
ಬೆಂಗಳೂರಿನಲ್ಲಿ ಜಾರಿಗೆ ತಂದಿರುವ ಹೊಸ ‘ಪ್ರೀಮಿಯಂ ಎಫ್ಎಆರ್’ ಮತ್ತು ‘ಟಿಡಿಆರ್’ ನೀತಿಗೆ ವಿರೋಧ ವ್ಯಕ್ತವಾಗಿದೆ. ಇದು ಡೆವಲಪರ್ಗಳಿಗೆ ಮಾತ್ರ ಲಾಭದಾಯಕವಾಗಿದ್ದು, ಭೂಮಾಲೀಕರಿಗೆ ಅನ್ಯಾಯ ಮಾಡುತ್ತದೆ ಎಂದು ಆರೋಪಿಸಿ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಲಾಗಿದೆ.
ವರದಿ- ನಂದೀಶ್ ಮಲ್ಲೇನಹಳ್ಳಿ,ಏಷ್ಯಾನೆಟ್ ಸುವರ್ಣ ನ್ಯೂಸ್ ಬೆಂಗಳೂರು
ಬೆಂಗಳೂರು (ಮಾ.3): ನಗರಾಭಿವೃದ್ಧಿ ಇಲಾಖೆ ಫೆ.5ರಂದು ಹೊಸದಾಗಿ ‘ಪ್ರೀಮಿಯಂ ನೆಲ ವಿಸ್ತೀರ್ಣ ಅನುಪಾತ’ (ಎಫ್ಎಆರ್) ನೀತಿ ಹೊರಡಿಸಿದ್ದು, ಸಾರ್ವಜನಿಕರ ವಲಯದಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಮಾಹಿತಿ ಹಕ್ಕು ಅಧ್ಯಯನ ಕೇಂದ್ರ ಅಧ್ಯಕ್ಷ ಬಿ.ಎಚ್.ವೀರೇಶ್ ಎಂಬುವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಮತ್ತು ಬೆಂಗಳೂರು ನಗರ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್, ಗ್ರೇಟರ್ ಬೆಂಗಳೂರು ಮುಖ್ಯ ಆಯುಕ್ತ ಎಂ. ಮಹೇಶ್ವರರಾವ್, ಜಿಬಿಎ ಮುಖ್ಯ ಯೋಜನೆ ಮುಖ್ಯಸ್ಥರಿಗೆ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆಯುಕ್ತ ಮೇಜರ್ ಮಣ್ಣಿವಣ್ಣನ್ ಅವರಿಗೆ ದೂರು ನೀಡಿದ್ದಾರೆ.
‘ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳು (ಟಿಡಿಆರ್) ಮತ್ತು ‘ಪ್ರೀಮಿಯಂ ಎಫ್ಎಆರ್ ನೀತಿಗಳ ಕುರಿತು ಉಂಟಾಗಿರುವ ಗೊಂದಲವನ್ನು ಸಮಗ್ರವಾಗಿ ಪರಿಶೀಲಿಸಿ ನಿವಾರಿಸಬೇಕು ಎಂದು ಕೊಟ್ಟಿರುವ ದೂರಿನಲ್ಲಿ ಒತ್ತಾಯಿಸಿದ್ದಾರೆ. ಭೂಮಾಲೀಕರು ಬದಲು ಡೆವಲಪರ್ಗಳಿಗೆ ಮಾತ್ರ ಲಾಭ ಅನುಕೂಲವಾಗಲಿದೆ. ಈ ನೀತಿಯಿಂದ ಕಟ್ಟಡ ನಿರ್ಮಾಣ ಮಾಡುತ್ತಿರುವವರು ಮತ್ತು ಕಟ್ಟಡ ನಿರ್ಮಿಸುವವರು, ಸ್ಥಳಿಯ ಯೋಜನಾ ಪ್ರಾಧಿಕಾರದಿಂದ ಶುಲ್ಕ ಪಾವತಿಸಿ ಪ್ರೀಮಿಯಂ ಎಫ್ಎಆರ್ ಪಡೆದು ಹೆಚ್ಚುವರಿ ಕಟ್ಟಡ ನಿರ್ಮಿಸಿಕೊಳ್ಳುತ್ತಾರೆ. 12 ಮೀಟರ್ನಿಂದ 18 ಮೀಟರ್ ಅಗಲದ ರಸ್ತೆ ಹೊಂದಿರುವ ಕಟ್ಟಡಗಳಿಗೆ ಶೇ.40 ಮತ್ತು 18 ಮೀಟರ್ಗಿಂತ ಅಧಿಕ ಅಗಲ ಹೊಂದಿರುವ ಕಟ್ಟಡಗಳು ಶೇ.60 ಗರಿಷ್ಠ ಪ್ರೀಮಿಯಂ ಎಫ್ಎಆರ್ ಪಡೆಯಬಹುದು ಎಂದು ನಿಯಮದಲ್ಲಿ ಉಲ್ಲೇಖಿಸಲಾಗಿದೆ. ಇದು ರಾಷ್ಟ್ರೀಯ ನಗರ ಯೋಜನೆ ಮಾರ್ಗಸೂಚಿ ಉಲ್ಲಂಘನೆಯಾಗಿದೆ.ಪ್ರೀಮಿಯಂ ಶುಲ್ಕದಿಂದ ಸರ್ಕಾರಕ್ಕೆ ತಕ್ಕಮಟ್ಟಿಗೆ ಆದಾಯ ಬರಬಹುದು. ಆದರೆ, ಎತ್ತರದ ಕಟ್ಟಡಗಳ ನಿರ್ಮಾಣದಿಂದ ಭವಿಷ್ಯದಲ್ಲಿ ರಸ್ತೆ, ಒಳಚರಂಡಿ, ಕುಡಿಯುವ ನೀರು ಮತ್ತು ಪರಿಸರ ಸೇರಿ ಇತರ ಮೂಲಸೌಕರ್ಯ ಕಲ್ಪಿಸುವ ಹಲವು ಸವಾಲು ಸರ್ಕಾರ ಎದುರಾಗಲಿವೆ. ಇದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಆರ್ಥಿಕ ಹೊರೆ ಬೀಳಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಡೆವಲಪರ್ಗಳಿಗೆ ಮಾತ್ರ ಲಾಭ
ಬೆಂಗಳೂರಿನಲ್ಲಿ 2010ರ ನಂತರ ಗಗನಚುಂಬಿ ಕಟ್ಟಡಗಳ ನಿರ್ಮಾಣ ವೇಗ ಪಡೆದಿದೆ. ಇತ್ತೀಚಿನ ವರ್ಷಗಳಲ್ಲಿ ದಿನದಿಂದ ದಿನಕ್ಕೆ ದೇಶದ ವಿವಿಧ ಭಾಗಗಳಿಂದ ಸಿಲಿಕಾನ್ ಸಿಟಿಗೆ ಬರುತ್ತಿರುವ ವಲಸಿಗರ ಸಂಖ್ಯೆ ಮೀತಿಮೀರಿದ್ದು, ಪ್ರತಿ ವರ್ಷವೂ ಜನಸಂಖ್ಯೆ ಪ್ರಮಾಣ ಹೆಚ್ಚಳವಾಗುತ್ತಿದೆ. ಹಲವು ಮೂಲಸೌಕರ್ಯ ಕೊರತೆಯಿಂದ ನಗರ ನಲುಗಿದೆ. ಇದರ ನಡುವೆ ಸರ್ಕಾರ, ಪ್ರತಿ ವರ್ಷ ಸಾವಿರಾರು ಕೋಟಿ ರೂ. ವೆಚ್ಚದ ಮೂಲಸೌಕರ್ಯ ಕಾಮಗಾರಿಗಳು ನಡೆಸುತ್ತಿದೆ. ಆದರೂ, ನಗರದಲ್ಲಿ ಸಮರ್ಪಕವಾಗಿ ಮೂಲಸೌಕರ್ಯ ಒದಗಿಸಲು ಸಾಧ್ಯವಾಗದಂತಾಗಿದೆ. ಹೀಗಿರುವಾಗ, ಇನ್ನಷ್ಟು ಹೈರೈಸಿಂಗ್ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಕೊಟ್ಟರೆ ಆ ಪ್ರದೇಶದಲ್ಲಿ ನೀರು, ಒಳಚರಂಡಿ, ರಸ್ತೆ ಸೇರಿ ಇತರ ಮೂಲಸೌಕರ್ಯ ಕಲ್ಪಿಸುವುದು ಸವಾಲಾಗಲಿದೆ. ಕಟ್ಟಡ ದಟ್ಟಣೆ ಹೆಚ್ಚಾದರೆ ಮಳೆನೀರು ಸಂಗ್ರಹ ಮತ್ತು ನೆರೆ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಭವಿಷ್ಯದಲ್ಲಿ ದೊಡ್ಡ ಯೋಜನೆಗಳಿಗೆ, ಸಮಾಜಕ್ಕೆ ಹಾನಿಕಾರಕವಾಗಲಿದೆ. ನಗರ ಪರಿವರ್ತನೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. 9 ಮೀಟರ್ ಅಗಲದ ರಸ್ತೆಗಳಲ್ಲಿ ಎತ್ತರ ಕಟ್ಟಡಗಳಿಂದ ಸಂಚಾರಕ್ಕೆ ತೊಂದರೆಯಾಗಲಿದೆ. ಕಟ್ಟಡ ಯೋಜನೆ ಲಾಭ ಡೆವಲಪರ್ಗಳಿಗೆ ಮಾತ್ರ ಸಿಗುತ್ತದೆ. ಶಾಲೆ, ಆಸ್ಪತ್ರೆ, ಸಾರ್ವಜನಿಕ ಉದ್ಯಾನಗಳಿಗೆ ಸ್ಥಳ ದೊರೆಯುವುದಿಲ್ಲ. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಲ್ಲಿ ತಮ್ಮ ಜಮೀನು ಬಿಟ್ಟುಕೊಟ್ಟು ಟಿಡಿಆರ್ ಪ್ರಮಾಣಪತ್ರ ಪಡೆಯುವ ಭೂಮಾಲೀಕರ ಹಕ್ಕಿಗೆ ಧಕ್ಕೆಯಾಗಲಿದೆ.
ಏನೇನು ಉಲ್ಲಂಘನೆ
* ಟಿಡಿಆರ್ ಮತ್ತು ಪ್ರೀಮಿಯಂ ಎಫ್ಎಆರ್ ಸಂಯೋಜನೆಯ ಮೂಲಕ ಶೇ.60ರವರೆಗೆ ಹೆಚ್ಚುವರಿ ಎಫ್ಎಆರ್ ನೀಡುವ ನಿರ್ಧಾರ ಕೈಗೊಳ್ಳುವ ಮೊದಲು ಸಂಬಂಧಿತ ಪ್ರದೇಶಗಳನ್ನು ‘ಪರಿಣಾಮ ವಲಯ’ (Impact Zone) ಎಂದು ಗುರುತಿಸಲ್ಲ.
* ಟ್ರಾಫಿಕ್ ದಟ್ಟಣೆ, ನೀರು ಸರಬರಾಜು ಸಾಮರ್ಥ್ಯ, ಒಳಚರಂಡಿ ವ್ಯವಸ್ಥೆ, ಅಗ್ನಿಶಾಮಕ ಪ್ರವೇಶ ಹಾಗೂ ಪರಿಸರ ಪರಿಣಾಮಗಳ ಕುರಿತು ಸಮಗ್ರ ಅಧ್ಯಯನ ನಡೆಸಿಲ್ಲ
* ಈ ನೀತಿಗೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ವ್ಯಾಜ್ಯಗಳು ನಡೆಯುತ್ತಿದೆ. 2026ರ ಜ.12ರಂದು 1 ಸುಪ್ರೀಂಕೋರ್ಟ್ ಮಧ್ಯಂತರ ನಿರ್ದೇಶನ ನೀಡಿದೆ. ಆದಾಗ್ಯೂ, ಆ ನಿರ್ದೇಶನಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರದ ಸ್ಪಷ್ಟ ನಿಲುವು ಅಥವಾ ಮೇಲ್ವಿಚಾರಣಾ ವ್ಯವಸ್ಥೆ ಪ್ರಕಟಿಸಿಲ್ಲ. ಪ್ರೀಮಿಯಂ ಎಫ್ಎಆರ್ ಪರಿಚಯದ ನಂತರ, ಭೂಸ್ವಾಧೀನಗೊಂಡ ಭೂಮಾಲೀಕರಿಗೆ ಪರಿಹಾರವಾಗಿ ನೀಡಲಾಗಿರುವ ಟಿಡಿಆರ್ ಪ್ರಮಾಣಪತ್ರಗಳ ಮಾರುಕಟ್ಟೆ ಮೌಲ್ಯ ಕುಸಿದಿರುವುದು ತಿಳಿದುಬರುತ್ತಿದೆ.
* ಈ ಕುರಿತು ನಗರಾಭಿವೃದ್ಧಿ ಇಲಾಖೆಯ ಸಮಗ್ರ ಪರಿಶೀಲನೆ ನಡೆಸಿಲ್ಲ. ಟಿಡಿಆರ್ ಮೌಲ್ಯ ಕುಸಿದಲ್ಲಿ, ಭೂಮಾಲೀಕರಿಗೆ ಮರುಖರೀದಿ (buy-back) ವ್ಯವಸ್ಥೆ ಅಥವಾ ಕನಿಷ್ಠ ಮೌಲ್ಯ ಭರವಸೆ ನೀಡುವ ಯಾವುದೇ ವ್ಯವಸ್ಥೆಯೂ ಜಾರಿಗೆ ಬಂದಿಲ್ಲ. ಇದಲ್ಲದೆ, ಟಿಡಿಆರ್ ಸ್ವೀಕರಿಸಿದವರಿಗೆ ತೆರಿಗೆ ಸೌಲಭ್ಯಗಳ ಕುರಿತು ಸ್ಪಷ್ಟ ಮಾರ್ಗಸೂಚಿ ಇಲ್ಲ.ನಗದು ಪರಿಹಾರದ ಬದಲಿಗೆ ಟಿಡಿಆರ್ ಸ್ವೀಕರಿಸಲು ಭೂಮಾಲೀಕರನ್ನು ಪ್ರೇರೇಪಿಸಲಾಗುತ್ತಿದೆ. ಈ ಬಗ್ಗೆ ಆರ್ಥಿಕ ಹಾಗೂ ಕಾನೂನು ಪರಿಣಾಮಗಳ ಕುರಿತು ಸಮರ್ಪಕ ಭದ್ರತಾ ವ್ಯವಸ್ಥೆ ರೂಪಿಸಲಾಗಿಲ್ಲ.
* ಮೇಲ್ಕಂಡ ಎಲ್ಲ ವಿಷಯಗಳನ್ನು ಸಮಗ್ರವಾಗಿ ಪರಿಶೀಲಿಸಿ, ಸ್ಪಷ್ಟ, ಸಮತೋಲನಾತ್ಮಕ ನೀತಿ ರೂಪಿಸುವ ಅಗತ್ಯವಿದೆ.