ಹಾಡು ಹಗಲಲ್ಲೇ 59 ಲಕ್ಷ ರೂ. ಮೌಲ್ಯದ ಬೆಳ್ಳಿ ಕಳ್ಳತನ; ಸಿಬ್ಬಂದಿಯಿಂದಲೇ ಕೃತ್ಯ!
ಹುಬ್ಬಳ್ಳಿ, ಮಾರ್ಚ್ 04: ಹಾಡ ಹಗಲೇ ಸುಮಾರು 59 ಲಕ್ಷ ರೂಪಾಯಿ ಮೌಲ್ಯದ 24 ಬೆಳ್ಳಿ ಆಭರಣಗಳನ್ನು ಕಳವು ಮಾಡಿರುವ ಘಟನೆ ಲ್ಯಾಮಿಂಗ್ಟನ್ ರಸ್ತೆಯಲ್ಲಿ (ಹುಬ್ಬಳ್ಳಿ) ನಡೆದಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಪ್ರಕರಣ ಸಂಬಂಧ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಅಂಗಡಿಯಲ್ಲಿಯೇ ಕೆಲಸ ಮಾಡುತ್ತಿರುವ ಯೋಗೀಶ್ ಹಾಗೂ ಆತನ ಗ್ಯಾಂಗ್ ಸೇರಿ ಈ ಕೃತ್ಯವೆಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಬೆಳ್ಳಿ ಆಭರಣಗಳನ್ನು ಕದ್ದು ಪರಾರಿಯಾಗಿರುವ ಆರೋಪಿ
ಬೆಂಗಳೂರು ಮೂಲದ ವ್ಯಾಪಾರಿ ಆಶಿಷ್ ಕುಮಾರ್ ಅವರಿಗೆ ಬೆಳ್ಳಿ ಆಭರಣಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಅಮೀತ್ ಪುರೋಹಿತ್ ಹಾಗೂ ಯೋಗೀಶ್ ಸಿಂಗ್ ಅವರಿಗೆ ನೀಡಲಾಯಿತು. ತೆಗೆದುಕೊಂಡ ಕಾರಿನಲ್ಲಿ ಒಟ್ಟು 29 ಕೆಜಿ ಬೆಳ್ಳಿ ಆಭರಣಗಳನ್ನು ನೀಡಿ ಚಿತ್ರದುರ್ಗ ಹಾಗೂ ದಾವಣಗೆರೆಯಲ್ಲಿ ಮಾರಾಟ ಮಾಡಲು ಸೂಚಿಸಿದ್ದರು. ಅದರಲ್ಲಿ 3.167 ಕೆಜಿ ಆಭರಣಗಳನ್ನು ಮಾರಾಟ ಮಾಡಿದ್ದರೆ, ಉಳಿದ 24.760 ಕೆಜಿ ಆಭರಣಗಳನ್ನು ಮಾರಾಟ ಮಾಡಲು ಆರೋಪಿಗಳು ಹುಬ್ಬಳ್ಳಿಗೆ ಬಂದಿದ್ದರು.
ಫೆಬ್ರವರಿ 28 ರಂದು ಲ್ಯಾಮಿಂಗ್ಟನ್ ರಸ್ತೆಯಲ್ಲಿ ಕಾರು ನಿಲ್ಲಿಸಿ ಸಮೀಪದ ಆಭರಣ ಅಂಗಡಿಗೆ ತೆರಳಿದ ವೇಳೆ, ಕಾರಿನಲ್ಲಿ ಇದ್ದ ಎರಡು ಬ್ಯಾಗ್‌ಗಳಲ್ಲಿ ಕಾಲ್ಗೆಜ್ಜೆ, ಕತ್ತಿನ ಚೈನ್, ಬ್ರಾಸ್‌ಲೆಟ್, ಕೈಕಡಗ ಸೇರಿದಂತೆ ವಿವಿಧ ಬೆಳ್ಳಿ ಆಭರಣಗಳನ್ನು ಆರೋಪಿಗಳು ಗಮನಿಸಿದ್ದರು. ಈ ವೇಳೆ ಯೋಗೀಶ್ ಸಿಂಗ್ ಕಾರಿನ ಕೀಲಿಯನ್ನು ಪಡೆದು ಕಾರನ್ನು ಲಾಕ್ ಮಾಡಿ, ಬೆಳ್ಳಿ ಆಭರಣಗಳಿದ್ದು ಎರಡು ಬ್ಯಾಗ್‌ಗಳನ್ನು ಕದ್ದು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ಸಂಬಂಧ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.