T20 World Cup 2026: ಫೈನಲ್‌ ಟಿಕೆಟ್‌ಗಾಗಿ ಇಂದು ಕಿವೀಸ್‌ vs ದಕ್ಷಿಣ ಆಫ್ರಿಕಾ ಹೈವೋಲ್ಟೇಜ್ ಮ್ಯಾಚ್ | South Africa Vs New Zealand Semi Final Who Will Reach T20 World Cup Final First Full Match Preview Kvn

T20 World Cup 2026: ಫೈನಲ್‌ ಟಿಕೆಟ್‌ಗಾಗಿ ಇಂದು ಕಿವೀಸ್‌ vs ದಕ್ಷಿಣ ಆಫ್ರಿಕಾ ಹೈವೋಲ್ಟೇಜ್ ಮ್ಯಾಚ್ | South Africa Vs New Zealand Semi Final Who Will Reach T20 World Cup Final First Full Match Preview Kvn



T20 World Cup 2026: ಫೈನಲ್‌ ಟಿಕೆಟ್‌ಗಾಗಿ ಇಂದು ಕಿವೀಸ್‌ vs ದಕ್ಷಿಣ ಆಫ್ರಿಕಾ ಹೈವೋಲ್ಟೇಜ್ ಮ್ಯಾಚ್ | South Africa Vs New Zealand Semi Final Who Will Reach T20 World Cup Final First Full Match Preview Kvn

ಟಿ20 ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ ತಂಡಗಳು ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ಸೆಣಸಲಿವೆ. ಬ್ಯಾಟರ್‌ಗಳ ಸ್ವರ್ಗವಾಗಿರುವ ಈ ಪಿಚ್‌ನಲ್ಲಿ, ಕಿವೀಸ್ ಬೌಲರ್‌ಗಳು ಹರಿಣಗಳ ಬಲಿಷ್ಠ ಬ್ಯಾಟಿಂಗ್ ಲೈನ್-ಅಪ್ ಅನ್ನು ಕಟ್ಟಿಹಾಕುವ ದೊಡ್ಡ ಸವಾಲಿದೆ.

ಕೋಲ್ಕತಾ: 20 ತಂಡಗಳೊಂದಿಗೆ ಕಳೆದ ತಿಂಗಳು ಆರಂಭಗೊಂಡ ಐಸಿಸಿ ಟಿ20 ವಿಶ್ವಕಪ್‌ನಲ್ಲೀಗ ಕೇವಲ 4 ತಂಡಗಳು ಉಳಿದುಕೊಂಡಿದ್ದು, ಬುಧವಾರ ರಾತ್ರಿ ವೇಳೆಗೆ ಫೈನಲ್‌ಗೇರುವ ಮೊದಲ ತಂಡ ಯಾವುದು ಎನ್ನುವುದು ನಿರ್ಧಾರವಾಗಲಿದೆ. ಇಲ್ಲಿನ ಈಡನ್‌ ಗಾರ್ಡನ್ಸ್‌ನಲ್ಲಿ ಮೊದಲ ಸೆಮಿಫೈನಲ್‌ ನಡೆಯಲಿದ್ದು, ಕಳೆದ ಆವೃತ್ತಿಯ ರನ್ನರ್‌-ಅಪ್‌ ದಕ್ಷಿಣ ಆಫ್ರಿಕಾ ಹಾಗೂ 2021ರ ರನ್ನರ್‌-ಅಪ್‌ ನ್ಯೂಜಿಲೆಂಡ್‌ ಸೆಣಸಲಿವೆ.

ಟೂರ್ನಿಯಲ್ಲಿ ಸತತ 7 ಗೆಲುವುಗಳೊಂದಿಗೆ ಅಜೇಯವಾಗಿ ಉಳಿದಿರುವ ದಕ್ಷಿಣ ಆಫ್ರಿಕಾ ಒಂದು ಕಡೆಯಾದರೆ, ಏಳು-ಬೀಳುಗಳೊಂದಿಗೆ ಸೆಮೀಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ನ್ಯೂಜಿಲೆಂಡ್‌ ಮತ್ತೊಂದು ಕಡೆ.

ಸೆಮೀಸ್‌ಗೆ ಎರಡೂ ತಂಡಗಳ ರಣತಂತ್ರ ಹೇಗಿರಬಹುದು ಎಂದು ನೋಡಿದಾಗ, ಕೆಲ ಪ್ರಮುಖ ಅಂಶಗಳು ಎದ್ದು ಕಾಣುತ್ತವೆ. ಮೇಲ್ನೋಟಕ್ಕೆ ನ್ಯೂಜಿಲೆಂಡ್‌ ಹೆಚ್ಚು ಪರಿಶ್ರಮ ವಹಿಸಬೇಕಾಗಬಹುದು ಎನ್ನುವಂತೆ ತೋರುತ್ತದೆ. ಏಕೆಂದರೆ, ಕಿವೀಸ್‌ ತಂಡದಲ್ಲಿ ಎಡಗೈ ವೇಗಿಗಳು ಹಾಗೂ ಮಿಸ್ಟ್ರಿ ಸ್ಪಿನ್ನರ್‌ಗಳ ಕೊರತೆ ಇದೆ. ದಕ್ಷಿಣ ಆಫ್ರಿಕಾದ ಬ್ಯಾಟಿಂಗ್‌ ಶೈಲಿಗೆ ಇದು ಹೇಳಿ ಮಾಡಿಸಿದಂತಿದೆ.

ಏಡನ್‌ ಮಾರ್ಕ್‌ರಮ್‌ ವಿರುದ್ಧ ಎಡಗೈ ಸ್ಪಿನ್ನರ್‌ ಅನ್ನು ದಾಳಿಗಿಳಿಸಿ ಅವರನ್ನು ನಿಯಂತ್ರಿಸಲು ಯತ್ನಿಸಿದರೆ, ಎಡಗೈ ಸ್ಪಿನ್ನರ್‌ಗಳನ್ನು ಚೆಂಡಾಡಬಲ್ಲ ಕ್ವಿಂಟನ್‌ ಡಿ ಕಾಕ್‌ ಹಾಗೂ ರ್‍ಯಾನ್‌ ರಿಕೆಲ್ಟನ್‌ ಇದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಮತ್ತೊಬ್ಬ ಸ್ಫೋಟಕ ಎಡಗೈ ದಾಂಡಿಗ ಡೇವಿಡ್‌ ಮಿಲ್ಲರ್‌ ಇದ್ದು, ಯಾವುದೇ ಬೌಲಿಂಗ್‌ ದಾಳಿಯನ್ನೂ ಸಲೀಸಾಗಿ ನೆಲಕಚ್ಚಿಸುವ ಸಾಮರ್ಥ್ಯ ಹೊಂದಿದ್ದಾರೆ. ಡೆವಾಲ್ಡ್‌ ಬ್ರೆವೆಸ್‌ ಹಾಗೂ ಟ್ರಿಸ್ಟನ್‌ ಸ್ಟಬ್ಸ್‌ ಎಷ್ಟು ಅಪಾಯಕಾರಿ ಬ್ಯಾಟರ್‌ಗಳು ಎನ್ನುವುದು ಕಿವೀಸ್‌ಗೆ ಗೊತ್ತಿಲ್ಲದ ವಿಚಾರವೇನಲ್ಲ. ಹೀಗಾಗಿ, ನ್ಯೂಜಿಲೆಂಡ್‌ ಮುಂದೆ ಏಕೈಕ ಆಯ್ಕೆ ಇರಲಿದ್ದು, ಅದು ಸತತವಾಗಿ ವಿಕೆಟ್‌ ಕಬಳಿಸುವುದು.

ಟಾಸ್‌ ನಿರ್ಣಾಯಕ: 

ಈಡನ್‌ ಗಾರ್ಡನ್ಸ್‌ ಬ್ಯಾಟರ್‌ಗಳ ಸ್ವರ್ಗ. ಇಲ್ಲಿ ಟಾಸ್‌ ಗೆಲ್ಲುವ ತಂಡ ಕಣ್ಮುಚ್ಚಿಕೊಂಡು ಚೇಸ್‌ ಮಾಡಲು ನಿರ್ಧರಿಸುತ್ತದೆ. ವಿಂಡೀಸ್‌ ನೀಡಿದ 196 ರನ್‌ ಗುರಿಯನ್ನು ಭಾರತ ಹೇಗೆ ನಿರಾಯಾಸವಾಗಿ ಬೆನ್ನತ್ತಿತು ಎನ್ನುವುದನ್ನು ನೋಡಿದ್ದೇವೆ. ಒಂದೆಡೆ ವಿಕೆಟ್‌ಗಳು ಬೀಳುತ್ತಿದ್ದರೂ, ಬ್ಯಾಟಿಂಗ್‌ ಸಂಪನ್ಮೂಲಗಳು ಇರುವ ವರೆಗೂ ಗೆಲ್ಲುವ ಸಾಧ್ಯತೆ ಇದ್ದೇ ಇರುತ್ತದೆ. ಹೀಗಾಗಿ, ಮೊದಲು ಬ್ಯಾಟ್‌ ಮಾಡುವ ತಂಡದ ಮೇಲೆ ಭಾರೀ ಒತ್ತಡ ಇರಲಿದೆ. ಅದರಲ್ಲೂ ನ್ಯೂಜಿಲೆಂಡ್‌ ಮೊದಲು ಬ್ಯಾಟ್‌ ಮಾಡಿದರೆ, ತಂಡದ ಬೌಲಿಂಗ್‌ ದೌರ್ಬಲ್ಯಗಳನ್ನು ಗಮನದಲ್ಲಿರಿಸಿದಾಗ ಕನಿಷ್ಠ 225-230 ರನ್‌ ಗಳಿಸಲೇಬೇಕು.

ಲಾಕಿ ಪ್ರಮುಖ ಅಸ್ತ್ರ: 

ನ್ಯೂಜಿಲೆಂಡ್‌ ಪರ ವೇಗಿ ಲಾಕಿ ಫರ್ಗ್ಯೂಸನ್‌ ಮಿಂಚಲೇಬೇಕು. ಮಾರ್ಕ್‌ರಮ್‌ ಅತ್ಯುತ್ತಮ ಲಯದಲ್ಲಿದ್ದು, ಅವರನ್ನು ನಿಯಂತ್ರಿಸುವುದು ಕಿವೀಸ್‌ ಮುಂದೆ ಇರಲಿರುವ ಮೊದಲ ಗುರಿ.

ಆಫ್‌ ಸ್ಪಿನ್‌ ವಿರುದ್ಧ ಮಾರ್ಕ್‌ರಮ್‌ ತಿಣುಕಾಡುವುದರಿಂದ ಕೋಲ್‌ ಮೆಕಾಂಚಿ ಪವರ್‌-ಪ್ಲೇನಲ್ಲಿ ಒಂದೆರಡು ಓವರ್‌ ಬೌಲ್‌ ಮಾಡಬಹುದು. ಅವರೇ ಇನ್ನಿಂಗ್ಸ್‌ನ ಮೊದಲ ಓವರ್‌ ಬೌಲ್‌ ಮಾಡಿದರೂ ಅಚ್ಚರಿಯಿಲ್ಲ. ಮಧ್ಯ ಓವರ್‌ಗಳಲ್ಲಿ ಮಿಚೆಲ್‌ ಸ್ಯಾಂಟ್ನರ್‌ ನಿರ್ಣಾಯಕ ಪಾತ್ರ ವಹಿಸಬೇಕಿದೆ. ಪ್ರಮುಖವಾಗಿ ಬ್ರೆವಿಸ್‌ ಹಾಗೂ ಸ್ಟಬ್ಸ್‌ರನ್ನು ಕಟ್ಟಿಹಾಕುವುದು ಸ್ಯಾಂಟ್ನರ್‌ ಕೈಯಲ್ಲೇ ಇರಲಿದೆ.

ಯಾನ್ಸನ್‌ ಟ್ರಂಪ್‌ಕಾರ್ಡ್‌: 

ನ್ಯೂಜಿಲೆಂಡ್‌ನ ಬ್ಯಾಟಿಂಗ್‌ ಲೈನ್‌ಅಪ್‌ ಕೂಡ ಸ್ಫೋಟಕ ಆಟಗಾರರನ್ನು ಹೊಂದಿದೆ. ಟಿಮ್‌ ಸೀಫರ್ಟ್‌, ಫಿನ್‌ ಆ್ಯಲೆನ್‌, ರಚಿನ್‌ ರವೀಂದ್ರ, ಮಾರ್ಕ್‌ ಚಾಪ್ಮನ್‌, ಗ್ಲೆನ್‌ ಫಿಲಿಪ್ಸ್‌, ಡ್ಯಾರಿಲ್‌ ಮಿಚೆಲ್‌ರಿಂದ ತಂಡ ಹೆಚ್ಚಿನ ಕೊಡುಗೆ ನಿರೀಕ್ಷೆ ಮಾಡಲಿದೆ. ಆದರೆ, ಇವರೆಲ್ಲರ ಬ್ಯಾಟ್‌ ಸದ್ದು ಮಾಡದಂತೆ ನೋಡಿಕೊಳ್ಳುವ ಚಾಕಚಕ್ಯತೆ ಎಡಗೈ ವೇಗಿ ಮಾರ್ಕೊ ಯಾನ್ಸನ್‌ಗಿದೆ. ಯಾನ್ಸನ್‌ಗೆ ಅವರ ಎತ್ತರವೇ ಲಾಭ.

ದಕ್ಷಿಣ ಆಫ್ರಿಕಾ ಈ ಪಂದ್ಯದಲ್ಲಿ ವಿಶೇಷವಾಗಿ ಏನೂ ಮಾಡಬೇಕಿಲ್ಲ. ಟೂರ್ನಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಅಳವಡಿಸಿಕೊಂಡಿದ್ದ ತಂತ್ರಗಳನ್ನೇ ಮತ್ತೆ ಪ್ರಯೋಗಿಸಿದರೆ ಸಾಕು. ಲುಂಗಿ ಎನ್‌ಗಿಡಿ ಹಾಗೂ ಕಗಿಸೋ ರಬಾಡರಿಂದ ಬೌಲಿಂಗ್‌ ಆರಂಭಿಸಿ, ಯಾನ್ಸನ್‌ರನ್ನು ಪವರ್‌-ಪ್ಲೇನಲ್ಲೇ ದಾಳಿಗಿಳಿಸಬೇಕು. ಮಧ್ಯ ಓವರ್‌ಗಳನ್ನು ಕೇಶವ್‌ ಮಹಾರಾಜ್‌ಗೆ ಬಿಟ್ಟುಕೊಟ್ಟು, ಡೆತ್‌ ಓವರ್‌ಗಳಲ್ಲಿ ಕಾರ್ಬಿನ್‌ ಬಾಷ್‌ಗೆ ವಹಿಸಿದರೆ, ಪಂದ್ಯದ ಮೇಲೆ ನಿಯಂತ್ರಣ ಸಾಧಿಸಬಹುದು.

ಸಂಭವನೀಯ ಆಟಗಾರರ ಪಟ್ಟಿ

ನ್ಯೂಜಿಲೆಂಡ್‌: ಸೀಫರ್ಟ್‌, ಆ್ಯಲೆನ್‌, ರವೀಂದ್ರ, ಫಿಲಿಪ್ಸ್‌, ಚಾಪ್ಮನ್‌, ಮಿಚೆಲ್‌, ಸ್ಯಾಂಟ್ನರ್‌(ನಾಯಕ), ಮೆಕಾಂಚಿ, ಹೆನ್ರಿ, ಸೋಧಿ, ಫರ್ಗ್ಯೂಸನ್‌.

ದ.ಆಫ್ರಿಕಾ: ಮಾರ್ಕ್‌ರಮ್‌ (ನಾಯಕ), ಡಿ ಕಾಕ್‌, ರಿಕೆಲ್ಟನ್‌, ಬ್ರೆವಿಸ್‌, ಮಿಲ್ಲರ್‌, ಸ್ಟಬ್ಸ್‌, ಯಾನ್ಸನ್‌, ಬಾಷ್‌, ರಬಾಡ, ಮಹಾರಾಜ್‌, ಎನ್‌ಗಿಡಿ

ಪಂದ್ಯ ಆರಂಭ: ಸಂಜೆ 7ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌/ಜಿಯೋ ಹಾಟ್‌ಸ್ಟಾರ್‌

ಪಿಚ್‌ ರಿಪೋರ್ಟ್‌

ಈಡನ್‌ ಗಾರ್ಡನ್ಸ್‌ನ ಬ್ಯಾಟರ್‌ಗಳ ಸ್ವರ್ಗ. ಸಂಜೆ ವೇಳೆ ಇಬ್ಬನಿ ಬೀಳುವ ಕಾರಣ, 2ನೇ ಇನ್ನಿಂಗ್ಸ್‌ನಲ್ಲಿ ಬೌಲ್‌, ಫೀಲ್ಡ್‌ ಮಾಡುವುದು ಸವಾಲು. ಹೀಗಾಗಿ, ಟಾಸ್‌ ನಿರ್ಣಾಯಕ. ಚೇಸ್‌ ಮಾಡುವ ತಂಡಕ್ಕೆ ಲಾಭ ಜಾಸ್ತಿ. ಮೊದಲು ಬ್ಯಾಟ್‌ ಮಾಡುವ ತಂಡ 225-230 ರನ್‌ ಗಳಿಸಿದರೂ ಸುರಕ್ಷಿತವಲ್ಲ.



Source link

Leave a Reply

Your email address will not be published. Required fields are marked *