ಇಸ್ಲಾಮಾಬಾದ್, ಮಾರ್ಚ್ 4: ಸೌದಿ ಅರೇಬಿಯಾ ಮೇಲೆ ದಾಳಿ ಮಾಡಿದರೆ ನಾವು ಸುಮ್ಮನಿರಲ್ಲ ಎಂದು ಇರಾನ್‌ಗೆ ಪಾಕಿಸ್ತಾನದ ಎಚ್ಚರಿಕೆ ಸಂದೇಶ ರವಾನಿಸಿದೆ. ಸೌದಿ ಅರೇಬಿಯಾ ಜೊತೆ ಪಾಕಿಸ್ತಾನ ಮಿಲಿಟರಿ ಒಪ್ಪಂದ (ಪಾಕಿಸ್ತಾನ ಸೌದಿ ಅರೇಬಿಯಾ ದ್ವಿಪಕ್ಷೀಯ ರಕ್ಷಣಾ ಒಪ್ಪಂದ) ಹೊಂದಿದೆ. ಈ ಒಪ್ಪಂದದ ಪ್ರಕಾರ ಈ ಇಬ್ಬರಲ್ಲಿ ಯಾರ ಮೇಲೆ ಆಕ್ರಮಣವಾದರೂ ಮತ್ತೊಬ್ಬರು ನೆರವಿಗೆ ಧಾವಿಸಬೇಕು. ಈಗ ಸೌದಿ ಅರೇಬಿಯಾದ ಪ್ರಮುಖ ನಗರಗಳ ಮೇಲೆ ಇರಾನ್ ದಾಳಿ ಎಸಗುತ್ತ ಪಾಕಿಸ್ತಾನವು ಒಪ್ಪಂದದ ಕಟ್ಟುಪಾಡುಗಳಿಗೆ ಒಳಗಾಗಬಹುದು. ಹೀಗಾಗಿ, ಇರಾನ್‌ಗೆ ಪಾಕಿಸ್ತಾನ ಎಚ್ಚರಿಕೆ ನೀಡಿದೆ.
ಸೌದಿ ಅರೇಬಿಯಾ ಜೊತೆ ಪಾಕಿಸ್ತಾನ ದ್ವಿಪಕ್ಷೀಯ ರಕ್ಷಣಾ ಒಪ್ಪಂದವಿದೆ. ಇದು ಇಡೀ ವಿಶ್ವಕ್ಕೆ ಗೊತ್ತಿದೆ. ಒಪ್ಪಂದಕ್ಕೆ ಪಾಕಿಸ್ತಾನ ಕಟ್ಟುಬಿದ್ದಿದೆ. ಈ ಒಪ್ಪಂದವು ಇರಾನ್ ಗಮನಕ್ಕಿರಬೇಕು. ಇರಾನ್ ನಾಯಕತ್ವ ಸ್ಥಾನದಲ್ಲಿರುವ ನಮ್ಮ ಸಹೋದರರಿಗೆ ಇದನ್ನು ನೆನಪಿಸಲು ಇಚ್ಛಿಸುತ್ತೇನೆ ಎಂದು ಪಾಕಿಸ್ತಾನದ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದರ್ ಹೇಳಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ಮೇಲಿನ ದ್ವೇಷದಿಂದ ಭಾರತ, ಇರಾನ್, ಅಫ್ಘಾನ್ ಒಂದಾಗಿ ಸಂಚು; ಖವಾಜಾ ಆಸಿಫ್ ಆರೋಪ
ಸೌದಿ ಅರೇಬಿಯಾದಲ್ಲಿ ಇಸ್ಲಾಂ ಧರ್ಮದ ಆತ್ಮ ಇದೆ. ಮೆಕ್ಕಾ ಮಸೀದಿ ಮತ್ತು ಮದೀನಾದಲ್ಲಿ ಪ್ರವಾದಿಗಳ ಮಸೀದಿ ಇರುವುದು ಸೌದಿಯಲ್ಲೇ. ಇಸ್ಲಾಂ ಧರ್ಮ ಹುಟ್ಟಿದ್ದೂ ಇಲ್ಲೇ. ತನಗೆ ಈ ಧಾರ್ಮಿಕ ಸ್ಥಳದ ರಕ್ಷಣೆಯೇ ಮೊದಲ ಆದ್ಯತೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಪ್ರತಿಯೊಂದು ವೇದಿಕೆಯಲ್ಲೂ, ಪ್ರತಿಯೊಂದು ಕ್ಷೇತ್ರದಲ್ಲೂ ಸೌದಿ ಅರೇಬಿಯಾಗೆ ಬೆಂಬಲವಾಗಿ ನಿಂತಿದೆ ಎಂದೂ ಪಾಕಿಸ್ತಾನ ಹೇಳುತ್ತಿದೆ.
ಪಾಕಿಸ್ತಾನದ ವಿರುದ್ಧ ಭಾರತ, ಅಫ್ಗಾನ್ ಮತ್ತು ಇರಾನ್ ಅನ್ನು ಛೂಬಿಡುವ ಪಿತೂರಿ: ಖವಾಜ ಆಸಿಫ್
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜ ಆಸಿಫ್ ಸ್ಫೋಟಕ ಆರೋಪ ಮಾಡಿದ್ದಾರೆ. ಇರಾನ್‌ನಲ್ಲಿ ಆಡಳಿತ ಬದಲಾವಣೆ ಮಾಡುತ್ತಿರುವುದು ಪಾಕಿಸ್ತಾನವನ್ನು ಸಾಮಂತ ನಾಡನ್ನಾಗಿ ಮಾಡಲು ಝಯೋನಿಸ್ಟರು (ಇಸ್ರೇಲಿಗರು) ಮಾಡಿರುವ ಪಿತೂರಿ ಎಂದು ಸಚಿವರು ಆಪಾದಿಸಿದ್ದಾರೆ.
ಇದನ್ನೂ ಓದಿ: ಹಾರ್ಮುಜ್ ಮಾರ್ಗದಲ್ಲಿ ಚೀನಾಗೆ ಮಾತ್ರ ಅವಕಾಶ ಎಂದ ಇರಾನ್; ಭಾರತಕ್ಕೆ ನಾವು ತೈಲ ಕೊಡುತ್ತೇವೆ ಎಂದ ರಷ್ಯಾ
ಇರಾನ್‌ನಲ್ಲಿ ಆಡಳಿತ ಬದಲಾದರೆ ಇರಾನ್, ಅಫ್ಗಾನಿಸ್ತಾನ್ ಮತ್ತು ಭಾರತದ ಮೂಲಕ ಪಾಕಿಸ್ತಾನಕ್ಕೆ ತೊಂದರೆ ಕೊಡುವ ಸಂಚು ನಡೆದಿದೆ. ಪಾಕಿಸ್ತಾನದ 25 ಕೋಟಿ ಜನರು ಈ ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು. ಶತ್ರುಗಳ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಆಸಿಫ್ ಖವಾಜ ಕರೆ ನೀಡಿದ್ದಾರೆ.
ಹೆಚ್ಚಿನ ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ