
ಮಲಯಾಳಂ ನಟಿ ರೆನೀಶಾ ರಹೀಮ್, ಮುಸ್ಲಿಂ ಸಮುದಾಯಕ್ಕೆ ಸೇರಿದ್ದರೂ ಕೇರಳದ ಪ್ರಸಿದ್ಧ ‘ಆಟ್ಟುಕಲ್ ಪೊಂಗಾಲ’ ಉತ್ಸವದಲ್ಲಿ ಭಾಗವಹಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾದಾಗ, ಅವರು ಟೀಕಾಕಾರರಿಗೆ ಖಡಕ್ ಉತ್ತರ ನೀಡಿ, ತಮಗೆ ಮತಾಂತರದ ಆಸೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಿರುವನಂತಪುರಂ (ಮಾ.4): ಕೇರಳದ ಪ್ರಸಿದ್ಧ ‘ಆಟ್ಟುಕಲ್ ಪೊಂಗಾಲ’ ಉತ್ಸವದಲ್ಲಿ ಭಾಗವಹಿಸಿ ಭಕ್ತಿ ಸಮರ್ಪಿಸಿದ ಮಲಯಾಳಂ ಕಿರುತೆರೆಯ ಜನಪ್ರಿಯ ನಟಿ ರೆನೀಶಾ ರಹೀಮ್ ಈಗ ಸುದ್ದಿಯಲ್ಲಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ರೆನೀಶಾ ಹಿಂದೂ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸಿದ್ದನ್ನು ಕಂಡು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಕಟುವಾಗಿ ಟೀಕಿಸಿದ್ದಾರೆ.
ಬಿಗ್ ಬಾಸ್ ಮಲಯಾಳಂ ಸೀಸನ್ 5 ರ ಸ್ಪರ್ಧಿಯಾಗಿ ಮನೆಮಾತಾಗಿದ್ದ ರೆನೀಶಾ ರಹೀಮ್, ಈ ಬಾರಿ ಮೊದಲ ಬಾರಿಗೆ ಆಟ್ಟುಕಲ್ ಭಗವತಿ ಅಮ್ಮನಿಗೆ ಪೊಂಗಾಲ ಅರ್ಪಿಸಿದ್ದಾರೆ. “ನನ್ನ ಮೊದಲ ಆಟ್ಟುಕಲ್ ಪೊಂಗಾಲ” ಎಂಬ ಶೀರ್ಷಿಕೆಯೊಂದಿಗೆ ಅವರು ಮನಮುಟ್ಟಿ ಪ್ರಾರ್ಥಿಸುತ್ತಿರುವ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, “ಈ ಪವಿತ್ರ ರಂಜಾನ್ ತಿಂಗಳಲ್ಲಿ ಉಪವಾಸವಿದ್ದು ಪೊಂಗಾಲ ಅರ್ಪಿಸಿದ ನಿಮಗೆ ಆಟ್ಟುಕಲ್ ಅಮ್ಮನ ಆಶೀರ್ವಾದವಿರಲಿ. ಇದೇ ಅಸಲಿ ಕೇರಳ ಸ್ಟೋರಿ” ಎಂದು ಶ್ಲಾಘಿಸಿದ್ದಾರೆ.
ಟೀಕಾಕಾರರಿಗೆ ರೆನೀಶಾ ನೀಡಿದ ಉತ್ತರಗಳೇನು?
ಪೋಸ್ಟ್ ಬೆನ್ನಲ್ಲೇ ಟೀಕೆಗಳ ಸುರಿಮಳೆಯೂ ಶುರುವಾಯಿತು. ಒಬ್ಬ ನೆಟ್ಟಿಗ “ಇದನ್ನೆಲ್ಲಾ ನಿಮ್ಮ ಧರ್ಮದವರು ಹೇಗೆ ಸಹಿಸಿಕೊಳ್ಳುತ್ತಾರೆ?” ಎಂದು ವ್ಯಂಗ್ಯವಾಡಿದಾಗ, ರೆನೀಶಾ “ಮತ್ತೊಬ್ಬರ ಅಭಿಪ್ರಾಯವನ್ನು ನಾನು ಯಾಕೆ ಗಮನಿಸಬೇಕು ಬ್ರೋ?” ಎಂದು ಖಡಕ್ ಆಗಿ ಪ್ರಶ್ನೆ ಮಾಡಿದ್ದಾರೆ.
ಇನ್ನೊಬ್ಬರು “ನೀವು ಮತಾಂತರ ಆಗಬಾರದೇ?” ಎಂದು ಪ್ರಶ್ನಿಸಿದ್ದಕ್ಕೆ, “ನನಗೆ ಮತಾಂತರವಾಗುವ ಆಸೆ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಸೀರಿಯಲ್‌ಗಳಲ್ಲಿ ಅವಕಾಶ ಸಿಗಲೆಂದೇ ಇವರು ಹೀಗೆ ಮಾಡುತ್ತಿದ್ದಾರೆ ಎಂಬ ಆರೋಪಗಳಿಗೂ ಉತ್ತರಿಸಿದ ಅವರು, “ಟೀಕಿಸುವವರು ಎಷ್ಟು ಬೇಕಾದರೂ ಹೇಳಲಿ, ನನಗೆ ಅಡ್ಡಿಯಿಲ್ಲ” ಎಂದು ಸವಾಲು ಹಾಕಿದ್ದಾರೆ. ಯಾರೇ ಭಕ್ತಿಯಿಂದ ಹೋದರೂ ಅಲ್ಲಿ ಏನೂ ಕೆಡುವುದಿಲ್ಲ ಎಂಬುದು ತಮ್ಮ ಅಚಲ ವಿಶ್ವಾಸ ಎಂದು ನಟಿ ಹೇಳಿದ್ದಾರೆ.