ಬೆಂಗಳೂರು, ಮಾರ್ಚ್ 04: ನಭೋಮಂಡಲದಲ್ಲಿ ಅಪರೂಪದ ಖಗೋಳ ಕೌತುಕವಾಗಿ ರಕ್ತ ಚಂದ್ರಗ್ರಹಣ (ಚಂದ್ರಗ್ರಹಣ) ನಿನ್ನೆ ಸ್ಪಷ್ಟವಾಗಿ ಗೋಚರಿಸುತ್ತದೆ. ಭೂಮಿಯ ನೆರಳು ಚಂದ್ರನ ಮೇಲೆ ಸಂಪೂರ್ಣವಾಗಿ ಆವರಿಸಿದ ಪರಿಣಾಮ, ಬೆಳ್ಳಗೆ ಹೊಳೆಯುತ್ತಿದ್ದ ಚಂದ್ರನು ತಾಮ್ರದ ಕೆಂಪು ಬಣ್ಣದಲ್ಲಿ ಕಂಗೊಳಿಸುತ್ತಿತ್ತು. ಮಧ್ಯಾಹ್ನ 3 ಗಂಟೆ 13 ನಿಮಿಷಕ್ಕೆ ಆರಂಭವಾದ ವರ್ಷದ ಮೊದಲ ಕೇತುಗ್ರಸ್ತ ಚಂದ್ರಗ್ರಹಣ ಸಂಜೆ 6 ಗಂಟೆ 47 ನಿಮಿಷಕ್ಕೆ ಮೋಕ್ಷವಾಯಿತು. ಭಾರತಕ್ಕಿಂತ ಹೆಚ್ಚಾಗಿ ಅಮೆರಿಕದ ಕ್ಯಾಲಿಫೋರ್ನಿಯಾ, ಲಾಸ್ ಏಂಜೆಲಸ್ ಮತ್ತು ಮೆಕ್ಸಿಕೋ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬ್ಲಡ್ ಮೂನ್ ಸ್ಪಷ್ಟವಾಗಿ ಕಾಣಿಸಿಕೊಂಡಿದೆ.
ಗ್ರಹಣದ ಹಿನ್ನಲೆಯಲ್ಲಿ ರಾಜ್ಯದ ಅನೇಕ ದೇವಾಲಯಗಳು ತಾತ್ಕಾಲಿಕವಾಗಿ ಬಂದ್ ಆಗಿದ್ದವು. ಗ್ರಹಣ ಮೋಕ್ಷವಾಗುತ್ತಿದ್ದಂತೆ ದೇವಾಲಯಗಳಲ್ಲಿ ಶುದ್ಧೀಕರಣ ಮತ್ತು ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಉತ್ತರ ಕನ್ನಡ ಜಿಲ್ಲೆ ಗೋಕರ್ಣದಲ್ಲಿರುವ ಮಹಾಬಲೇಶ್ವರ ದೇವಾಲಯದಲ್ಲಿ ಶುಚಿತ್ವ ಕಾರ್ಯ ನಡೆಸಿ ಮಹಾಪೂಜೆ ನೆರವೇರಿಸಲಾಯಿತು. ಬೆಳಗಾವಿಯ ಕಪಿಲೇಶ್ವರ ದೇಗುಲದಲ್ಲಿ ಗಂಗಾಜಲ ಮತ್ತು ಗೋಮೂತ್ರದಿಂದ ಶುದ್ಧೀಕರಣ ಮಾಡಿ ಕ್ಷೀರಾಭಿಷೇಕ ಹಾಗೂ ಮಹಾಮಂಗಳಾರತಿ.
ಯಾವೆಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ?
ಕಲಬುರಗಿಯ ಶರಣ ಬಸವೇಶ್ವರ ದೇವಸ್ಥಾನದ ಭಾಗದ ಕಾರ್ಯದ ನಂತರ ಪೂಜಾ ವಿಧಿವಿಧಾನಗಳು ನಡೆದವು. ಶಿವಮೊಗ್ಗ ಜೆಪಿಎನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ದೇಗುಲದಲ್ಲಿ ಗ್ರಹಣಮೋಕ್ಷದ ಬಳಿಕ ಅಭಿಷೇಕ ಮತ್ತು ಗ್ರಹಣ ಶಾಂತಿ ಹೋಮ ನೆರವೇರಿತು. ದಾವಣಗೆರೆಯ ದುರ್ಗಾಂಬಿಕಾ ದೇವಾಲಯದಲ್ಲಿ ವಿಶೇಷ ಅಲಂಕಾರ ಪೂಜೆಗಳು ನಡೆದವು.
ಮೈಸೂರಿನ ದೇವರಾಜ ಮೊಹಲ್ಲಾದ ಅಮೃತೇಶ್ವರ ದೇವಾಲಯದಲ್ಲಿ ಶುದ್ಧೀಕರಣ ಮಾಡಿ ಗ್ರಹಣದೋಷ ಹೋಮ ನಡೆಸಲಾಯಿತು. ಹಾಸನದ ಪ್ರಸನ್ನ ಗಣಪತಿ ದೇವಾಲಯದಲ್ಲಿ ನವಗ್ರಹ ಶಾಂತಿ ಹಾಗೂ ಜಪತಪ ಹೋಮಗಳು ನೆರವೇರಿದವು. ಕೊಪ್ಪಳದ ಹುಲಿಗೆಮ್ಮ ದೇವಾಲಯದಲ್ಲೂ ವಿಶೇಷ ಅಲಂಕಾರ ಮತ್ತು ಪೂಜಾ ಕೈಂಕರ್ಯಗಳು ನಡೆದವು.
ಇದನ್ನೂ ಓದಿ ಮಹಾಕಾಳಿ ದೇವಸ್ಥಾನ: ಗ್ರಹಣ ಕಾಲದಲ್ಲಿ ಬೆಂಗಳೂರಿನ ಈ ಕಾಳಿ ದೇವಾಲಯದಲ್ಲಿ ನಡೆಯುತ್ತೆ ವಿಶೇಷ ಪೂಜೆ
ಬೆಂಗಳೂರಿನ ಪ್ರಾಚೀನ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಗ್ರಹಣದ ವೇಳೆ ಯಜ್ಞಕಾರ್ಯಗಳು ನೆರವೇರಿದ್ದು, ಮೋಕ್ಷದ ಬಳಿಕ ಶಿವಲಿಂಗಕ್ಕೆ ವಿಶೇಷ ಅಭಿಷೇಕ. ಗುಟ್ಟಹಳ್ಳಿಯ ಬಂಡೆ ಮಹಾಂಕಾಳಿ ದೇವಾಲಯದಲ್ಲಿ ಚಂದ್ರ ಹಾಗೂ ಕೇತು ಶಾಂತಿ ಹೋಮ, ಪೂರ್ಣಾಹುತಿ ಮತ್ತು ಕಳಸಾಭಿಷೇಕ ನೆರವೇರಿಸಲಾಯಿತು. ಸಾವಿರಾರು ಭಕ್ತರು ದರ್ಶನ ಪಡೆದರು. ಒಟ್ಟಾರೆ, ಗ್ರಹಣದ ನಂತರ ಎಲ್ಲಾ ಪ್ರಮುಖ ದೇವಾಲಯಗಳು ಭಕ್ತರಿಗೆ ತೆರೆಯಲ್ಪಟ್ಟಿದ್ದು, ಬೆಳಗ್ಗಿನಿಂದಲೇ ಶುದ್ಧೀಕರಣ ಮತ್ತು ಪೂಜಾ ಕಾರ್ಯಗಳು ಭಕ್ತಿಭಾವದಿಂದ ನಡೆಯುತ್ತಿವೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.