
ಇರಾನ್ ಧರ್ಮಗುರು ಅಯತೊಲ್ಲಾ ಅಲಿ ಖಮೇನಿ ಅವರ ಸಾವಿಗೆ ಸಂಬಂಧಿಸಿದಂತೆ ಇನ್‌ಸ್ಟಾಗ್ರಾಂ ಸ್ಟೋರಿ ಹಾಕಿದ್ದ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿದೆ. ಹಲ್ಲೆಗೊಳಗಾದ ಚಂದ್ರಶೇಖರ ಎಂಬ ಯುವಕ, ಜೀವ ಭಯದಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕೊಪ್ಪಳ (ಮಾ.03): ಇರಾನ್‌ನ ಸರ್ವೋಚ್ಚ ಧರ್ಮಗುರು ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ಮುಸ್ಲಿಂ ಸಂಘಟನೆಗಳು ಭಾರೀ ಪ್ರತಿಭಟನೆ ಮಾಡಿ ಯುಎಸ್ ಹಾಗೂ ಇಸ್ರೇಲ್ ಮೇಲೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಆಗ್ರಹಿಸಿವೆ. ಆದರೆ, ಗಂಗಾವತಿಯಲ್ಲಿ ಹಿಂದೂ ಯುವಕನೊಬ್ಬ ಕಾಶ್ಮೀರದ ಪುಲ್ವಾಮಾದಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ಮಾಡಿದಾಗ ಏಕೆ ಖಂಡಿಸಲಿಲ್ಲ, ಖಮೇನಿ ಸಾಔಇಗೆ ಇಷ್ಟೇಕೆ ಖಂಡನೆ ಮಾಡುತ್ತಿದ್ದಾರೆ ಎಂಬ ಅರ್ಥದ ವಿಡಿಯೋ ಶೇರ್ ಮಾಡಿಕೊಂಡಿದ್ದಾನೆ. ಇದನ್ನು ಖಂಡಿಸಿ ಮುಸ್ಲಿಂದ ಯುವಕರ ಗುಂಪೊಂದು ಆತನ ಮೇಲೆ ಹಲ್ಲೆ ಮಾಡಿದೆ.
ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸ್ಟೋರಿ ಹಾಕಿದ್ದನ್ನು ಖಂಡಿಸಿ, ಹಿಂದೂ ಯುವಕನೋರ್ವನ ಮೇಲೆ ಮುಸ್ಲಿಂ ಯುವಕರ ಗುಂಪೊಂದು ಭೀಕರವಾಗಿ ಹಲ್ಲೆ ನಡೆಸಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದಿದೆ. ಘಟನೆಯಿಂದ ನಗರದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸಂತ್ರಸ್ತ ಯುವಕ ಪೊಲೀಸರ ಮೊರೆ ಹೋಗಿದ್ದಾನೆ.
ಘಟನೆಯ ವಿವರ:
ಗಂಗಾವತಿ ನಗರದ ನಿವಾಸಿ ಚಂದ್ರಶೇಖರ ಎಂಬ ಯುವಕ ಹಲ್ಲೆಗೊಳಗಾದವರು. ಚಂದ್ರಶೇಖರ ವೃತ್ತಿಯಲ್ಲಿ ಖರ್ಜೂರ ವ್ಯಾಪಾರಿಯಾಗಿದ್ದು, ನಗರದ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ನಡೆದ ಇರಾನ್ ಧರ್ಮಗುರು ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಕುರಿತಾದ ಸುದ್ದಿಯನ್ನು ಚಂದ್ರಶೇಖರ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿಯಾಗಿ ಹಂಚಿಕೊಂಡಿದ್ದರು ಎನ್ನಲಾಗಿದೆ. ಚಂದ್ರಶೇಖರ ಎಂದಿನಂತೆ ಖರ್ಜೂರ ವ್ಯಾಪಾರ ಮಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಐದಾರು ಜನ ಮುಸ್ಲಿಂ ಯುವಕರ ತಂಡ ಏಕಾಏಕಿ ಗಲಾಟೆ ಆರಂಭಿಸಿದೆ. ‘ನಮ್ಮ ಸಮಾಜದ ಧರ್ಮಗುರುಗಳ ಬಗ್ಗೆ ಇಂತಹ ಸ್ಟೋರಿ ಹಾಕಿ ನಮಗೆ ಮಾನಸಿಕವಾಗಿ ನೋವುಂಟು ಮಾಡಿದ್ದೀಯಾ’ ಎಂದು ಕಿಡಿಕಾರಿದ ಪುಂಡರು, ಸಾರ್ವಜನಿಕವಾಗಿ ಚಂದ್ರಶೇಖರನ ಮೇಲೆ ಹಲ್ಲೆ ನಡೆಸಿದ್ದಾರೆ.
ಮನೆ ನುಗ್ಗಿ ಹೊಡೆಯುವ ಬೆದರಿಕೆ:
ಕೇವಲ ರಸ್ತೆಯಲ್ಲಿ ಹಲ್ಲೆ ಮಾಡಿದ್ದಷ್ಟೇ ಅಲ್ಲದೆ, ‘ಇನ್ನೊಮ್ಮೆ ಇಂತಹ ಪೋಸ್ಟ್ ಹಾಕಿದರೆ ನಿನ್ನ ಮನೆಗೆ ನುಗ್ಗಿ ಹೊಡೆಯುತ್ತೇವೆ’ ಎಂದು ಆರೋಪಿಗಳು ಜೀವ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಘಟನೆಯಿಂದ ತೀವ್ರ ಭೀತಿಗೊಳಗಾದ ಚಂದ್ರಶೇಖರ, ತನಗೆ ಮತ್ತು ತನ್ನ ಕುಟುಂಬಕ್ಕೆ ಜೀವ ಭಯವಿದೆ ಎಂದು ಗಂಗಾವತಿ ನಗರ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ.
ಪೊಲೀಸ್ ತನಿಖೆ:
ಘಟನೆಗೆ ಸಂಬಂಧಿಸಿದಂತೆ ಗಂಗಾವತಿ ನಗರ ಪೊಲೀಸರು ಮಾಹಿತಿ ಸಂಗ್ರಹಿಸಿದ್ದು, ಹಲ್ಲೆ ನಡೆಸಿದ ಯುವಕರಿಗಾಗಿ ಶೋಧ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳ ವಿಚಾರವಾಗಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ. ಸದ್ಯ ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.