
ವೆಸ್ಟ್ ಇಂಡೀಸ್ ವಿರುದ್ಧ ಅಬ್ಬರಿಸಿದ ಸಂಜು ಸ್ಯಾಮ್ಸನ್‌ಗೆ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಕಠಿಣ ಸವಾಲು ಎದುರಾಗಲಿದೆ. ಫಾಫ್ ಡು ಪ್ಲೆಸಿಸ್ ಪ್ರಕಾರ, ವೇಗದ ಶಾರ್ಟ್ ಬಾಲ್‌ಗಳು ಸಂಜು ಅವರ ದೌರ್ಬಲ್ಯವಾಗಿದ್ದು, ಆರ್ಚರ್ ಈ ಅಸ್ತ್ರವನ್ನು ಬಳಸಿ ಅವರನ್ನು ಕಟ್ಟಿಹಾಕಲು ಇಂಗ್ಲೆಂಡ್ ಸಜ್ಜಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಅಜೇಯ 97 ರನ್ ಸಿಡಿಸಿದ ಸಂಜು ಸ್ಯಾಮ್ಸನ್ ಅವರ ಮೇಲೆ ಎಲ್ಲರ ಕಣ್ಣಿದೆ. ಟೂರ್ನಿಯ ಆರಂಭದಲ್ಲಿ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗಿದ್ದ ಸಂಜು, ಸಿಕ್ಕ ಸುವರ್ಣಾವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡು ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಆದರೆ, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ಗೂ ಮುನ್ನ, ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್, ಸಂಜು ಬ್ಯಾಟಿಂಗ್‌ನಲ್ಲಿರುವ ಒಂದು ವೀಕ್‌ನೆಸ್ ಬಗ್ಗೆ ಮಾತಾಡಿದ್ದಾರೆ.
ಮಿಡ್-ವಿಕೆಟ್ ಕಡೆ ಸಂಜು ತುಂಬಾ ಸ್ಟ್ರಾಂಗ್ ಆಗಿದ್ದರೂ, ಗಂಟೆಗೆ 140 ಕಿ.ಮೀ.ಗಿಂತ ಹೆಚ್ಚು ವೇಗದ ಶಾರ್ಟ್ ಬಾಲ್‌ಗಳು ಅವರಿಗೆ ಸವಾಲಾಗಿವೆ ಅಂತ ಡು ಪ್ಲೆಸಿಸ್ ಅಭಿಪ್ರಾಯಪಟ್ಟಿದ್ದಾರೆ. “ಸಂಜು ಮೇಲೆ ಅಟ್ಯಾಕ್ ಮಾಡೋಕೆ ಇರೋ ಒಂದೇ ಏರಿಯಾ ಅಂದ್ರೆ ಅದು ಶಾರ್ಟ್ ಬಾಲ್‌ಗಳು, ಅದೂ ಒಳ್ಳೆ ವೇಗದಲ್ಲಿ. ಸಂಜು ಬ್ಯಾಟ್‌ಸ್ವಿಂಗ್ ತುಂಬಾ ಚೆನ್ನಾಗಿರೋದ್ರಿಂದ, ದೇಹದ ಕಡೆಗೆ ಬರೋ ಬಾಲ್‌ಗಳನ್ನ ಚೆನ್ನಾಗಿ ಆಡ್ತಾರೆ. ಆದರೆ, 140 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಬರೋ ನಿಖರವಾದ ಶಾರ್ಟ್ ಬಾಲ್‌ಗಳು ಅವರ ‘ವೀಕ್‌ನೆಸ್’. ಇಂಗ್ಲೆಂಡ್ ತಂಡಕ್ಕೆ ಇದರ ಬಗ್ಗೆ ಐಡಿಯಾ ಇದೆ. ಇದನ್ನ ಹೇಗೆ ಬಳಸಬೇಕು ಅಂತ ಅವರಿಗೆ ಚೆನ್ನಾಗಿ ಗೊತ್ತು,” ಎಂದು ಡು ಪ್ಲೆಸಿಸ್ ಅಭಿಪ್ರಾಯಪಟ್ಟಿದ್ದಾರೆ.
ಆರ್ಚರ್ ಎದುರಿಸಲು ಪ್ಲಾನ್ ಬೇಕು
ಸೂಪರ್ 8 ಹಂತದಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಬ್ಲೆಸ್ಸಿಂಗ್ ಮುಜರಬಾನಿ ಹಾಕಿದ ಶಾರ್ಟ್ ಬಾಲ್‌ಗೆ ಸಂಜು ಔಟ್ ಆಗಿದ್ದನ್ನು ಡು ಪ್ಲೆಸಿಸ್ ಉದಾಹರಣೆಯಾಗಿ ಕೊಟ್ಟಿದ್ದಾರೆ. ಇಂಗ್ಲೆಂಡ್‌ನ ಜೋಫ್ರಾ ಆರ್ಚರ್ ಅವರಂತಹ ವೇಗದ ಬೌಲರ್‌ಗಳನ್ನು ಎದುರಿಸುವಾಗ ಸಂಜುಗೆ ಒಂದು ಸರಿಯಾದ ಪ್ಲಾನ್ ಬೇಕು ಅಂತಾನೂ ಅವರು ನೆನಪಿಸಿದ್ದಾರೆ. “ತನ್ನತ್ತ ಶಾರ್ಟ್ ಬಾಲ್‌ಗಳೇ ಬರುತ್ತವೆ ಅಂತ ಸಂಜುಗೆ ಗೊತ್ತಿರುತ್ತೆ. ಆರ್ಚರ್ ಆ ರೀತಿ ಬಾಲ್ ಹಾಕಿದಾಗ ಹೇಗೆ ಡಿಫೆಂಡ್ ಮಾಡಬೇಕು, ಅಥವಾ ಹೇಗೆ ರನ್ ಗಳಿಸಬೇಕು ಅಂತ ಸಂಜು ಮೊದಲೇ ನಿರ್ಧರಿಸಬೇಕು. ಆ ಬಾಲ್‌ಗಳನ್ನ ಅಟ್ಯಾಕ್ ಮಾಡಬೇಕಾ ಅಥವಾ ಬೇರೆ ಬೌಲರ್‌ಗಳನ್ನ ಟಾರ್ಗೆಟ್ ಮಾಡಬೇಕಾ ಅನ್ನೋದು ಅವರ ನಿರ್ಧಾರ,” ಎಂದು ಸಂಜು ಹೇಳಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ತಮ್ಮ ‘ಕೆರಿಯರ್ ಡಿಫೈನಿಂಗ್ ಇನ್ನಿಂಗ್ಸ್’ ಆಡಿದ ಆತ್ಮವಿಶ್ವಾಸದಲ್ಲಿ ಸಂಜು ಇಂಗ್ಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದ್ದಾರೆ. ಡು ಪ್ಲೆಸಿಸ್ ಹೇಳಿದ ಈ ಸವಾಲನ್ನು ಸಂಜು ಹೇಗೆ ಮೆಟ್ಟಿ ನಿಲ್ಲುತ್ತಾರೆ ಅಂತ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಸಂಜು ಸ್ಯಾಮ್ಸನ್ ಕಟ್ಟಿಹಾಕಲು ಇಂಗ್ಲೆಂಡ್ ಬ್ರಹ್ಮಾಸ್ತ್ರ
ವೆಸ್ಟ್ ಇಂಡೀಸ್ ಎದುರು ಮಿಂಚಿನ ಆಟ ಪ್ರದರ್ಶಿಸಿದ ಸಂಜು ಸ್ಯಾಮ್ಸನ್ ಮೇಲೆ ಎಲ್ಲರ ಕಣ್ಣಿದೆ. ಇದೀಗ ಇಂಗ್ಲೆಂಡ್ ತಂಡದಲ್ಲಿ ಸಂಜುಗಾಗಿ ಒಂದು ಅಪಾಯಕಾರಿ ಅಸ್ತ್ರ ಕಾದಿದೆ. ಅದುವೇ ವೇಗದ ಬೌಲರ್ ಜೋಫ್ರಾ ಆರ್ಚರ್. ಕಳೆದ ವರ್ಷ ಭಾರತ ವಿರುದ್ಧ ನಡೆದ ಐದು ಟಿ20 ಪಂದ್ಯಗಳಲ್ಲಿ, ಆರ್ಚರ್ ಮೂರು ಬಾರಿ ಸಂಜು ವಿಕೆಟ್ ಪಡೆದಿದ್ದರು. ಅದರಲ್ಲೂ ಹೆಚ್ಚಾಗಿ ಶಾರ್ಟ್ ಬಾಲ್‌ಗಳಲ್ಲೇ ಸಂಜು ವಿಕೆಟ್ ಒಪ್ಪಿಸಿದ್ದರು. ಇದೇ ಸರಣಿಯಲ್ಲಿ ಸಾಕಿಬ್ ಮಹಮೂದ್ ಮತ್ತು ಮಾರ್ಕ್ ವುಡ್ ಕೂಡ ಶಾರ್ಟ್ ಬಾಲ್ ಹಾಕಿ ಸಂಜು ಅವರನ್ನು ಔಟ್ ಮಾಡಿದ್ದರು.
ಈ ಕಾರಣಕ್ಕಾಗಿಯೇ, ಸೆಮಿಫೈನಲ್‌ಗೂ ಮುನ್ನ ಸಂಜು ನೆಟ್ಸ್‌ನಲ್ಲಿ ಹೆಚ್ಚು ಹೊತ್ತು ಶಾರ್ಟ್ ಬಾಲ್‌ಗಳನ್ನು ಎದುರಿಸಿ ಬ್ಯಾಟಿಂಗ್ ಅಭ್ಯಾಸ ಮಾಡಿದ್ದಾರೆ. ಇಂಗ್ಲೆಂಡ್ ಮತ್ತು ಆರ್ಚರ್, ಸಂಜು ಅವರ ಈ ದೌರ್ಬಲ್ಯವನ್ನು ಬಳಸಿಕೊಂಡು ಶಾರ್ಟ್ ಬಾಲ್‌ಗಳನ್ನೇ ಅಸ್ತ್ರವಾಗಿಸಿಕೊಳ್ಳುತ್ತಾರೆ ಎಂದು ಮಾಜಿ ಆಟಗಾರ ಚೇತೇಶ್ವರ್ ಪೂಜಾರ ಎಚ್ಚರಿಸಿದ್ದಾರೆ. ಆರ್ಚರ್ ಬೌಲಿಂಗ್‌ನಲ್ಲಿ ಲೆಗ್ ಸೈಡ್‌ಗೆ ಹೊಡೆಯುವುದನ್ನು ಬಿಟ್ಟು, ಅಭಿಷೇಕ್ ಶರ್ಮಾಗೆ ಸ್ಟ್ರೈಕ್ ಕೊಡುವುದು ಉತ್ತಮ ಎಂದು ಪೂಜಾರ ಸಲಹೆ ನೀಡಿದ್ದಾರೆ. ವಾಂಖೆಡೆ ಮೈದಾನದಲ್ಲಿ ಸಂಜು, ಆರ್ಚರ್ ಮತ್ತು ಬಳಗದ ಮೇಲೆ ಸವಾರಿ ಮಾಡುತ್ತಾರಾ ಅಥವಾ ಇಂಗ್ಲೆಂಡ್‌ನ ಬಲೆಗೆ ಬೀಳುತ್ತಾರಾ ಎಂದು ಕಾದು ನೋಡಬೇಕು.