
ಅಮೆರಿಕಾ-ಇಸ್ರೇಲ್ ದಾಳಿಯ ನಂತರ ಇರಾನ್, ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ್ದರಿಂದ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈ ಇಂಧನ ಬಿಕ್ಕಟ್ಟನ್ನು ನಿಭಾಯಿಸಲು, ಭಾರತವು ಅಮೆರಿಕಾದೊಂದಿಗಿನ ರಾಜತಾಂತ್ರಿಕ ಒತ್ತಡದ ನಡುವೆಯೂ ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಹೆಚ್ಚಿಸುವ ಸಾಧ್ಯತೆಯಿದೆ.
ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಹೆಚ್ಚಿಸುವ ಅನಿವಾರ್ಯತೆ:
ನವದೆಹಲಿ: ಅಮೆರಿಕಾ ಇಸ್ರೇಲ್ ಜಂಟಿ ದಾಳಿಯ ಬಳಿಕ ಇರಾನ್ ಸೌದಿ ಅರೇಬಿಯಾದ ಹಲವು ರಾಷ್ಟ್ರಗಳ ಮೇಲೆ ದಾಳಿ ಮಾಡುವುದರ ಜೊತೆ ಪ್ರಪಂಚಕ್ಕೆ ತೈಲ ಪೂರೈಕೆಯ ಮಾರ್ಗವನ್ನೇ ಬಂದ್ ಮಾಡಿರುವುದರಿಂದಾಗಿ ಇಂಧನ ಪೂರೈಕೆಯಲ್ಲಿ ದೊಡ್ಡ ಪ್ರಮಾಣದ ಏರಿಳಿತಗಳು ಉಂಟಾಗಿದ್ದು, ಇವನ್ನು ಸರಿ ದೂಗಿಸಲು ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಹೆಚ್ಚಿಸಬಹುದು ಎಂದು ಸರ್ಕಾರಿ ಮೂಲಗಳು ವರದಿ ಮಾಡಿವೆ.
ಅಮೆರಿಕಾ ಇಸ್ರೇಲ್ ತನ್ನ ಮೇಲೆ ಜಂಟಿಯಾಗಿ ಮುಗಿಬಿದ್ದು, ತನ್ನ ನಾಯಕನನ್ನು ಹತ್ಯೆ ಮಾಡಿದ ನಂತರ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ನಂತರ ಈ ಬೆಳವಣಿಗೆ ನಡೆದಿದೆ. ಇದು ವಿಶ್ವದ ತೈಲ ಪೂರೈಕೆಯ ಐದನೇ ಒಂದು ಭಾಗದಷ್ಟು ತೈಲವನ್ನು ಸಾಗಿಸುವ ಪ್ರಮುಖ ಮಾರ್ಗವಾಗಿದೆ.
ರಷ್ಯಾದಿಂದ ಭಾರತವು ಕಚ್ಚಾ ತೈಲ ಖರೀದಿಯನ್ನು ಹೆಚ್ಚಿಸಿದರೆ ಇಂಧನ ಸಮಸ್ಯೆ ಪರಿಹಾರವಾಗುತ್ತದೆ. ಆದರೆ ಇದು ಅಮೆರಿಕಾದೊಂದಿಗಿನ ರಾಜತಾಂತ್ರಿಕ ಸಮಸ್ಯೆಯನ್ನು ಹೆಚ್ಚಿಸಲಿದೆ. ಫೆಬ್ರವರಿ ಆರಂಭದಲ್ಲಿ ಭಾರತ ಮತ್ತು ಅಮೆರಿಕ ನಡುವೆ ನಡೆದ ವ್ಯಾಪಾರ ಒಪ್ಪಂದದಲ್ಲಿ ಪ್ರಮುಖವಾಗಿ ಭಾರತದ ಮೇಲೆ ಅಮೆರಿಕಾ ಹಾಕಿದ ಷರತ್ತುಗಳಲ್ಲಿ ಇದು ಒಂದಾಗಿತ್ತು. (ರಷ್ಯಾದಿಂದ ಕಚ್ಚಾ ತೈಲದ ಖರೀದಿ ಕಡಿಮೆ ಮಾಡಬೇಕು ಎಂಬುದು)
ಇದನ್ನೂ ಓದಿ: ಏಕಕಾಲಕ್ಕೆ ಇಬ್ಬರೊಂದಿಗೆ ಡೇಟಿಂಗ್, ಒಂದೇ ಮಂಟಪದಲ್ಲಿ ಇಬ್ಬರ ಮದುವೆಯಾದ ಮಹಿಳೆ: ಸಿಕ್ತು 29 ಲಕ್ಷ ರೂ ವಧುದಕ್ಷಿಣೆ
ನಿರ್ದಿಷ್ಟವಾಗಿ ಹೇಳುವುದಾದರೆ, ಭಾರತ ರಷ್ಯಾದಿಂದ ತೈಲ ಖರೀದಿಯನ್ನು ಕಡಿಮೆ ಮಾಡಿ ಅಮೆರಿಕಾ ಅಥವಾ ವೆನೆಜುವೆಲಾದಿಂದ ಅದನ್ನು ಖರೀದಿಸುವ ಮೂಲಕ ತೈಲದ ಅಗತ್ಯತೆಯನ್ನು ಸರಿದೂಗಿಸಬೇಕು ಎಂದು ಭರವಸೆಗಳ ಮೇಲೆ ಅಮೆರಿಕಾವೂ ಭಾರತದ ಮೇಲೆ ವಿಧಿಸಿದ್ದ ಶೇ. 25 ಪ್ರತಿಶತ ದಂಡವನ್ನು ಮನ್ನಾ ಮಾಡಲು ಒಪ್ಪಿಕೊಂಡಿತು. ಇದರಿಂದ ಭಾರತದ ಮೇಲೆ ಅಮೆರಿಕಾ ವಿಧಿಸಿದ್ದ ತೆರಿಗೆ ಶೇಕಡಾ 18ಕ್ಕೆ ಇಳಿದಿತ್ತು.
ಹೀಗಿರುವಾಗ ಬದಲಾದ ಜಾಗತಿಕ ರಾಜಕೀಯದಿಂದಾಗಿ ಈ ಸಮಯದಲ್ಲಿ ಭಾರತ ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವ ವಿಶಿಷ್ಟ ಸಾಧ್ಯತೆ ಇದೆ. ಆದರೆ ಸುಂಕಗಳನ್ನು ಪುನಃ ವಿಧಿಸುವ ಹಕ್ಕನ್ನು ಅಮೆರಿಕಾ ಕಾಯ್ದಿರಿಸಿರುವುದರಿಂದ ಮತ್ತೆ ಸುಂಕ ವಿಧಿಸುವ ಸಾಧ್ಯತೆ ಇಲ್ಲದಿಲ್ಲ.
ಹಾರ್ಮುಜ್ ಜಲಸಂಧಿ ಮೂಲಕ ಭಾರತಕ್ಕೆ ಬರುವ ತೈಲದ ಪಾಲು ದಿನಕ್ಕೆ 2.5 ರಿಂದ 2.7 ಮಿಲಿಯನ್ ಬ್ಯಾರೆಲ್‌ಗಳಾಗಿವೆ. 2024 ರ ಅಂತ್ಯದ ಅಂಕಿಅಂಶಗಳ ಪ್ರಕಾರ ಇದು ದೇಶವು ಪ್ರತಿದಿನ ಬಳಸುವ ಆರು ಮಿಲಿಯನ್ ಬ್ಯಾರೆಲ್‌ಗಳ ಅರ್ಧದಷ್ಟು. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ರಫ್ತು ಮತ್ತು ದ್ರವೀಕೃತ ಪೆಟ್ರೋಲಿಯಂ ಅನಿಲ ಅಥವಾ ಎಲ್‌ಪಿಜಿ ಪಡಿತರ ವಿತರಣೆಯ ಮೇಲಿನ ನಿರ್ಬಂಧಗಳನ್ನು ಒಳಗೊಂಡಂತೆ ಹಲವಾರು ‘ತುರ್ತು’ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.
ಇದನ್ನೂ ಓದಿ: ಭದ್ರಾವತಿ ಕೇತ್ರ ಶಿಕ್ಷಣಾಧಿಕಾರಿಯ ಲಂಚವತಾರ: ನ್ಯಾಯಯುತವಾಗಿ ಬರಬೇಕಿದ್ದ ವೇತನ ಮಂಜೂರು ಮಾಡುವುದಕ್ಕೂ ಲಂಚ
ತೈಲದ ಪ್ರಮುಖ ಉತ್ಪಾದಕ ದೇಶವಾದ ಕತಾರ್ ತನ್ನ ಮೇಲೆ ಇರಾನ್ ದಾಳಿ ನಡೆಸಿದ ಬಳಿಕ ದ್ರವೀಕೃತ ನೈಸರ್ಗಿಕ ಅನಿಲ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಹೀಗಾಗಿ ತೈಲ ಪೂರೈಕೆಯ ನಿರ್ಬಂಧಗಳ ನಿರೀಕ್ಷೆಯಲ್ಲಿರುವ ಭಾರತೀಯ ಕಂಪನಿಗಳು ಈಗಾಗಲೇ ಕೈಗಾರಿಕೆಗಳಿಗೆ ನೈಸರ್ಗಿಕ ಅನಿಲ ಸರಬರಾಜನ್ನು ಕಡಿಮೆ ಮಾಡಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಈ ಕಡಿತವು ಶೇಕಡಾ 10 ರಿಂದ 30 ರಷ್ಟಿದೆ ಎಂದು ಮೂಲಗಳು ತಿಳಿಸಿವೆ. ಇದರ ಜೊತೆಗೆ ಹಾರ್ಮುಜ್ ಮೂಲಕವೇ ಭಾರತಕ್ಕೆ ಎಲ್‌ಎನ್‌ಜಿಯ ಶೇಕಡಾ 60 ರಷ್ಟು ಮತ್ತು ಬಹುತೇಕ ಎಲ್ಲಾ ಎಲ್‌ಪಿಜಿ ಆಮದಾಗುವುದರಿಂದ ಇದು ಅಗತ್ಯವಾಗಿದೆ. ಒಟ್ಟಾರೆಯಾಗಿ, ಭಾರತವು ತನ್ನ ತೈಲದ ಸುಮಾರು 89 ಪ್ರತಿಶತ ಮತ್ತು ಅನಿಲದ 50 ಪ್ರತಿಶತವನ್ನು ಆಮದು ಮಾಡಿಕೊಳ್ಳುತ್ತದೆ.
ಭಾರತವು ಇಂಧನ ಪೂರೈಕೆಯಲ್ಲಿ ಅಲ್ಪಾವಧಿಯ ಅಡಚಣೆಯನ್ನು ಎದುರಿಸುವ ಸಾಧ್ಯತೆಯಿಲ್ಲ ಎಂದು ಅಧಿಕಾರಿಗಳು ಈ ಮೊದಲು ಹೇಳಿದ್ದರು. ಸೋಮವಾರ ಸಂಜೆ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, ಇರಾನ್ ಮತ್ತು ಮಧ್ಯಪ್ರಾಚ್ಯ ಪ್ರದೇಶದ ಪರಿಸ್ಥಿತಿಯನ್ನು ಸರ್ಕಾರ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ದೇಶದಲ್ಲಿ ಕೈಗೆಟುಕುವ ಇಂಧನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧವಾಗಿದೆ ಎಂದು ಹೇಳಿದರು.
ಕಳೆದ ತಿಂಗಳು ಹರ್ದೀಪ್ ಸಿಂಗ್ ಪುರಿ ಸಂಸತ್ತಿನಲ್ಲಿ ಭಾರತದ ಕಾರ್ಯಾಚರಿಸುತ್ತಿರುವ ನಿಕ್ಷೇಪಗಳು ಸೇರಿ ತೈಲ ಮಾರುಕಟ್ಟೆ ಕಂಪನಿಗಳಲ್ಲಿರುವ ನಿಕ್ಷೇಪಗಳು ಸೇರಿ ಭಾರತದಲ್ಲಿ 74 ರಿಂದ 90 ದಿನಗಳವರೆಗೆ ಬಳಕೆಗೆ ತೈಲ ಸಂಗ್ರಹ ಇರಬಹುದು ಎಂದು ಹೇಳಿದರು.
ಆದರೂ, ಇರಾನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಘರ್ಷ ಈ ಸಮಯದಲ್ಲಿ ನಿಲ್ಲುವ ಯಾವುದೇ ಲಕ್ಷಣಗಳಿಲ್ಲದ್ದರಿಂದ ಸರ್ಕಾರವೂ ವಿಶ್ವದ ಮೂರನೇ ಅತಿದೊಡ್ಡ ತೈಲ ಬಳಕೆದಾರ ರಾಷ್ಟ್ರಕ್ಕಾಗಿ ಯೋಜನೆ ರೂಪಿಸಲು ಆರಂಭಿಸಿದೆ.
ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ್ದು, ಇಲ್ಲಿ ಹಾದುಹೋಗಲು ಪ್ರಯತ್ನಿಸುವ ಯಾವುದೇ ಹಡಗಿಗೂ ಬೆಂಕಿ ಹಾಕಲಾಗುವುದು ಇರಾನ್‌ನ ಆರ್‌ಜಿಸಿ ಕಮಾಂಡರ್ ಸೋಮವಾರ ಘೋಷಿಸಿದ್ದರು. ಇದು ಭಾರತದ ತೈಲ ಪೂರೈಕೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಈ ವಿಷಯದಲ್ಲಿ ಭಾರತವನ್ನು ಅಸಹಾಯಕ ರಾಷ್ಟ್ರವೆಂದು ನೋಡಲಾಗುತ್ತಿದೆ ಎಂದು ಕೆಲ ವಿಶ್ಲೇಷಕರು ತಿಳಿಸಿದ್ದಾರೆ.
ಇತ್ತ ಚೀನಾವು ಅಪಾರ ಪ್ರಮಾಣದ ನಿಕ್ಷೇಪಗಳನ್ನು ಹೊಂದಿರುವುದರಿಂದ ಇದು ವಿಶೇಷವಾಗಿ ನಿಜವಾಗಿದೆ. ಸರಕು ಸಂಶೋಧನಾ ಗುಂಪಿನ ಐಸಿಐಎಸ್‌ನ ಇಂಧನ ಮತ್ತು ಸಂಸ್ಕರಣಾ ಘಟಕದ ನಿರ್ದೇಶಕ ಅಜಯ್ ಪರ್ಮಾರ್, ಚೀನಾವು ಆರು ತಿಂಗಳ ತೈಲ ಸಂಗ್ರಹವನ್ನು ಹೊಂದಿದೆ ಎಂದು ಹೇಳಿದ್ದಾರೆ
ಒಟ್ಟಾರೆಯಾಗಿ ಏಷ್ಯಾಕ್ಕೆ ಅಪಾಯಗಳು ನೇರವಾಗಿವೆ. ಚೀನಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ತೈವಾನ್ ಸೇರಿದಂತೆ ಹಲವಾರು ಪ್ರಮುಖ ಆರ್ಥಿಕತೆಗಳು ಮಧ್ಯಪ್ರಾಚ್ಯದ ತೈಲವನ್ನು ಹೆಚ್ಚಾಗಿ ಅವಲಂಬಿಸಿವೆ. ಈ ಪೂರೈಕೆಯಲ್ಲಿನ ಹೊಡೆತವು ನಿರ್ಣಾಯಕ ಸೆಮಿಕಂಡಕ್ಟರ್ ಉದ್ಯಮ ಸೇರಿದಂತೆ ಜಾಗತಿಕ ಪೂರೈಕೆ ಸರಪಳಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ತೈವಾನ್‌ನ ಕಾರ್ಖಾನೆಗಳು ಸ್ಮಾರ್ಟ್‌ಫೋನ್‌ಗಳು, ವಿದ್ಯುತ್ ವಾಹನಗಳು ಮತ್ತು ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳಲ್ಲಿ ಬಳಸಲಾಗುವ ವಿಶ್ವದ ಹೆಚ್ಚಿನ ಮುಂದುವರಿದ ಚಿಪ್‌ಗಳನ್ನು ಉತ್ಪಾದಿಸುತ್ತವೆ. ಈ ಸೌಲಭ್ಯಗಳು ಸ್ಥಿರವಾದ ವಿದ್ಯುತ್ ಸರಬರಾಜುಗಳನ್ನು ಅವಲಂಬಿಸಿವೆ. ಬ್ಯಾಕಪ್ ಜನರೇಟರ್‌ಗಳು ದೀರ್ಘಾವಧಿಯ ಬಿಕ್ಕಟ್ಟುಗಳಿಗೆ ವಿನ್ಯಾಸಗೊಳಿಸದ ಅಲ್ಪಾವಧಿಯ ಪರಿಹಾರವಾಗಿದೆ.
Scroll to load tweet…