಂತೆ ದರ್ಶನ, ತೀರ್ಥ ಪ್ರಸಾದ
ಗ್ರಹಣದ ಅವಧಿಯಲ್ಲಿ ರಾಜ್ಯದ ಬಹುತೇಕ ದೇವಸ್ಥಾನಗಳನ್ನು ಬಂದ್ ಮಾಡಿ, ಶುದ್ಧೀಕರಣದ ನಂತರವಷ್ಟೇ ದರ್ಶನಕ್ಕೆ ಅವಕಾಶ ನೀಡುವ ಪದ್ಧತಿ ಇದೆ. ಆದರೆ ಮಂತ್ರಾಲಯದಲ್ಲಿ ಗ್ರಹಣದ ವೇಳೆಯಲ್ಲೂ ಭಕ್ತರಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಸಾರ್ವಜನಿಕರು ಎಂದಿನಂತೆ ರಾಯರ ದರ್ಶನ ಪಡೆಯಬಹುದು ಹಾಗೂ ತೀರ್ಥ ಪ್ರಸಾದವನ್ನೂ ಸ್ವೀಕರಿಸಬಹುದು ಎಂದು ಮಠದ ಮೂಲಗಳು ತಿಳಿಸಿವೆ.
ಕೆಲವು ವಿಶೇಷ ಸೇವೆಗಳಲ್ಲಿ ಬದಲಾವಣೆ
ಗ್ರಹಣದ ಹಿನ್ನೆಲೆಯಲ್ಲಿ ಶ್ರೀಮಠದ ದೈನಂದಿನ ಕೆಲವು ವಿಶೇಷ ಸೇವೆಗಳಲ್ಲಿ ಬದಲಾವಣೆ ಮಾಡಲಾಗಿದೆ.
* ಇಂದು ಬೆಳಗ್ಗೆ ನಡೆಯಬೇಕಿದ್ದ ಪಂಚಾಮೃತ ಅಭಿಷೇಕ, ರಾಯರ ಬೃಂದಾವನಕ್ಕೆ ಅಲಂಕಾರ ಸೇವೆ ಹಾಗೂ ಪಲ್ಲಕ್ಕಿ ಉತ್ಸವಗಳನ್ನು ರದ್ದುಗೊಳಿಸಲಾಗಿದೆ.
* ಗ್ರಹಣ ಮುಕ್ತಾಯವಾದ ನಂತರವಷ್ಟೇ ಬೆಳಗ್ಗಿನ ಪೂಜೆಗಳನ್ನು ಸಂಜೆ ನೆರವೇರಿಸಿ, ಬಳಿಕ ಉತ್ಸವಗಳು ನಡೆಯಲಿವೆ.
* ಗ್ರಹಣ ಬಿಟ್ಟ ನಂತರವಷ್ಟೇ ಭಕ್ತರಿಗೆ ಪ್ರಸಿದ್ಧ ಪರಿಮಳ ಪ್ರಸಾದ ವಿತರಿಸಲಾಗುವುದು.
ದೋಷ ನಿವಾರಣೆಗಾಗಿ ವಿಶೇಷ ಹೋಮ-ಹವನ
ಗ್ರಹಣದ ಅವಧಿಯಲ್ಲಿ ಯಾವುದೇ ಅಶುಭ ಪರಿಣಾಮಗಳು ಬೀರದಂತೆ ಮಠದ ಯಾಗಶಾಲೆಯಲ್ಲಿ ವಿಶೇಷ ಹೋಮಗಳು ಜರುಗಲಿವೆ. ಗ್ರಹಣ ಶಾಂತಿಗಾಗಿ ಪಂಡಿತರು ಹವನಗಳನ್ನು ನಡೆಸಿ, ಶ್ರೀಮಠಕ್ಕೆ ಹಾಗೂ ಭಕ್ತರಿಗೆ ಯಾವುದೇ ಗ್ರಹಣ ದೋಷ ತಟ್ಟದಂತೆ ಪ್ರಾರ್ಥಿಸಲಿದ್ದಾರೆ ಎಂದು ವಾದಿರಾಜಾಚಾರ್ಯ ಅವರು ತಿಳಿಸಿದ್ದಾರೆ.