Bengaluru: ಮೆಜೆಸ್ಟಿಕ್‌ನಿಂದ ಕತ್ರಿಗುಪ್ಪೆಗೆ ₹700 ಕೇಳಿದ ಆಟೋ ಡ್ರೈವರ್‌ಗೆ ಬಿಸಿ ಬಿಸಿ ಕಜ್ಜಾಯ ಕೊಟ್ಟ ಪೊಲೀಸರು! | Bengaluru Majestic Auto Extortion Upparpet Police Take Action And Fined To Drivers Sat

Bengaluru: ಮೆಜೆಸ್ಟಿಕ್‌ನಿಂದ ಕತ್ರಿಗುಪ್ಪೆಗೆ ₹700 ಕೇಳಿದ ಆಟೋ ಡ್ರೈವರ್‌ಗೆ ಬಿಸಿ ಬಿಸಿ ಕಜ್ಜಾಯ ಕೊಟ್ಟ ಪೊಲೀಸರು! | Bengaluru Majestic Auto Extortion Upparpet Police Take Action And Fined To Drivers Sat



Bengaluru: ಮೆಜೆಸ್ಟಿಕ್‌ನಿಂದ ಕತ್ರಿಗುಪ್ಪೆಗೆ ₹700 ಕೇಳಿದ ಆಟೋ ಡ್ರೈವರ್‌ಗೆ ಬಿಸಿ ಬಿಸಿ ಕಜ್ಜಾಯ ಕೊಟ್ಟ ಪೊಲೀಸರು! | Bengaluru Majestic Auto Extortion Upparpet Police Take Action And Fined To Drivers Sat

ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ ಆಟೋ ಚಾಲಕ 700 ರೂ. ಕೇಳಿದ ವಿಡಿಯೋ ವೈರಲ್ ಆದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆದರೆ, ಇದು ಕೇವಲ ಸಾಂಕೇತಿಕ ಕ್ರಮವಾಗಿದ್ದು, ಮೆಜೆಸ್ಟಿಕ್‌ನಲ್ಲಿ ಆಟೋ ಚಾಲಕರ ಸುಲಿಗೆ ಮತ್ತು ಮೀಟರ್ ಹಾಕದಿರುವ ಸಮಸ್ಯೆ ಬಗ್ಗೆ ಜನ ಟೀಕಿಸಿದ್ದಾರೆ.

ಬೆಂಗಳೂರು (ಮಾ.03): ಸಿಲಿಕಾನ್ ಸಿಟಿಯ ಹೃದಯಭಾಗ ಮೆಜೆಸ್ಟಿಕ್‌ನಲ್ಲಿ ಆಟೋ ಚಾಲಕರ ಸುಲಿಗೆ ಎಂಬುದು ಅಸಹನೀಯ ಮಟ್ಟಕ್ಕೆ ತಲುಪಿದೆ. ಇತ್ತೀಚೆಗೆ ಸೋನು ಸೌಮ್ಯ ಗೌಡ ಎಂಬ ಮಹಿಳಾ ಪ್ರಯಾಣಿಕರು ಮೆಜೆಸ್ಟಿಕ್‌ನಿಂದ ಕತ್ರಿಗುಪ್ಪೆಗೆ ತೆರಳಲು ಆಟೋ ಕೇಳಿದಾಗ, ಚಾಲಕ ಬರೋಬ್ಬರಿ 700 ರೂಪಾಯಿ ನೀಡುವಂತೆ ಪಟ್ಟು ಹಿಡಿದಿದ್ದ ವಿಡಿಯೋ ಇಡೀ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಎಕ್ಸ್ (ಟ್ವಿಟರ್) ಮೂಲಕ ಪ್ರತಿಕ್ರಿಯಿಸಿದ್ದು, ‘ಹೆಚ್ಚಿನ ಬಾಡಿಗೆ ಕೇಳಿದ ಚಾಲಕರನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಆದರೆ, ಪೊಲೀಸರ ಈ ಪೋಸ್ಟ್‌ಗೆ ನೆಟ್ಟಿಗರು ಆಕ್ರೋಶದ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಕೇವಲ ಇಬ್ಬರ ಮೇಲೆ ಕ್ರಮ ಕೈಗೊಂಡರೆ ಬೆಂಗಳೂರಿನ ಆಟೋ ಮಾಫಿಯಾ ನಿಲ್ಲುತ್ತದೆಯೇ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ವೈರಲ್ ವಿಡಿಯೋ ಹಿನ್ನೆಲೆ: ಏನಿದು ಘಟನೆ?

ಫೆಬ್ರವರಿ 28ರ ಮುಂಜಾನೆ 5:15ಕ್ಕೆ ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿತ್ತು. ಪ್ರಯಾಣಿಕರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡ ಚಾಲಕ, ಕತ್ರಿಗುಪ್ಪೆಗೆ 700 ರೂಪಾಯಿ ಕೇಳಿದ್ದನು. ಅಷ್ಟು ಹಣ ಕೊಡಲಾಗದು ಎಂದು ಮಹಿಳೆ ಆಟೋದಿಂದ ಕೆಳಗಿಳಿದಾಗ, ‘ನೀವು ಆಟೋದಲ್ಲಿ ಕುಳಿತು ಬಹಳ ಸಮಯವಾಗಿದೆ ಮೇಡಂ, ಅಷ್ಟು ಕೊಡಲೇಬೇಕು’ ಎಂದು ಏರುಧ್ವನಿಯಲ್ಲಿ ಕಿರುಕುಳ ನೀಡಿದ್ದನು. ಈ ದೃಶ್ಯವನ್ನು ಮಹಿಳೆ ಮೊಬೈಲ್‌ನಲ್ಲಿ ಸೆರೆಹಿಡಿದು ಜಾಲತಾಣಕ್ಕೆ ಅಪ್‌ಲೋಡ್ ಮಾಡಿದ್ದರು.

ಪೊಲೀಸರ ವಿರುದ್ಧ ಕಿಡಿಕಾರಿದ ಸಾರ್ವಜನಿಕರು:

ಪೊಲೀಸರು ಕ್ರಮ ಜರುಗಿಸಿರುವುದಾಗಿ ಹೇಳಿದ್ದಕ್ಕೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ವೈರಲ್ ವಿಡಿಯೋ ಬಂದರಷ್ಟೇ ಕ್ರಮವೇಕೆ? ಎಂದು ಪ್ರಶ್ನೆ ಮಾಡಿದ್ದಾರೆ. ಕೇವಲ ಇಬ್ಬರು ಚಾಲಕರ ಮೇಲೆ ದಂಡ ಹಾಕಿದರೆ ಸಾಕಾ? ಮೆಜೆಸ್ಟಿಕ್‌ನಲ್ಲಿ ನಿಲ್ಲುವ ಬಹುತೇಕ ಆಟೋ ಚಾಲಕರು ಮೀಟರ್ ಹಾಕದೆ ಡಬಲ್, ತ್ರಿಬಲ್ ಹಣ ಕೇಳುತ್ತಾರೆ. ನೀವು ಸಿವಿಲ್ ಡ್ರೆಸ್‌ನಲ್ಲಿ ಅಲ್ಲಿ ನಿಂತು ನೋಡಿ, ಎಲ್ಲರೂ ಸಿಕ್ಕಿಬೀಳುತ್ತಾರೆ. ಯಾರಾದರೂ ವಿಡಿಯೋ ಮಾಡಿ ವೈರಲ್ ಮಾಡಿದಾಗ ಮಾತ್ರ ನೀವು ಎಚ್ಚರಗೊಳ್ಳುವುದೇಕೆ?’ ಎಂದು ಬಳಕೆದಾರರೊಬ್ಬರು ನೇರವಾಗಿ ಪ್ರಶ್ನಿಸಿದ್ದಾರೆ.

ಅಘೋಷಿತ ನಿಯಮ ‘ಮೀಟರ್ + ₹50’: ‘2023ರಿಂದ ಬೆಂಗಳೂರಿನಲ್ಲಿ ಒಂದು ಅಘೋಷಿತ ನಿಯಮ ಜಾರಿಯಲ್ಲಿದೆ. ಮೀಟರ್ ಹಾಕಿದರೂ ಅದರ ಮೇಲೆ ₹30 ಅಥವಾ ₹50 ಹೆಚ್ಚುವರಿ ಹಣ ಕೇಳುತ್ತಾರೆ. ಇದನ್ನ ಕೇಳುವವರೇ ಇಲ್ಲದಂತಾಗಿದೆ. ಒಂದು ಕಾಲದಲ್ಲಿ ಮೀಟರ್ ಕೇಳದೆಯೇ ಹಾಕುತ್ತಿದ್ದ ಆಟೋ ಚಾಲಕರಿದ್ದರು. ಈಗ ಮೆಜೆಸ್ಟಿಕ್ ಸುತ್ತಮುತ್ತ ಇರುವವರು ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ಇವರಿಂದಾಗಿ ಪ್ರಾಮಾಣಿಕವಾಗಿ ದುಡಿಯುವ ಚಾಲಕರಿಗೂ ಕೆಟ್ಟ ಹೆಸರು ಬರುತ್ತಿದೆ’ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

Scroll to load tweet…

ರಾತ್ರಿ ವೇಳೆ ಮೆಜೆಸ್ಟಿಕ್ ಅಸುರಕ್ಷಿತವೇ?

ಕೇವಲ ಹಣದ ಸುಲಿಗೆ ಮಾತ್ರವಲ್ಲದೆ, ಭದ್ರತೆಯ ಬಗ್ಗೆಯೂ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ‘ರಾತ್ರಿ ವೇಳೆ ಮೆಜೆಸ್ಟಿಕ್ ಅಂಡರ್ ಪಾಸ್‌ಗಳನ್ನು ಬಂದ್ ಮಾಡಲಾಗುತ್ತದೆ. ರೈಲು ಅಥವಾ ಬಸ್ ಹಿಡಿಯಲು ರಸ್ತೆಯ ಮೇಲೆ ಹೋದರೆ ಕಿಡಿಗೇಡಿಗಳ ಕಾಟ ಹೆಚ್ಚಿರುತ್ತದೆ. ಒಂಟಿ ಮಹಿಳೆಯರು ಮತ್ತು ಪುರುಷರು ಓಡಾಡಲು ಭಯಪಡುವ ಸ್ಥಿತಿ ಇದೆ. ಅಂತಹ ಸಮಯದಲ್ಲಿ ಗಸ್ತು ತಿರುಗುವ ಪೊಲೀಸರು ಎಲ್ಲಿರುತ್ತಾರೆ?’ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಒಟ್ಟಾರೆಯಾಗಿ, ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಆಟೋ ಚಾಲಕರ ಹಾವಳಿಗೆ ಬ್ರೇಕ್ ಹಾಕಲು ಪೊಲೀಸರು ಮತ್ತು ಆರ್‌ಟಿಒ (RTO) ಅಧಿಕಾರಿಗಳು ಕೇವಲ ಸಾಂಕೇತಿಕ ಕ್ರಮಗಳ ಬದಲು, ನಿರಂತರ ಕಾರ್ಯಾಚರಣೆ ನಡೆಸಬೇಕು ಎಂಬುದು ಬೆಂಗಳೂರಿಗರ ಒಕ್ಕೊರಲ ಆಗ್ರಹವಾಗಿದೆ.



Source link

Leave a Reply

Your email address will not be published. Required fields are marked *